ವಿಶ್ವ ಆರೋಗ್ಯ ಸಂಸ್ಥೆಗೆ 30 ದಿನ ಟೈಂ ಕೊಟ್ಟ ಟ್ರಂಪ್..!

masthmagaa.com:

ವಿಶ್ವ ಆರೋಗ್ಯ ಸಂಸ್ಥೆಯು ಇನ್ನೊಂದು ತಿಂಗಳಲ್ಲಿ ಪ್ರಮುಖ ಸುಧಾರಣೆಗಳಿಗೆ ಬದ್ಧವಾಗಬೇಕು. ಇಲ್ಲದಿದ್ರೆ ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ನೀಡುತ್ತಿದ್ದ ಅನುದಾನವನ್ನ ಶಾಶ್ವತವಾಗಿ ಸ್ಥಗಿತ ಮಾಡಬೇಕಾಗುತ್ತದೆ. ಅಲ್ಲದೆ ನಮ್ಮ ಸದಸ್ಯತ್ವವನ್ನು ಮರುಪರಿಶೀಲಿಸಬೇಕಾಗುತ್ತದೆ ಅಂತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೋಸ್ ಅಧಾನಮ್ ಅವರಿಗೆ ಬರೆದಿರೋ ಪತ್ರವನ್ನು ಸೋಮವಾರ ಸಂಜೆ ಟ್ರಂಪ್ ಬಿಡುಗಡೆ ಮಾಡಿದ್ರು. ಪತ್ರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯನ್ನ ಚೀನಾದ ಕೈಗೊಂಬೆ ಅಂತ ಟೀಕಿಸಲಾಗಿದೆ. ಚೀನಾದಲ್ಲಿ ಕಾಯಿಲೆ ಕಾಣಿಸಿಕೊಂಡಾಗ ಅದನ್ನ ಜಗತ್ತಿನಿಂದ ಮುಚ್ಚಿಟ್ಟಿದ್ದು. ಮನುಷ್ಯನಿಂದ ಮನುಷ್ಯನಿಗೆ ಹರಡುತ್ತದೆ ಅನ್ನೋದನ್ನ ಮುಚ್ಚಿಟ್ಟಿದ್ದು. ಈ ಬಗ್ಗೆ ವರದಿ ಮಾಡಿದವರ ವಿರುದ್ಧ ಚೀನಾ ಕ್ರಮ ಕೈಗೊಂಡಾಗ ಸುಮ್ಮನಿದ್ದಿದ್ದು. ಹೀಗೆ ಸಾಕಷ್ಟು ವಿಚಾರಗಳನ್ನ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ವಿಶ್ವ ಆರೋಗ್ಯ ಸಂಸ್ಥೆಗೆ ಅತಿ ಹೆಚ್ಚು ಅನುದಾನ ನೀಡುವ ರಾಷ್ಟ್ರ ಅಮೆರಿಕ. ಆದ್ರೆ ಕೊರೋನಾಗೆ ಸಂಬಂಧಿಸಿದಂತೆ ಸೂಕ್ತ ಸಮಯದಲ್ಲಿ ಎಚ್ಚರಿಸಿಲ್ಲ ಅನ್ನೋ ಕಾರಣಕ್ಕೆ ಡೊನಾಲ್ಡ್​ ಟ್ರಂಪ್, ಅನುದಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯುವುದಾಗಿ ಘೋಷಿಸಿದ್ದರು. ಇದೀಗ ಅದನ್ನು ಶಾಶ್ವತವಾಗಿ ತಡೆ ಹಿಡಿಯಬೇಕಾಗುತ್ತದೆ. ನಮ್ಮ ಸದಸ್ಯತ್ವವನ್ನು ವಾಪಸ್ ಪಡೆಯಬೇಕಾಗುತ್ತದೆ ಅಂತ ಎಚ್ಚರಿಸಿದ್ದಾರೆ.

-masthmagaa.com

Contact Us for Advertisement

Leave a Reply