ಮೋದಿ ಭಾಷಣದ ಸಂಪೂರ್ಣ ವಿವರ.. ಚೀನಾಗೆ ವಾರ್ನಿಂಗ್ ಕೊಟ್ಟ ‘ನಮೋ’

masthmagaa.com:

ಭಾರತ-ಚೀನಾ ನಡುವೆ ಸಂಘರ್ಷ ನಡೆದ ಬೆನ್ನಲ್ಲೇ ಇವತ್ತು ಲಡಾಖ್​ನ ನಿಮೂ ಫಾರ್ವರ್ಡ್ ಪೋಸ್ಟ್​ಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ, ಯೋಧರನ್ನು ಉದ್ದೇಶಿಸಿ ಮಾತನಾಡಿದ್ರು. ಜೊತೆಗೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರೋ ಚೀನಾಗೆ ವಾರ್ನಿಂಗ್ ಕೂಡ ಕೊಟ್ಟಿದ್ದಾರೆ. ವಿಸ್ತಾರವಾದದಿಂದ ಗೆಲುವು ಸಾಧ್ಯವಿಲ್ಲ. ಇಡೀ ವಿಶ್ವವೇ ಅದರ ವಿರುದ್ಧವಾಗಿದೆ ಅಂತ ಚೀನಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು. ಪ್ರಧಾನಿ ಮೋದಿ ಭಾಷಣದ ವಿವರ ಇಲ್ಲಿದೆ ನೋಡಿ.

  • ನಿಮ್ಮ ಶೌರ್ಯ ಮತ್ತು ಭಾರತ ಮಾತೆಯ ಗೌರವ ರಕ್ಷಣೆಗಾಗಿ ನಿಮ್ಮ ಸಮರ್ಪಣೆ ಬೆಲೆ ಕಟ್ಟಲಾಗದಂತಹದ್ದು. ಕಠಿಣ ಸಂದರ್ಭದಲ್ಲಿ, ಎತ್ತರದ ಪ್ರದೇಶದಲ್ಲಿ ಭಾರತ ಮಾತೆಯ ನಾಡಿಮಿಡಿತವಾಗಿ ನಿಂತು ರಕ್ಷಣೆ ಮಾಡುತ್ತಿದ್ದೀರಿ. ಭಾರತ ಮಾತೆಯ ಸೇವೆ ಮಾಡುತ್ತಿದ್ದೀರಿ. ಇದನ್ನ ಇಡೀ ವಿಶ್ವದಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ.
  • ನೀವು ನಿಯೋಜನೆಗೊಂಡಿರುವ ಎತ್ತರಕ್ಕಿಂತ ನಿಮ್ಮ ಸಾಹಸವು ಎತ್ತರವಾಗಿದೆ. ನಿಮ್ಮ ನಿಶ್ಚಿತತೆಯು ಕಣಿವೆಗಿಂತ ಕಟ್ಟುನಿಟ್ಟಾಗಿದೆ. ನಿಮ್ಮ ಭುಜವು ಬಂಡೆಗಳಿಗಿಂತ ಗಟ್ಟಿಯಾಗಿದೆ. ನಿಮ್ಮ ಇಚ್ಛಾಶಕ್ತಿಯು ಅಕ್ಕಪಕ್ಕದ ಪರ್ವತಗಳಿಗಿಂತ ದೃಢವಾಗಿದೆ. ಇವತ್ತು ನಿಮ್ಮ ಬಳಿಗೆ ಬಂದ ನಂತರ ನಾನು ಇದನ್ನನೋಡುತ್ತಿದ್ದೇನೆ.
