ಸರ್ಕಾರ ಬೇಕಾಬಿಟ್ಟಿ ದುಡ್ಡು ಪ್ರಿಂಟ್ ಮಾಡಿ ಜನರಿಗೆ ಹಂಚಲ್ಲ ಯಾಕೆ ಗೊತ್ತಾ?

ಹಾಯ್ ಫ್ರೆಂಡ್ಸ್, ಸರ್ಕಾರ ನೋಟನ್ನ ಪ್ರಿಂಟ್ ಮಾಡುತ್ತೆ ಅನ್ನೋದು ನಿಮಗೆಲ್ಲರಿಗೂ ಗೊತ್ತು. ಸರ್ಕಾರದ ಹತ್ತಿರ ನೋಟ್ ಪ್ರಿಂಟ್ ಮಾಡುವ ಮಷೀನ್ ಇದೆ ಅನ್ನೋದೂ ಗೊತ್ತು! ಹಾಗಿದ್ರೂ ಕೂಡ ಸರ್ಕಾರಗಳು ಯರ್ರಾಬಿರ್ರಿ ನೋಟ್ ಪ್ರಿಂಟ್ ಮಾಡಿ ಜನರಿಗೆ ಹಂಚಿ ಎಲ್ಲರನ್ನೂ ಶ್ರೀಮಂತರನ್ನಾಗಿ ಮಾಡಲ್ಲ ಯಾಕೆ? ಎಲ್ಲರ ಬಳಿ ಲೆಕ್ಕವಿಲ್ಲದಷ್ಟು ದುಡ್ಡು ಸೇರಿಕೊಂಡರೆ ಕಥೆ ಏನಾಗುತ್ತೆ? ಪ್ರತಿಯೊಬ್ಬರೂ ಶ್ರೀಮಂತರಾಗಿ ಪ್ರತಿಯೊಬ್ಬರೂ ಅಂಬಾನಿಯಂತಾದರೆ ಏನಾಗುತ್ತೆ? ನೀವು ಅಂದುಕೊಳ್ಳಬಹುದು! ಹಾಗೇನಾದರೂ ಆದರೆ ಜಗತ್ತಿನಲ್ಲಿ ಬಡವರೇ ಇರುವುದಿಲ್ಲ ಅಂತ.! ಯಾರೂ ಕೆಲಸವೇ ಮಾಡಬೇಕಾಗಿಲ್ಲ ಅಂತ.! ರಸ್ತೆಗಳಲ್ಲಿ ಭಿಕ್ಷುಕರೇ ಇರುವುದಿಲ್ಲ ಅಂತ! ಆದರೆ ಒಂದು ನಿಮಿಷ ನಿಂತುಕೊಳ್ಳಿ. ಜಾಸ್ತಿ ಕನಸು ಕಾಣಬೇಡಿ.

ಅನ್​ಲಿಮಿಟೆಡ್​ ದುಡ್ಡು ಪ್ರಿಂಟ್ ಮಾಡಿದ್ರೆ ಉಂಟಾಗುತ್ತೆ ಅತಿದೊಡ್ಡ ಹಾಹಾಕಾರ!

ಹೌದು, ಮಷೀನ್ ಇದೆ, ಅಧಿಕಾರ ಇದೆ ಅಂತಾ ಯಾವುದೇ ದೇಶ ತನ್ನ ಮನಸ್ಸಿಗೆ ಬಂದ ಹಾಗೆ ದುಡ್ಡು ಪ್ರಿಂಟ್ ಮಾಡುವಂತಿಲ್ಲ. ಪ್ರಿಂಟ್ ಮಾಡಿದರೆ ಏನಾಗುತ್ತೆ ಅಂತ ನಂತರ ಹೇಳುತ್ತೇವೆ. ಅದಕ್ಕೂ ಮೊದಲು ಯಾಕೆ ಪ್ರಿಂಟ್ ಮಾಡಬಾರದು ಅನ್ನೋದನ್ನ ಹೇಳುತ್ತೇವೆ ನೋಡಿ. ನೋಟ್ ಪ್ರಿಂಟ್ ಮಾಡುವುದಕ್ಕೆ ಒಂದು ಫಾರ್ಮುಲಾ ಇದೆ. ಅದೇ,

