ದೆಹಲಿಯಲ್ಲಿ ಆಪ್ ಗೆಲುವು, ಬಿಜೆಪಿ ಸೋಲಿಗೆ ಕಾರಣಗಳೇನು..?

ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಹ್ಯಾಟ್ರಿಕ್ ಬಾರಿಸಿದೆ. ಈ ಹಿಂದೆ ಕಾಂಗ್ರೆಸ್​ನ ಶೀಲಾ ದೀಕ್ಷಿತ್​​​​ 3 ಬಾರಿ ಸಿಎಂ ಆಗಿ ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಕೇಜ್ರಿವಾಲ್ ಸರಿಗಟ್ಟಿದ್ದಾರೆ. ಆದ್ರೆ ಶೀಲಾ ದೀಕ್ಷಿತ್​​ 15 ವರ್ಷಗಳ ಕಾಲ ಸಿಎಂ ಆಗಿದ್ದ ದಾಖಲೆಯನ್ನು ಕೇಜ್ರಿವಾಲ್ ಇನ್ನೂ ಮುರಿದಿಲ್ಲ. ಬಿಜೆಪಿ ಅಷ್ಟೆಲ್ಲಾ ಹೋರಾಡಿದ್ರೂ, ಮೋದಿ ಅಲೆ ಇದ್ರೂ ಕೇಜ್ರಿವಾಲ್ ವಿನ್ ಆಗಿದ್ದು ಹೇಗೆ ಅನ್ನೋ ಕುತೂಹಲ ಮೂಡುತ್ತೆ. ಅದೇ ರೀತಿ ಬಿಜೆಪಿಯ ಸೋಲು ಮತ್ತು ಕಾಂಗ್ರೆಸ್​​ನ ಹೀನಾಯ ಪ್ರದರ್ಶನಕ್ಕೆ ಕಾರಣವೇನು ಅನ್ನೋದನ್ನ ಈ ವರದಿಯಲ್ಲಿ ನೋಡೋಣ..

ಕೇಜ್ರಿವಾಲ್​​ ನೇತೃತ್ವದ ಆಪ್ ಸುಂಟರಗಾಳಿಗೆ ಕಾರಣವೇನು..?
ಕೇಜ್ರಿವಾಲ್ ಕಳೆದ 5 ವರ್ಷಗಳಲ್ಲಿ ದೆಹಲಿಯಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. ಅದ್ರಲ್ಲೂ ವಿವಿಐಪಿ ಸಂಸ್ಕೃತಿ ಪಕ್ಕಕ್ಕಿಟ್ಟು ಜನರಿಗೆ ತುಂಬಾ ಹತ್ತಿರವಾಗಿದ್ದಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಮನ್ನಣೆ ನೀಡಿದ್ದಾರೆ. ಅಂದ್ರೆ ಆರೋಗ್ಯ, ವಿದ್ಯುತ್, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಸಾರಿಗೆ ಕ್ಷೇತ್ರದಲ್ಲಿ ನೋಡೋದಾದ್ರೆ 5000 ಬಸ್​​ಗಳನ್ನು ಬಿಡೋದಾಗಿ ಹೇಳಿದ್ದ ಅವರು, 526 ಬಸ್​ಗಳನ್ನು ಬಿಟ್ಟಿದ್ದಾರೆ. ಇನ್ನು ಮಹಿಳೆಯರಿಗೆ ಬಸ್​ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಒದಗಿಸಿದ್ದಾರೆ. ಗ್ರಾಮೀಣ ಭಾಗಕ್ಕೂ ಹೆಚ್ಚಿನ ಬಸ್​​ಗಳ ಸೇವೆ ನೀಡಿ, ಗ್ರಾಮೀಣ ಭಾಗದ ಮತದಾರರನ್ನು ಸೆಳೆಯುವಲ್ಲಿಯೂ ಯಶಸ್ವಿಯಾಗಿದ್ಧಾರೆ. ಅದೂ ಅಲ್ಲದೆ ಎನ್​ಆರ್​​ಸಿ, ಸಿಎಎ ವಿಚಾರದಲ್ಲಿ ತಟಸ್ಥ ನಿಲುವು ತುಂಬಾ ದೊಡ್ಡ ಪ್ಲಸ್ ಪಾಯಿಂಟ್ ಆಯ್ತು ಅಂತಾನೇ ಹೇಳಬಹುದು.