  • ದೇಶದ ರಕ್ಷಣೆ ನಿಮ್ಮ ಕೈಯಲ್ಲಿರುವಾಗ ಇಡೀ ದೇಶಕ್ಕೆ ನಿಮ್ಮ ಮೇಲೆ ವಿಶ್ವಾಸವಿದೆ. ಇಡೀ ದೇಶ ನಿಶ್ಚಿಂತವಾಗಿದೆ. ನಿಮ್ಮ ತ್ಯಾಗ, ಬಲಿದಾನದಿಂದ ಆತ್ಮ ನಿರ್ಭರ್ ಭಾರತದ ಸಂಕಲ್ಪ ಮತ್ತಷ್ಟು ಬಲಶಾಲಿಯಾಗುತ್ತಿದೆ. ನಿಮ್ಮ ಸ್ನೇಹಿತರ ಶೌರ್ಯ ಇಡೀ ವಿಶ್ವಕ್ಕೆ ಭಾರತದ ತಾಕತ್ತು ಏನು ಅನ್ನೋದನ್ನ ತೋರಿಸಿಕೊಟ್ಟಿದೆ. ನಿಮ್ಮ ಮಧ್ಯೆ ಮಹಿಳಾ ಯೋಧರು ಕೂಡ ಇದ್ದಾರೆ. ಇದು ಎಲ್ಲರಿಗೂ ಪ್ರೇರಣೆ ನೀಡುತ್ತದೆ.
  • ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಯೋಧರಿಗೆ ನಾನು ಮತ್ತೊಮ್ಮೆ ಶ್ರದ್ದಾಂಜಲಿ ಅರ್ಪಿಸುತ್ತೇನೆ. ಇವರು ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದಲ್ಲಿ ತಮ್ಮ ಶೌರ್ಯವನ್ನು ತೋರಿಸಿದ್ರು. ಇವರ ಸಾಹಸದ ಬಗ್ಗೆ ಇಡೀ ದೇಶಕ್ಕೆ ಹೆಮ್ಮೆ ಇದೆ. ಇವತ್ತು ದೇಶದ ಜನತೆ ತಲೆ ಬಾಗಿ ನಿಮ್ಮನ್ನು ನಮಿಸುತ್ತದೆ. ಪ್ರತಿಯೊಬ್ಬರ ಎದೆಯು ನಿಮ್ಮ ಶೌರ್ಯ ಮತ್ತು ಪರಾಕ್ರಮದಿಂದ ಅರಳಿದೆ.
  • ಸಿಂದೂ ನದಿಯ ಆಶೀರ್ವಾದದಿಂದ ಈ ಭೂಮಿ ಪುಣ್ಯವಾಗಿದೆ. ಲೇಹ್-ಲಡಾಖ್​ನಿಂದ ಹಿಡಿದು ಕಾರ್ಗಿಲ್, ಸಿಯಾಚಿನ್, ಗಾಲ್ವಾನ್ ಕಣಿವೆವರೆಗೆ ಎಲ್ಲಾ ಪರ್ವತ, ನದಿ, ಬೆಟ್ಟ, ಗುಡ್ಡಗಳು ಭಾರತೀಯ ಯೋಧರ ಪರಾಕ್ರಮದ ಬಗ್ಗೆ ಪುರಾವೆ ನೀಡುತ್ತವೆ. ಇಡೀ ವಿಶ್ವ ನಿಮ್ಮಅದಮ್ಯ ಸಾಹಸವನ್ನು ನೋಡಿದೆ. ನಿಮ್ಮ ಸಾಹಸಗಾಥೆಗಳು ಪ್ರತಿ ಮನೆಯಲ್ಲೂ ಪ್ರತಿಧ್ವನಿಸುತ್ತಿದೆ.