GDP = CURRENCY

ಪ್ರತಿಯೊಂದು ದೇಶದ ಜಿಡಿಪಿಗೆ ಸರಿಸಮನಾಗಿ ಕರೆನ್ಸಿಯನ್ನ ಪ್ರಿಂಟ್ ಮಾಡಬೇಕು. ಜಿಡಿಪಿ ಎಂದರೆ ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್. ಅಂದರೆ ಒಟ್ಟು ರಾಷ್ಟ್ರೀಯ ಉತ್ಪನ್ನ. ಒಂದು ನಿರ್ದಿಷ್ಟ ಅವಧಿಯಲ್ಲಿ ಒಂದು ದೇಶದಲ್ಲಿ ಉತ್ಪತ್ತಿಯಾಗುವ ಎಲ್ಲಾ ರೀತಿಯ ಸರಕು ಮತ್ತು ಸೇವೆಗಳ ಒಟ್ಟು ಮೊತ್ತವೇ ಜಿಡಿಪಿ. ಸರಕು ಮತ್ತು ಸೇವೆಗಳು ಅಂದ್ರೆ, ಉದಾಹರಣೆಗೆ, ಕಾರು, ಬೈಕು ಇತ್ಯಾದಿ ಆಟೋಮೊಬೈಲ್ ಸರಕುಗಳು.. ದಿನನಿತ್ಯ ಬಳಸುವ ಆಹಾರ ಸಾಮಗ್ರಿ, ಸೋಪು, ಪೇಸ್ಟು ಇತ್ಯಾದಿ.. ಜೊತೆಗೆ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ಎಜುಕೇಶನ್ ಸೇವೆಗಳು ಎಲ್ಲವೂ ಬರುತ್ತದೆ. ಇವೆಲ್ಲವೂ ಸೇರಿ ಒಂದು ದೇಶದಲ್ಲಿ ಒಂದು ವರ್ಷಕ್ಕೆ ಎಷ್ಟು ಬಿಸಿನೆಸ್ ಆಗುತ್ತದೆಯೋ ಅದರ ಒಟ್ಟು ಮೊತ್ತವನ್ನ ಮೀರಿ ನೋಟನ್ನ ಪ್ರಿಂಟ್ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಜನರ ಬಳಿ ಬೇಜಾನ್ ದುಡ್ಡು ಇರುತ್ತದೆ. ಆದರೆ ಅದಕ್ಕೆ ತಕ್ಕಂತೆ ಖರೀದಿ ಮಾಡಲು ಸರಕು ಮತ್ತು ಸೇವೆಗಳೇ ಇರುವುದಿಲ್ಲ. ಆಗ ಆ ದುಡ್ಡಿನ ಬೆಲೆಯೇ ಕುಸಿದು ಹೋಗುತ್ತದೆ. ವಸ್ತುಗಳ ಬೆಲೆ ವಿಪರೀತ ಏರಿಕೆಯಾಗಿ ದೇಶದ ಒಳಗೆ ಅಂತರ್ಯುದ್ಧದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಬೆಲೆ ಏರಿಕೆ ಯಾವ ಕಾರಣಕ್ಕಾಗಿ ಆಗುತ್ತದೆ ಅಂದ್ರೆ, ಮಾರ್ಕೆಟ್​​ನಲ್ಲಿ ಐಟಮ್ಸ್ ತುಂಬಾ ಕಮ್ಮಿ ಇರುತ್ತದೆ, ಜನರ ಕೈಯಲ್ಲಿ ವಿಪರೀತ ದುಡ್ಡು ಇರುತ್ತದೆ. ಆಗ ಡಿಮ್ಯಾಂಡ್ ಹೆಚ್ಚಾಗುತ್ತದೆ. ಜಾಸ್ತಿ ದುಡ್ಡು ಕೊಟ್ಟಾದರೂ ಸರಕು-ಸೇವೆಗಳನ್ನ ಖರೀದಿಸಲು ಜನ ಮುಗಿಬೀಳುತ್ತಾರೆ. ಆಗ ಬೆಲೆ ಏರಿಕೆ ಆಗೇ ಆಗುತ್ತದೆ. ಹೊರಗಿನ ದೇಶಗಳು ಸಹ ನಮ್ಮ ದೇಶದ ಕರೆನ್ಸಿಯನ್ನ ನಂಬುವುದಿಲ್ಲ. ಹೀಗಾಗಿ ಪ್ರತಿಯೊಂದು ದೇಶವೂ ತನ್ನ ಜಿಡಿಪಿಗಿಂತ ಹೆಚ್ಚು ದುಡ್ಡನ್ನ ಪ್ರಿಂಟ್ ಮಾಡುವಂತಿಲ್ಲ. ಈ ಹಿಂದೆ ಜರ್ಮನಿ ಮತ್ತು ಜಿಂಬಾಬ್ವೆ ದೇಶಗಳು ವಿಪರೀತ ನೋಟ್ ಪ್ರಿಂಟ್ ಮಾಡುವ ಸಾಹಸಕ್ಕೆ ಕೈಹಾಕಿ ಭಾರಿ ಹೊಡೆತ ತಿಂದಿದ್ದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಇನ್ನೂ ಭಾರತದಲ್ಲಂತೂ ಆರ್​ಬಿಐ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ.

