masthmagaa.com:

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 11,929 ಜನರಿಗೆ ಹೊಸದಾಗಿ ಸೋಂಕು ತಗುಲಿದೆ ಅಂತ ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ನಿನ್ನೆ 11,458.. ಇವತ್ತು 11,929.. ಆಲ್ಮೋಸ್ಟ್ 12 ಸಾವಿರ ಸಮೀಪಿಸಿದೆ. ಒಂದೇ ದಿನದಲ್ಲಿ ಇಷ್ಟು ಜನರಿಗೆ ಸೋಂಕು ತಗುಲಿರೋದು ಇದೇ ಮೊದಲು. ಈ ಮೂಲಕ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ ಬರೋಬ್ಬರಿ 3,20,922 ಆಗಿದೆ. ಜಾಗತಿಕ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ, ಬ್ರೆಜಿಲ್, ರಷ್ಯಾ ನಂತರದ ಸ್ಥಾನದಲ್ಲಿ ಭಾರತ ಇದೆ.

ಕಳೆದ 24 ಗಂಟೆಗಳಲ್ಲಿ 311 ಜನ ಮೃತಪಟ್ಟಿದ್ದು, ದೇಶದಲ್ಲಿ ಒಟ್ಟು ಮೃತಪಟ್ಟ ಸೋಂಕಿತರ ಸಂಖ್ಯೆ 9,195 ಆಗಿದೆ. ಇದುವರೆಗೆ 1,62,379 ಮಂದಿ ಸೋಂಕಿತರು ಗುಣಮುಖರಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ 1,49,348 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಸೋಂಕಿತರ ಸಂಖ್ಯೆ 1.04 ಲಕ್ಷ ದಾಟಿದೆ. ತಮಿಳುನಾಡಿನಲ್ಲಿ 42 ಸಾವಿರ, ದೆಹಲಿಯಲ್ಲಿ 38 ಸಾವಿರ ಮತ್ತು ಗುಜರಾತ್​ನಲ್ಲಿ 23 ಸಾವಿರಕ್ಕೂ ಹೆಚ್ಚು​ ಪ್ರಕರಣಗಳು ದೃಢಪಟ್ಟಿವೆ. ರಾಜ್ಯವಾರು ಪಟ್ಟಿಯಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿ ಮುಂದುವರಿದಿದೆ.

-masthmagaa.com

Contact Us for Advertisement

Leave a Reply