masthmagaa.com:

ಸುಶಾಂತ್ ಸಿಂಗ್​ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್​ ಸಿಕ್ಕಿದೆ. ಸುಶಾಂತ್ ಅವರ ಗೆಳತಿ ರಿಹಾ ಚಕ್ರಬರ್ತಿ ಮಾದಕ ವಸ್ತು ಡೀಲರ್​ಗಳ ಜೊತೆ ಸಂಪರ್ಕ ಹೊಂದಿದ್ದರು ಅನ್ನೋ ವಿಚಾರವೀಗ ಬೆಳಕಿಗೆ ಬಂದಿದೆ. ರಿಹಾ ಅವರು ತಮ್ಮ ಮಾಜಿ ಮ್ಯಾನೇಜರ್ ಜಯ ಶಾ ಜೊತೆ ಮಾಡಿರುವ ವಾಟ್ಸಾಪ್ ಚಾಟ್​ನ ಸ್ಕ್ರೀನ್​ಶಾಟ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.

ಇದರಲ್ಲಿ ಜಯ ಶಾ ಅವರು ‘ಮಾದಕ ವಸ್ತುವಿನ 4 ಹನಿಯನ್ನ ಟೀಯಲ್ಲಿ ಮಿಕ್ಸ್ ಮಾಡಿ ಕೊಡಿ. ಹೀಗೆ ಕಿಕ್ಕೇರಲು 30ರಿಂದ 40 ನಿಮಿಷ ಕಾಲ ಕೊಡಿ’ ಅಂತ ರಿಹಾಗೆ ಸಲಹೆ ನೀಡಿರೋದು ಕೂಡ ಇದೆ. ಇದೇ ಈಗ ನಟಿ ರಿಹಾ ಚಕ್ರಬರ್ತಿಗೆ ಮತ್ತಷ್ಟು ಸಂಕಷ್ಟ ತರುವ ಸಾಧ್ಯತೆ ಇದೆ. ಸುಶಾಂತ್​ಗೆ ರಿಹಾ ಚಕ್ರಬರ್ತಿ ಮಾದಕ ವಸ್ತುಗಳನ್ನ ಕೊಡ್ತಿದ್ರಾ..? ಅದೇ ಸುಶಾಂತ್ ಸಾವಿಗೆ ಕಾರಣವಾಯ್ತಾ..? ಅನ್ನೋ ಅನುಮಾನಗಳು ಮೂಡಿವೆ.

ಆದ್ರೆ ‘ರಿಹಾ ಚಕ್ರಬರ್ತಿ ಯಾವತ್ತೂ ಮಾದಕವಸ್ತು ಸೇವಿಸಿಲ್ಲ. ಬೇಕಿದ್ರೆ ರಕ್ತದ ಪರೀಕ್ಷೆ ಮಾಡಿಸಿ’ ಅಂತ ರಿಹಾ ಪರ ವಕೀಲರು ಹೇಳಿದ್ದಾರೆ. ಇದೆಲ್ಲದರ ನಡುವೆ ಮಾದಕವಸ್ತು ನಿಯಂತ್ರಣ ವಿಭಾಗದ (NCB) ನಿರ್ದೇಶಕ ರಾಕೇಶ್ ಅಸ್ಥಾನಾ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ಎನ್​ಸಿಬಿ ಕೂಡ ಈ ಸಂಬಂಧ ತನಿಖೆ ನಡೆಸುವ ಸಾಧ್ಯತೆ ಇದೆ.

ಮತ್ತೊಂದುಕಡೆ ಸುಶಾಂತ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಮುಂಬೈನ ಕೂಪರ್ ಆಸ್ಪತ್ರೆಯ ಶವಾಗಾರಕ್ಕೆ ರಿಹಾ ಚಕ್ರಬರ್ತಿ ಜೂನ್ 14ರಂದು ಭೇಟಿ ನೀಡಿದ್ದರು. ಅವರಿಗೆ ಒಳಹೋಗಲು ಅವಕಾಶ ಕೊಟ್ಟ ಬಗ್ಗೆ ಕೂಪರ್ ಆಸ್ಪತ್ರೆ ಮತ್ತು ಮುಂಬೈ ಪೊಲೀಸರಿಗೆ ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗ ನೋಟಿಸ್ ನೀಡಿದೆ. ಈ ಸಂಬಂಧ ಮಾಹಿತಿ ನೀಡುವಂತೆ ಸೂಚಿಸಿದೆ.

ಇನ್ನು ಸುಶಾಂತ್ ಅವರ ಫ್ಲಾಟ್​ಮೇಟ್​ ಸಿದ್ಧಾರ್ಥ್​ ಪಿಠಾಣಿ, ದಿಪೇಶ್ ಸಾವಂತ್ ಮತ್ತು ಕುಕ್​ ನೀರಜ್ ಸಿಂಗ್​ರನ್ನು ಸತತ 6ನೇ ದಿನವೂ ಸಿಬಿಐ ಅಧಿಕಾರಿಗಳು ಡಿಆರ್​ಡಿಒ ಗೆಸ್ಟ್​ ಹೌಸ್​ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.

-masthmagaa.com

Contact Us for Advertisement

Leave a Reply