ಭಾರತದಲ್ಲಿ ನೋಟ್ ಎಲ್ಲಿ ಪ್ರಿಂಟ್ ಆಗುತ್ತದೆ..?

ಹೌದು ಫ್ರೆಂಡ್ಸ್, ಭಾರತದಲ್ಲಿ ನೋಟ್ ಎಲ್ಲಿ ಪ್ರಿಂಟ್ ಆಗುತ್ತದೆ? ಅದರ ಪೇಪರ್ ಎಲ್ಲಿಂದ ಬರುತ್ತದೆ? ಈ ರೀತಿ ನಾನಾ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಇರಬಹುದು. ಅದಕ್ಕೆ ನಾವು ಉತ್ತರ ನೀಡುತ್ತೇವೆ. ಭಾರತದಲ್ಲಿ ಒಟ್ಟು ನಾಲ್ಕು ಕಡೆ ನೋಟುಗಳನ್ನ ಪ್ರಿಂಟ್ ಮಾಡಲಾಗುತ್ತದೆ.

1. ಮೈಸೂರಿನ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್.
-ಇಲ್ಲಿ 2000 ರೂಪಾಯಿಯ ನೋಟ್‌ಗಳನ್ನ ಪ್ರಿಂಟ್ ಮಾಡಲಾಗುತ್ತದೆ.

2. ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್

3. ಮಧ್ಯಪ್ರದೇಶದ ದೇವಾಸ್​​ನಲ್ಲಿರುವ ಬ್ಯಾಂಕ್ ನೋಟ್ ಪ್ರೆಸ್
-ಇಲ್ಲಿ 10, 50 ಮತ್ತು 500 ರೂಪಾಯಿ ನೋಟುಗಳನ್ನ ಪ್ರಿಂಟ್ ಮಾಡಲಾಗುತ್ತದೆ.

4. ಮಹಾರಾಷ್ಟ್ರದ ನಾಸಿಕ್​ನಲ್ಲಿ ಇರುವ ಕರೆನ್ಸಿ ನೋಟ್ ಪ್ರೆಸ್

ಇನ್ನು ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಮತ್ತು ನೋಯ್ಡಾಗಳಲ್ಲಿ ನಾಣ್ಯಗಳನ್ನ ಮುದ್ರಿಸುವ ಟಂಕಸಾಲೆಗಳಿವೆ.