  • ಲಡಾಖ್​ ಪ್ರದೇಶವು ಭಾರತದ ಶಿರ ಇದ್ದಂತೆ. ಇದು 130 ಕೋಟಿ ಭಾರತೀಯರ ಗೌರವದ ಪ್ರತೀಕ. ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧರಿರುವ ರಾಷ್ಟ್ರ ಭಕ್ತರ ನೆಲ. ಈ ನೆಲ ಮಹಾನ್ ರಾಷ್ಟ್ರ ಭಕ್ತರನ್ನು ದೇಶಕ್ಕೆ ನೀಡಿದೆ. ದೇಶವನ್ನು ಬಲಶಾಲಿಗಳಿಸಲು ಲಡಾಖ್​ನ ಜನತೆ ಕೂಡ ಸಹಕರಿಸಿದ್ದಾರೆ. ನಮ್ಮ ಸಮಾರ್ಥ್ಯ ಮತ್ತು ಸಂಕಲ್ಪ ಹಿಮಾಲಯ ಪರ್ವತದಷ್ಟೇ ಎತ್ತರವಾಗಿದೆ. ಅದನ್ನು ನಾನು ನಿಮ್ಮ ಕಣ್ಣಿನಲ್ಲಿ ನೋಡುತ್ತಿದ್ದೇನೆ.
  • ಕೊಳಲನ್ನು ಹಿಡಿದಿರೋ ಕೃಷ್ಣನನ್ನು ನಾವು ಪೂಜೆ ಮಾಡುತ್ತೇವೆ. ಅದೇ ರೀತಿ ಸುದರ್ಶನ ಚಕ್ರವನ್ನು ಹಿಡಿದುಕೊಂಡಿರೋ ಕೃಷ್ಣನನ್ನು ಕೂಡ ಆದರ್ಶ ಅಂತ ಭಾವಿಸುತ್ತೇವೆ. ಇದರಿಂದಲೇ ಪ್ರತಿಯೊಂದು ಆಕ್ರಮಣದ ನಂತರವೂ ಭಾರತ ಶಕ್ತಿಯುತವಾಗಿ ಬೆಳೆಯುತ್ತಿದೆ.
  • ಮನುಕುಲದ ಪ್ರಗತಿಗೆ ಶಾಂತಿ ಮತ್ತು ಸ್ನೇಹ ಅವಶ್ಯಕ ಅಂತ ಎಲ್ಲಾ ದೇಶಗಳು ಬಯಸುತ್ತವೆ, ಒಪ್ಪುತ್ತವೆ. ಆದ್ರೆ ಶಾಂತಿ ಯಾವತ್ತೂ ದುರ್ಬಲತೆಯ ಸಂಕೇತವಲ್ಲ. ಶೌರ್ಯವೇ ಶಾಂತಿಯ ಪೂರ್ವ ಷರತ್ತು ಆಗಿರುತ್ತದೆ.
  • ಭಾರತ ಇವತ್ತು ಭೂಸೇನೆ, ವಾಯುಸೇನೆ, ನೌಕಾಸೇನೆಯಲ್ಲಿ ತನ್ನ ಶಕ್ತಿಯನ್ನ ಹೆಚ್ಚಿಸುತ್ತಿದೆ ಅಂದ್ರೆ ಅದರ ಹಿಂದಿನ ಉದ್ದೇಶ ಮಾನವ ಕಲ್ಯಾಣವೇ ಆಗಿದೆ. ಭಾರತ ಇವತ್ತು ಆಧುನಿಕ ಶಸ್ತ್ರಾಸ್ತ್ರವನ್ನು ನಿರ್ಮಾಣ ಮಾಡುತ್ತಿದೆ. ಬೇರೆ ದೇಶಗಳಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ತರಿಸುತ್ತಿದೆ ಅಂದ್ರೆ ಅದರ ಉದ್ದೇಶ ಕೂಡ ಇದೇ.
  • ವಿಶ್ವ ಯುದ್ಧಇರಲಿ ಅಥವಾ ಶಾಂತಿ ಮಾತುಕತೆ ಇರಲಿ, ಅವಶ್ಯಕತೆ ಇದ್ದಾಗ ವಿಶ್ವವು ಭಾರತೀಯ ವೀರ ಯೋಧರ ಪರಾಕ್ರಮವನ್ನು ನೋಡಿದೆ. ವಿಶ್ವ ಶಾಂತಿಗಾಗಿ ಅವರ ಪ್ರಯತ್ನವನ್ನು ಕೂಡ ಅನುಭವಿಸಿದೆ. ನಾವು ಸದಾ ಮಾನವೀಯತೆಯ ರಕ್ಷಣೆಗೆ ಕೆಲಸ ಮಾಡಿದ್ದೇವೆ. ನೀವೆಲ್ಲರೂ ಭಾರತದ ಈ ಪರಂಪರೆಯನ್ನ, ಈ ಮಹಾನ್ ಸಂಸ್ಕೃತಿಯನ್ನ ಸ್ಥಾಪಿಸಬೇಕು.