ಬಿಜೆಪಿ ಸೋಲಿಗೆ ಕಾರಣಗಳು ಏನು..?
ಈ ಬಾರಿ ಬಿಜೆಪಿಗೆ ದೆಹಲಿ ವಿಧಾನಸಭೆ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಹೀಗಾಗಿ ಪ್ರಧಾನಿ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರೇ ದೆಹಲಿಯಲ್ಲಿ ಬೀಡು ಬಿಟ್ಟು ಪ್ರಚಾರ ನಡೆಸಿದ್ರು. ಆದ್ರೆ ಬಿಜೆಪಿ ತನ್ನ ಸಿಎಂ ಅಭ್ಯರ್ಥಿ ಯಾರು ಅಂತ ಘೋಷಿಸಲೇ ಇಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ಹಿಂದುತ್ವ ಮತ್ತು ಮೋದಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೊರಟಿತು. ಸಿಎಂ ಅಭ್ಯರ್ಥಿ ಘೋಷಣೆ ಮಾಡದೇ ಇದ್ದಿದ್ದರಿಂದ ಮನೋಜ್ ತಿವಾರಿಯೇ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿತವಾಗಿತ್ತು. ಆದ್ರೆ ಮನೋಜ್ ತಿವಾರಿಗೆ ಕೇಜ್ರಿವಾಲ್​ಗೆ ಇದ್ದಷ್ಟು ಜನಮನ್ನಣೆ ಇರಲಿಲ್ಲ. ಇದು ಬಿಜೆಪಿಗೆ ದೊಡ್ಡ ಹೊಡೆತ ನೀಡಿತು. ಇನ್ನು ಬಿಜೆಪಿ ಕೇಜ್ರಿವಾಲ್​ರ ವೈಫಲ್ಯಗಳನ್ನು ಎತ್ತಿ ಹಿಡಿಯೋದ್ರ ಬದಲು ಸಿಎಎ, ಎನ್​ಆರ್​​ಸಿ, 370ನೇ ವಿಧಿ ರದ್ದತಿ ವಿಚಾರವಾಗಿ ಪ್ರಚಾರ ನಡೆಸಿದ್ರು. ಅಲ್ಲದೆ ಕೇಜ್ರಿವಾಲ್ ವಿರುದ್ಧ ಬಾಯಿಗೆ ಬಂದಂತೆ ಟೀಕೆಗಳನ್ನು ಮಾಡುತ್ತಾ, ಭಯೋತ್ಪಾದಕ ಅಂತೆಲ್ಲಾ ಕರೆದುಬಿಟ್ಟರು. ಇದು ಬಿಜೆಪಿಗೆ ಮೈನಸ್ ಆದ್ರೆ ಕೇಜ್ರಿವಾಲ್​​​ಗೆ ಪ್ಲಸ್ ಆಯ್ತು.

ಕಾಂಗ್ರೆಸ್ ಹೀನಾಯ ಪ್ರದರ್ಶನಕ್ಕೆ ಕಾರಣಗಳೇನು..?
ಕಳೆದ ಬಾರಿಗೆ ಹೋಲಿಸಿದ್ರೆ ಈ ಬಾರಿ ಬಿಜೆಪಿ ಸಾಧನೆ ಪರವಾಗಿಲ್ಲ. ಆದ್ರೆ ಕಾಂಗ್ರೆಸ್ ಮಾತ್ರ ಹೇಳ ಹೆಸರಿಲ್ಲದಂತೆ ಹೋಗಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್​​ನ ಘಟಾನುಘಟಿ ನಾಯಕರೇ ಕದನಕಣದಿಂದ ಹಿಂದೆ ಸರಿದ್ರು. ಮಾಜಿ ಸಂಸದರು ಸೋನಿಯಾ ಗಾಂಧಿ ಹೇಳಿದರೂ ಚುನಾವಣೆಗೆ ನಿಂತುಕೊಳ್ಳಲಿಲ್ಲ. ಅಲ್ಲದೆ ಚುನಾವಣಾ ಪ್ರಚಾರದಿಂದಲೂ ದೂರ ಉಳಿದುಬಿಟ್ಟರು. ಇದು ಕಾಂಗ್ರೆಸ್​​​ಗೆ ನುಂಗಲಾರದ ತುತ್ತಾಯಿತು. ಅದೂ ಅಲ್ಲದೆ ಬಿಜೆಪಿಯನ್ನು ಸೋಲಿಸೋ ಉದ್ದೇಶದಿಂದ ಕಾಂಗ್ರೆಸ್ ಈ ಚುನಾವಣೆಯನ್ನು ಅಷ್ಟು ಸೀರಿಯಸ್ ಆಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕಳೆದ ಬಾರಿಯಂತೆ ಕಾಂಗ್ರೆಸ್​​ನ ಬಹುತೇಕ ಮತಗಳು ಆಪ್​​​ಗೆ ಬಿದ್ದು ಕಾಂಗ್ರೆಸ್​ ಹೀನಾಮಾನವಾಗಿ ಸೋತು ಹೋಯ್ತು.

ಕಳೆದ ಬಾರಿ ಕೇಜ್ರಿವಾಲ್ ಉದ್ದೇಶ ಚೆನ್ನಾಗಿದೆ, ಇವರು  ಏನಾದ್ರು ಮಾಡಬಹುದು ಅಂತ ಜನ ಮತ ಹಾಕಿದ್ರು. ಆದ್ರೆ ಈ ಬಾರಿ ಅವರ ಕೆಲಸಗಳಿಗೆ ಜನ ಜೈ ಎಂದಿದ್ದಾರೆ. ಜೊತೆಗೆ ಮತ್ತೊಂದು ಅವಕಾಶ ನೀಡಿದ್ದಾರೆ ಅಂತ ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ಧಾರೆ.

Contact Us for Advertisement

Leave a Reply