masthmagaa.com:

ರೋಹಿಂಗ್ಯಾ.. ನೀವು ಈ ಪದವನ್ನ ಆಗಾಗ ಕೇಳಿರ್ತೀರಿ. ರೋಹಿಂಗ್ಯಾ ಅಂತ ಬಂದಾಗ ಮ್ಯಾನ್ಮಾರ್, ಬಾಂಗ್ಲಾದೇಶ, ರೋಹಿಂಗ್ಯಾ ಮುಸ್ಲಿಮರು, ಅಕ್ರಮ ವಲಸಿಗರು ಅನ್ನೋ ಶಬ್ದಗಳನ್ನ ಕೂಡ ಕೇಳಿರ್ತೀರಿ. ಈಗ ರೋಹಿಂಗ್ಯಾಗಳಿಗೆ ಸಂಬಂಧಪಟ್ಟ ಮಹತ್ವದ ಬೆಳವಣಿಗೆ ಆಗಿದೆ. ಲಕ್ಷಾಂತರ ರೋಹಿಂಗ್ಯಾಗಳನ್ನ ನಿರ್ಜನ ದ್ವೀಪಗಳಿಗೆ ತೆಗೆದುಕೊಂಡು ಹೋಗಿ ಬಿಡ್ತಾ ಇದೆ ಬಾಂಗ್ಲಾದೇಶ.

ಏನಾಗಿದೆ ಅಂತ ವಿವರಿಸೋ ಮೊದಲು ಒಂದು ಸಣ್ಣ ಫ್ಲಾಶ್​​ಬ್ಯಾಕ್. ಮ್ಯಾನ್ಮಾರ್ (ಬರ್ಮಾ)​​​ ಒಂದು ಬುದ್ಧಿಸ್ಟ್ ಮೆಜಾರಿಟಿ ದೇಶ. ಇಲ್ಲಿನ ದಕ್ಷಿಣ ಭಾಗದ ರಖಿನೆ ಪ್ರಾಂತ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿಇದ್ರು. ಆದ್ರೆ ಇವರಿಗೆ ಅಲ್ಲಿ ಯಾವುದೇ ನಾಗರಿಕ ಹಕ್ಕುಗಳು ಇಲ್ಲ. ಮ್ಯಾನ್ಮಾರ್ ಸರ್ಕಾರ ಪ್ರಕಾರ ಇವರು ನಾಗರಿಕರೇ ಅಲ್ಲ. ಹೀಗಿರೋವಾಗ ಅಲ್ಲಿ ರೋಹಿಂಗ್ಯಾ ಬಂಡುಕೋರರು ಮಯನ್ಮಾರ್ ಸೇನಾ ತುಕಡಿ ಮೇಲೆ ದಾಳಿ ಮಾಡಿದ್ರು. ಇದಕ್ಕೆ ಪ್ರತಿಕಾರವಾಗಿ ಮ್ಯಾನ್ಮಾರ್ ಸೇನೆ ಇಡೀ ರಖಿನೆ ಪ್ರಾಂತ್ಯದಲ್ಲಿ ರೋಹಿಂಗ್ಯಾ ಮುಸ್ಲಿಮರ ಮೇಲೆ ಮುಗಿಬಿತ್ತು. ಆಗ ಜೀವ ಉಳಿಸಿಕೊಳ್ಳೋಕೆ 7 ಲಕ್ಷಕ್ಕೂ ಅಧಿಕ ರೋಹಿಂಗ್ಯಾಗಳು ಬಾಂಗ್ಲಾದೇಶಕ್ಕೆ ವಲಸೆ ಬಂದ್ರು. ಇವರಲ್ಲಿ ಹೆಚ್ಚಿನವರನ್ನ ಕಾಕ್ಸ್ ಬಜಾರ್​​ ಸಮೀಪ ನಿರಾಶ್ರಿತರ ಶಿಬಿರಗಳಲ್ಲಿ ಇಡಲಾಗಿತ್ತು. ಈಗ ಅವರನ್ನ ದೂರದ ನಿರ್ಜನ ದ್ವೀಪಗಳಿಗೆ ತಗೊಂಡೋಗಿ ಬಿಟ್ಟುಬರ್ತಿದೆ ಬಾಂಗ್ಲಾದೇಶ. ಮೇನ್​ಲ್ಯಾಂಡ್ ಬಾಂಗ್ಲಾದೇಶದಿಂದ 34 ಕಿಲೋ ಮೀಟರ್​ ದೂರದಲ್ಲಿ ಸಮುದ್ರದಲ್ಲಿರೋ ಭಾಷನ್ ಚಾರ್ ಹೆಸರಿನ ದ್ವೀಪಕ್ಕೆ ಈಗಾಗಲೇ ಒಂದು ಬ್ಯಾಚ್ ರೋಹಿಂಗ್ಯಾಗಳನ್ನ ಬಿಟ್ಟು ಬರಲಾಗಿದೆ. ಈಗ ಮತ್ತೆ 30ಕ್ಕೂ ಅಧಿಕ ಬಸ್​ಗಳಲ್ಲಿ 1500ಕ್ಕೂ ಅಧಿಕ ರೋಹಿಂಗ್ಯಾ ಮುಸ್ಲಿಮರನ್ನ ಅಲ್ಲಿಗೆ ಶಿಫ್ಟ್ ಮಾಡಲಾಗ್ತಿದೆ.

