masthmagaa.com:

ದೇಶದ ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ರಕ್ಷಣಾ ಉಪಕರಣಗಳ ಆಮದು ಮೇಲೆ ಹಂತ ಹಂತವಾಗಿ ನಿರ್ಬಂಧ ಹೇರಲು ನಿರ್ಧರಿಸಿದೆ. ಆರಂಭಿಕ ಹಂತದಲ್ಲಿ 101 ರಕ್ಷಣಾ ಉಪಕರಣಗಳ ಆಮದಿನ ಮೇಲೆ ನಿರ್ಬಂಧ ಹೇರಲಾಗಿದೆ. ಇದರಲ್ಲಿ ಬಂದೂಕು, ರಾಡಾರ್, ಸ್ನೈಪರ್, ಟ್ರಾನ್ಸ್​ಪೋರ್ಟ್​ ಏರ್​ಕ್ರಾಫ್ಟ್​ಗಳು ಸೇರಿವೆ. ಈ ಕುರಿತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದು ರಕ್ಷಣಾ ಉಪಕರಣಗಳನ್ನ ದೇಶದಲ್ಲೇ ಉತ್ಪಾದನೆ ಮಾಡಲು ಮುಂದಿನ ದಿನಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದಿದ್ದಾರೆ.

ಅದ್ರಲ್ಲೂ ಆರ್ಟಿಲರಿ ಗನ್, ಬುಲೆಟ್​ ಪ್ರೂಫ್ ಜಾಕೆಟ್ ಸೇರಿದಂತೆ ಸುಮಾರು 69 ಉಪಕರಣಗಳ ಆಮದು ಮೇಲಿನ ನಿರ್ಬಂಧ  2020ರ ಡಿಸೆಂಬರ್​ನಿಂದಲೇ ಜಾರಿಯಾಗಲಿದೆ. 2021ರ ಡಿಸೆಂಬರ್​ನಲ್ಲಿ ಮತ್ತೆ 11 ಉಪಕರಣಗಳ ಆಮದಿನ ಮೇಲೆ ನಿರ್ಬಂಧ ಬೀಳಲಿದೆ. ಹೀಗೆ ಹಂತ ಹಂತವಾಗಿ 2025ರ ವೇಳೆಗೆ ಒಟ್ಟು 101 ರಕ್ಷಣಾ ಉಪಕರಣಗಳ ಆಮದನ್ನು ಸಂಪೂರ್ಣವಾಗಿ ನಿರ್ಬಂಧಿಸುವ ಗುರಿಯನ್ನು ರಕ್ಷಣಾ ಇಲಾಖೆ ಹೊಂದಿದೆ.

ಪ್ರಧಾನಿ ಮೋದಿಯವರ ‘ಆತ್ಮ ನಿರ್ಭರ ಭಾರತ’ ಕರೆಯಿಂದ ಪ್ರೇರಣೆಗೊಂಡು ಮತ್ತು ರಕ್ಷಣಾ ಉಪಕರಣಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಭೂಸೇನೆಗೆ ಸುಮಾರು 1,30,000 ಕೋಟಿ ರೂಪಾಯಿ, ವಾಯುಸೇನೆಗೆ ಸುಮಾರು 1,30,000 ಕೋಟಿ ರೂಪಾಯಿ ಮತ್ತು ನೌಕಾಸೇನೆಗೆ ಸುಮಾರು 1,40,000 ಕೋಟಿ ರೂಪಾಯಿ ಮೀಸಲಿಡಲಾಗುವುದು ಅಂತ ರಾಜನಾಥ್ ಸಿಂಗ್ ತಿಳಿಸಿದ್ದಾರೆ. ಇದರರ್ಥ ಮುಂದಿನ ಆರೇಳು ವರ್ಷಗಳಲ್ಲಿ ದೇಶೀಯ ಉದ್ಯಮವು ಬರೋಬ್ಬರಿ 4 ಲಕ್ಷ ಕೋಟಿ  ರೂಪಾಯಿಗೂ ಹೆಚ್ಚು ಮೊತ್ತದ ಒಪ್ಪಂದಗಳನ್ನ ಪಡೆಯಲಿದೆ.

-masthmagaa.com

Contact Us for Advertisement

Leave a Reply