masthmagaa.com:

ರಷ್ಯಾದಲ್ಲಿ ಮುಂದಿನ ವಾರದಿಂದಲೇ ಕೊರೋನಾ ಲಸಿಕೆಯ ಅಭಿಯಾನ ಪ್ರಾರಂಭಿಸುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆದೇಶಿಸಿದ್ದಾರೆ. ಲಸಿಕೆ ಅಭಿಯಾನ ಅಂದ್ರೆ ಸಾಮೂಹಿಕವಾಗಿ ಲಸಿಕೆ ಹಾಕುವುದು. ಆದ್ರೆ ಇದು ವಾಲಂಟರಿ ಬೇಸಿಸ್​ ಆಗಿರುತ್ತದೆ. ಅಂದ್ರೆ ಯಾರು ಲಸಿಕೆ ಹಾಕಿಸಿಕೊಳ್ಳಲು ಮುಂದೆ ಬರ್ತಾರೋ ಅವರಿಗೆ ಮಾತ್ರ ಲಸಿಕೆ ಹಾಕಲಾಗುತ್ತದೆ. ರಷ್ಯಾದಲ್ಲಿ ಸದ್ಯ ಅನುಮೋದನೆ ಪಡೆದಿರುವ ಲಸಿಕೆ ಅಂದ್ರೆ ಅದು ‘ಸ್ಪುಟ್ನಿಕ್-V’. ಈ ಲಸಿಕೆಯು 92% ಪರಿಣಾಮಕಾರಿ ಅಂತ ಇತ್ತೀಚೆಗೆ ರಷ್ಯಾ ಘೋಷಿಸಿತ್ತು. ಈ ಲಸಿಕೆಯನ್ನೇ ಎಲ್ಲರಿಗೂ ಹಾಕಲು ರಷ್ಯಾ ನಿರ್ಧರಿಸಿದೆ. ಈ ವಾರದಲ್ಲಿ ‘ಸ್ಪುಟ್ನಿಕ್-V’ ಲಸಿಕೆಯ 20 ಲಕ್ಷ ಡೋಸ್​ಗಳನ್ನ ಉತ್ಪಾದಿಸಲಾಗುತ್ತೆ ಅಂತ ಪುಟಿನ್ ಹೇಳಿದ್ದಾರೆ. ಮುಂದಿನ ವಾರದಿಂದಲೇ ಸಾಮೂಹಿಕವಾಗಿ ಲಸಿಕೆ ಹಾಕುವ ಅಭಿಯಾನ ಆರಂಭಿಸಬೇಕು ಅಂತ ಉಪ ಪ್ರಧಾನಿ ಟಟಿಯಾನಾ ಗೊಲಿಕೋವಾ ಅವರಿಗೆ ಪುಟಿನ್​ ಸೂಚಿಸಿದ್ದಾರೆ. ಒಂದ್ವೇಳೆ ರಷ್ಯಾದಲ್ಲಿ ಲಸಿಕೆ ಅಭಿಯಾನ ಶುರುವಾದ್ರೆ ಹೀಗೆ ಮಾಡಿದ ಮೊದಲ ದೇಶ ಎನಿಸಿಕೊಳ್ಳಲಿದೆ. ಲಸಿಕೆಯಲ್ಲೂ ನಾವೇ ಫಸ್ಟ್, ವ್ಯಾಕ್ಸಿನೇಷನ್​ನಲ್ಲೂ ನಾವೇ ಫಸ್ಟ್ ಅನ್ನೋ ದಾಖಲೆ ಬರೆಯಲು ರಷ್ಯಾ ಮುಂದಾದಂತೆ ಕಾಣ್ತಿದೆ. ಅಂದ್ಹಾಗೆ ರಷ್ಯಾದಲ್ಲಿ ಕಳೆದೊಂದು ತಿಂಗಳಿನಿಂದ ಪ್ರತಿದಿನ 20,000ಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ದೃಢಪಡುತ್ತಿವೆ. ಪ್ರತಿದಿನ 500ಕ್ಕೂ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ.

-masthmagaa.com

Contact Us for Advertisement

Leave a Reply