masthmagaa.com:

ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ನಟಿ ರಿಹಾ ಚಕ್ರಬರ್ತಿ, ಆಕೆಯ ತಂದೆ ಇಂದರ್​ಜಿತ್​ ಚಕ್ರಬರ್ತಿ ಮತ್ತು ಸಹೋದರ ಶೌವಿಕ್ ಚಕ್ರಬರ್ತಿ ಮುಂಬೈನ ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಇಡಿ ಅಧಿಕಾರಿಗಳು ಎರಡನೇ ಬಾರಿ ರಿಹಾ ಚಕ್ರಬರ್ತಿಯನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಶುಕ್ರವಾರ ಸತತ 9 ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆದಿತ್ತು.

ಶುಕ್ರವಾರ ರಿಹಾ ಚಕ್ರಬರ್ತಿ, ಶೌವಿಕ್ ಚಕ್ರಬರ್ತಿ ಮತ್ತು ಮಾಜಿ ಮ್ಯಾನೇಜರ್ ಶ್ರುತಿ ಮೋದಿಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ವಿಚಾರಣೆ ನಡೆಸಲಾಗಿತ್ತು. ಸೋಮವಾರವೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿತ್ತು. ಹೀಗಾಗಿ ಮೂವರ ಜೊತೆಗೆ ರಿಹಾಳ ತಂದೆ ಇಂದರ್​ಜಿತ್ ಚಕ್ರಬರ್ತಿ ಕೂಡ ವಿಚಾರಣೆಗೆ ಹಾಜರಾಗಿದ್ದಾರೆ. ಸುಶಾಂತ್ ಸಿಂಗ್ ಅವರ ಸ್ನೇಹಿತ ಸಿದ್ಧಾರ್ಥ್​ ಪಿಠಾಣಿಗೂ ಸಮನ್ಸ್ ನೀಡಲಾಗಿದೆ. ಶನಿವಾರ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್​ ನೀಡಿದ್ದರೂ ಸಿದ್ಧಾರ್ಥ್​ ಪಿಠಾಣಿ ಬಂದಿರಲಿಲ್ಲ.

ಅನುಮಾನಾಸ್ಪದವಾಗಿ 15 ಕೋಟಿ ರೂಪಾಯಿ ವರ್ಗಾವಣೆ ಹಿನ್ನೆಲೆ ನಟಿ ರಿಹಾ ಚಕ್ರಬರ್ತಿ ಮತ್ತು ಇತರ 5 ಜನರ ಮೇಲೆ ಜಾರಿ ನಿರ್ದೇಶನಾಲಯ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ. ಸುಶಾಂತ್ ಸಿಂಗ್ ಬ್ಯಾಂಕ್​ ಖಾತೆಯಿಂದ ರಿಹಾ ಚಕ್ರಬರ್ತಿ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ ಅಂತ ಸುಶಾಂತ್ ತಂದೆ ಬಿಹಾರದಲ್ಲಿ ದೂರು ದಾಖಲಿಸಿದ್ದರು. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

-masthmagaa.com

Contact Us for Advertisement

Leave a Reply