ಇಲ್ಲಿ ಬಾಂಗ್ಲಾದೇಶದ ಕ್ರಮಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ. ನಿರಾಶ್ರಿತರನ್ನ ಒತ್ತಾಯಪೂರ್ವಕವಾಗಿ ನಿರ್ಜನ ದ್ವೀಪಕ್ಕೆ ತೆಗೆದುಕೊಂಡುಹೋಗಿ ಹಾಕಲಾಗ್ತಿದೆ. ಜವಾಬ್ದಾರಿಯಿಂದ ಕೈತೊಳೆದುಕೊಳ್ಳಲು ಬಾಂಗ್ಲಾ ಈ ರೀತಿ ಮಾಡ್ತಾ ಇದೆ ಅಂತ ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಸ್ಥೆಗಳು ಆರೋಪ ಮಾಡ್ತಿವೆ. ಜೊತೆಗೆ ಈ ಭಾಷನ್ ಚಾರ್​​ ದ್ವೀಪ ಕೇವಲ 20 ವರ್ಷಗಳ ಹಿಂದೆ ಸಮುದ್ರದಲ್ಲಿ ಮೇಲೆ ಬಂದಿರೋ ದ್ವೀಪ. ಜೋರಾಗಿ ಮಳೆ ಬಂದ್ರೆ ಈ ದ್ವೀಪ ಸಂಪೂರ್ಣ ಮುಳುಗಡೆ ಆಗುತ್ತೆ. ಚಂಡಮಾರುತ ಬಂದರೂ ಸಂಪೂರ್ಣ ಕೊಚ್ಚಿಕೊಂಡು ಹೋಗುತ್ತೆ. ಹೀಗಿರುವಾಗ ಲಕ್ಷಾಂತರ ರೋಹಿಂಗ್ಯಾಗಳನ್ನ ಬಾಂಗ್ಲಾದೇಶ ಸರ್ಕಾರ ಅಲ್ಲಿ ತಗೊಂಡೋಗಿ ಹಾಕಿ ಅವರ ಜೀವವನ್ನ ಅಪಾಯಕ್ಕೆ ದೂಡ್ತಾ ಇದೆ ಅಂತ ಆರೋಪ ಮಾಡಲಾಗ್ತಿದೆ.

ಇದಕ್ಕೆ ಬಾಂಗ್ಲಾದೇಶದ ಉತ್ತರ ಬೇರೆನೇ ಇದೆ. ನಾವು ಆ ದ್ವೀಪದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನ ಇರೋಕೆ ಬೇಕಾದ ವ್ಯವಸ್ಥೆ ಮಾಡಿದ್ದೇವೆ. ಬಾಂಗ್ಲಾದೇಶ ನೌಕಾಪಡೆ ಅಲ್ಲಿ ಮನೆ, ಆಸ್ಪತ್ರೆ, ಮಸೀದಿಗಳನ್ನ ಕಟ್ಟಿಸಿದೆ. ಮುಳುಗಡೆ ಆಗದಂತೆ ಸುತ್ತಲೂ ತಡೆಗೋಡೆ ಕೂಡ ಕಟ್ಟಲಾಗಿದೆ. ಮೇಲಾಗಿ ನಾವು ಯಾರನ್ನೂ ಒತ್ತಾಯ ಮಾಡಿ ಅಲ್ಲಿಗೆ ಕರ್ಕೊಂಡೋಗ್ತಿಲ್ಲ. ಪ್ರತಿಯೊಬ್ಬರೂ ಅವರೇ ಇಷ್ಟಪಟ್ಟು ಹೊಸ ಜಾಗಕ್ಕೆ ಹೋಗುತ್ತಿದ್ದಾರೆ ಅಂತ ಬಾಂಗ್ಲಾದೇಶದ ಸಂಪುಟ ಸಚಿವ ಒಬೈದುಲ್ ಖಾದರ್ ಹೇಳಿದ್ದಾರೆ. ಇದಕ್ಕೂ ಮೊದಲು ಬಾಂಗ್ಲಾದೇಶ ಮ್ಯಾನ್ಮಾರ್ ಜೊತೆ ಮಾತುಕತೆ ಮಾಡಿ ರೋಹಿಂಗ್ಯಾಗಳನ್ನ ವಾಪಸ್ ಕಳಿಸೋಕೆ ವ್ಯವಸ್ಥೆ ಮಾಡಿತ್ತು. ಆದ್ರೆ ಒಬ್ಬ ರೋಹಿಂಗ್ಯಾ ಕೂಡ ವಾಪಸ್ ಮ್ಯಾನ್ಮಾರ್​ಗೆ ಹೋಗೋಕೆ ರೆಡಿ ಇರಲಿಲ್ಲ.

-masthmagaa.com

Contact Us for Advertisement

Leave a Reply