  • ವಿಸ್ತಾರವಾದದ ಯುಗ ಅಂತ್ಯವಾಗಿದೆ. ಇದು ವಿಕಾಸವಾದದ ಯುಗ. ವಿಕಾಸವಾದವೇ ಭವಿಷ್ಯದ ಆಧಾರ. ಹಿಂದಿನ ಶತಮಾನಗಳಲ್ಲಿ ವಿಸ್ತಾರವಾದವು ಮಾನವೀಯತೆಯ ವಿನಾಶ ಮಾಡಲು ಪ್ರಯತ್ನ ಮಾಡಿತು. ವಿಸ್ತಾರವಾದದ ಗೆಲುವು ಯಾರದ್ದಾದ್ರೂ ಮೇಲೆ ಸವಾರಿ ಮಾಡಿದ್ರೆ ಅವರು ವಿಶ್ವ ಶಾಂತಿಗೆ ಅಪಾಯ ಒಡ್ಡಿದ್ದಾರೆ ಅಂತ ಅರ್ಥ. ಇಂತಹ ಶಕ್ತಿಗಳು ನಾಶವಾಗಿವೆ. ವಿಶ್ವದಲ್ಲಿ ಯಾವಾಗಲೂ ಇದೇ ನಡೆದಿದ್ದು. ಇದರ ಅನುಭವದಲ್ಲೇ ಇಡೀ ವಿಶ್ವ ವಿಸ್ತಾರವಾದದ ವಿರುದ್ಧ ಮನಸು ಮಾಡಿದೆ. ಇವತ್ತು ವಿಶ್ವವು ವಿಕಾಸವಾದಕ್ಕೆ ಸಮರ್ಪಿತವಾಗಿದೆ. ವಿಕಾಸವಾದನ್ನು ಸ್ವಾಗತಿಸುತ್ತಿದೆ.
  • ರಾಷ್ಟ್ರ ರಕ್ಷಣೆಗೆ ಸಂಬಂಧಿಸಿದಂತೆ ನಾನು ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವಾಗ ಎರಡು ಮಾತೆಯರನ್ನು ಸ್ಮರಿಸುತ್ತೇನೆ. ಮೊದಲನೇದಾಗಿ ನಮ್ಮೆಲ್ಲರ ಭಾರತ ಮಾತೆ. ಎರಡನೇದು ನಿಮ್ಮಂತಹ ಪರಾಕ್ರಮಿ ಯೋಧರಿಗೆ ಜನ್ಮ ನೀಡುವ ಮಾತೆ. ನಿಮ್ಮ ಗೌರವ, ನಿಮ್ಮ ಕುಟುಂಬದ ಗೌರವ ಮತ್ತು ಭಾರತ ಮಾತೆಯ ರಕ್ಷಣೆಗೆ ಈ ದೇಶ ಮೊದಲ ಆದ್ಯತೆ ನೀಡುತ್ತದೆ.
  • ಸೇನೆಗೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರವಾಗಿರಬಹುದು ಅಥವಾ ನಿಮಗೆ ಬೇಕಾದ ಅಗತ್ಯ ಸರಕು, ಸೇವೆಗಳಿಗೆ ನಾವು ಹೆಚ್ಚು ಒತ್ತು ನೀಡುತ್ತಾ ಬಂದಿದ್ದೇವೆ. ಬಾರ್ಡರ್ ಸ್ಟ್ರಕ್ಚರ್ ಮೇಲೆ ಮೂರು ಪಟ್ಟು ಹೆಚ್ಚು ಖರ್ಚು ಮಾಡುತ್ತಿದ್ದೀವಿ. ಇದರಿಂದ ಗಡಿ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಾಣ ಮಾಡಲಾಗ್ತಿದೆ. ಇದರಿಂದ ನಿಮ್ಮ ಬಳಿ ಶಸ್ತ್ರಾಸ್ತ್ರಗಳು, ಸರಕುಗಳು ಬೇಗ ಬರಲು ಸಾಧ್ಯವಾಯ್ತು.
  • ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆಯನ್ನು ಸೃಷ್ಟಿಸಿದ್ದೇವೆ, ನ್ಯಾಷನಲ್ ವಾರ್ ಮೆಮೋರಿಯಲ್ ಸ್ಥಾಪಿಸಿದ್ದೇವೆ, ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆ ಜಾರಿಗೆ ತಂದಿದ್ದೇವೆ, ನಿಮ್ಮ ಕುಟುಂಬದ ಅಭಿವೃದ್ಧಿಗೆ ನಿಮ್ಮ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದೀವಿ.
  • ಗಾಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ ವೀರ ಯೋಧರ ಪರಾಕ್ರಮವು ಪರಾಕ್ರಮದ ಪರಾಕಾಷ್ಠೆಯಾಗಿದೆ. ದೇಶಕ್ಕೆ ನಿಮ್ಮ ಮೇಲೆ ಗೌರವ ಇದೆ. ನೀವೆಲ್ಲರೂ ಅದ್ಭುತ ಕೆಲಸ ಮಾಡುತ್ತಿದ್ದೀರಿ. ಹೆಗಲಿಗೆ ಹೆಗಲು ಕೊಟ್ಟು ಭಾರತ ಮಾತೆಯ ರಕ್ಷಣೆ ಮಾಡುತ್ತೀದ್ದೀರಿ. ನಿಮ್ಮೆಲ್ಲರಿಂದ ಪ್ರೇರಣೆ ಪಡೆದು ನಾವೆಲ್ಲಾ ಸೇರಿಕೊಂಡು ಕಠಿಣ ಸಂದರ್ಭದಲ್ಲಿ ವಿಜಯ ಸಾಧಿಸಿದ್ದೇವೆ, ವಿಜಯ ಸಾಧಿಸುತ್ತಿರುತ್ತೇವೆ.
  • ಗಡಿಯಲ್ಲಿ ನಿಂತು ನಿಮ್ಮ ಕನಸಿನ ಭಾರತ ಕಟ್ಟಲು ಶ್ರಮಿಸುತ್ತಿದ್ದೀರಿ. ಇದರಲ್ಲಿ ದೇಶದ 130 ಕೋಟಿ ಜನ ಕೂಡ ಹಿಂದೆ ಉಳಿಯಲ್ಲ ಅನ್ನೋ ಭರವಸೆ ನೀಡುತ್ತೇನೆ. ಆತ್ಮ ನಿರ್ಭರ್ ಭಾರತವನ್ನು ನಿರ್ಮಾಣ ಮಾಡುತ್ತೇವೆ. ನಿಮ್ಮಿಂದ ಪ್ರೇರಣೆ ಸಿಕ್ಕಾಗ ಆತ್ಮ ನಿರ್ಭರ್ ಭಾರತದ ಸಂಕಲ್ಪಕ್ಕೆ ಮತ್ತಷ್ಟು ಬಲ ಸಿಗಲಿದೆ. ನಾನು ಮತ್ತೊಮ್ಮೆ ನಿಮಗೆಲ್ಲರಿಗೂ ನನ್ನ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಭಾರತ್ ಮಾತಾ ಕೀ ಜೈ.. ಭಾರತ್ ಮಾತಾ ಕೀ ಜೈ.. ಭಾರತ್ ಮಾತಾ ಕೀ ಜೈ.. ವಂದೇ ಮಾತರಂ.. ವಂದೇ ಮಾತರಂ.. ವಂದೇ ಮಾತರಂ..

-masthmagaa.com

Contact Us for Advertisement

Leave a Reply