ನೋಟು ಪ್ರಿಂಟು ಮಾಡಲು ಬೇಕಾದ ಪೇಪರ್​ಗಳನ್ನ ಒಂದಷ್ಟು ಭಾರತದಲ್ಲಿ ಉತ್ಪಾದಿಸಿದರೆ ಇನ್ನೊಂದಷ್ಟನ್ನ ವಿದೇಶಗಳಿಂದ ತರಿಸಿಕೊಳ್ಳಲಾಗುತ್ತದೆ. ಮೇಲೆ ಹೇಳಿದ ಮುದ್ರಣಾಲಯಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ವಿಶೇಷವಾದ ಇಂಕ್ ಬಳಸಿ ನೋಟುಗಳನ್ನ ಮುದ್ರಿಸಿ ಆರ್​ಬಿಐಗೆ ಕಳುಹಿಸಿ ಕೊಡಲಾಗುತ್ತದೆ. ಏನಾದರೂ ಡ್ಯಾಮೇಜ್ ನೋಟುಗಳಿದ್ದರೆ ಅವುಗಳನ್ನ ಚೆಕ್ ಮಾಡಿ ವಾಪಸ್ ಮುದ್ರಣಾಲಯಕ್ಕೆ ಕಳಿಸಿಕೊಡಲಾಗುತ್ತದೆ. ಡ್ಯಾಮೇಜ್ ನೋಟುಗಳ ಬದಲಿಗೆ ಹೊಸ ನೋಟುಗಳನ್ನ ಪ್ರಿಂಟ್ ಮಾಡಲಾಗುತ್ತದೆ.

ಪ್ರಿಂಟ್ ಮಾಡಿದ ನೋಟು ನಮ್ಮ ಕೈಗೆ ಬರುವುದು ಹೇಗೆ..?

ದೇಶದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್​ನ 18 ಬ್ರಾಂಚ್​ಗಳಿವೆ. ಅವುಗಳೆಂದರೆ ಅಹಮದಾಬಾದ್, ಬೆಂಗಳೂರು, ಬೈಲಾಪುರ್, ಚೆನ್ನೈ, ಚಂಡೀಗಢ, ಭೋಪಾಲ್, ಜೈಪುರ್, ಹೈದರಾಬಾದ್, ಗುವಾಹಟಿ, ಕೋಲ್ಕತ್ತಾ, ಕಾನ್ಪುರ, ಜಮ್ಮು, ಮುಂಬೈ, ನಾಗ್ಪುರ, ಪಟ್ನಾ, ತಿರುವನಂತಪುರಂ, ಭುವನೇಶ್ವರ, ಲಕ್ನೌ. ಎಲ್ಲಕ್ಕಿಂತ ಮೊದಲು ನೋಟುಗಳು ಆರ್​ಬಿಐನ ಆಫೀಸ್​ಗಳನ್ನ ತಲುಪುತ್ತವೆ. ನಂತರ ಅಲ್ಲಿಂದ ವಿವಿಧ ಬ್ಯಾಂಕುಗಳಿಗೆ ರವಾನೆಯಾಗುತ್ತದೆ. ಅಲ್ಲಿಂದ ನೇರವಾಗಿ ಜನರ ಕೈಗೆ. ಅಂದ್ರೆ ನಮ್ಮ ನಿಮ್ಮ ಕೈಗೆ.

ಸೋ ಫ್ರೆಂಡ್ಸ್ ಈಗ ನಿಮಗೆ ನೋಟುಗಳಿಗೆ ಸಂಬಂಧಪಟ್ಟಹಾಗೆ ಎಲ್ಲಾ ಮಾಹಿತಿ‌ ಸಿಕ್ಕಿದೆ. ನಿಮ್ಮ ಎಲ್ಲಾ ಅನುಮಾನಗಳು ಪರಿಹಾರ ಆಗಿದೆ ಅಂದ್ಕೋತೀವಿ. ಸೋ ಈ ಮಾಹಿತಿಯನ್ನ ನೀವು ಮಾತ್ರ ಇಟ್ಟುಕೊಳ್ಳದೆ ಎಲ್ಲರಿಗೂ ಶೇರ್ ಮಾಡಿ.

Contact Us for Advertisement

Leave a Reply