masthmagaa.com:

ಕೊರೋನಾ ವೈರಸ್​ಗೆ ಭಾರತ ಮೂಲದ ಎರಡು ಕಂಪನಿಗಳು ಲಸಿಕೆ ಅಭಿವೃದ್ಧಿಪಡಿಸಿದ್ದು ಮಾನವ ಪ್ರಯೋಗಕ್ಕೂ ಅನುಮತಿ ಪಡೆದಿವೆ. ಇದರಲ್ಲಿ ಹೈದರಾಬಾದ್​ ಮೂಲದ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ‘ಕೋವಾಕ್ಸಿನ್’ ಲಸಿಕೆ ಇವತ್ತು ಹರಿಯಾಣದ ರೋಹ್ಟಕ್​ನಲ್ಲಿ ಮಾನವ ಪ್ರಯೋಗ ಆರಂಭಿಸಿದೆ.

ರೋಹ್ಟಕ್​ನ ಪೋಸ್ಟ್​ ಗ್ರಾಜುವೇಟ್ ಇನ್​ಸ್ಟಿಟ್ಯೂಟ್​ ಆಫ್ ಮೆಡಿಕಲ್ ಸೈನ್ಸಸ್​ನಲ್ಲಿ ಮಾನವ ಪ್ರಯೋಗ ನಡೆದಿದೆ. ಇವತ್ತು ಮೂವರು ಸ್ವಯಂಸೇವಕರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಯಾರ ಮೇಲೂ ಲಸಿಕೆಯ ಅಡ್ಡ ಪರಿಣಾಮ ಕಂಡುಬಂದಿಲ್ಲ ಅಂತ ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಇನ್ನು ಅಹಮದಾಬಾದ್​ ಮೂಲದ ಝೈಡಸ್ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿದ ಲಸಿಕೆಯ ಮಾನವ ಪ್ರಯೋಗ 2021ರ ಮಾರ್ಚ್​ನಲ್ಲಿ ಪೂರ್ಣಗೊಳ್ಳಲಿದೆ ಅಂತ ಕಂಪನಿಯ ಅಧ್ಯಕ್ಷ ಪಂಕಜ್ ಪಟೇಲ್ ಹೇಳಿದ್ದಾರೆ. ಒಂದುವೇಳೆ ಲಸಿಕೆಯ ಮಾನವ ಪ್ರಯೋಗ ಯಶಸ್ವಿಯಾದರೆ ವರ್ಷಕ್ಕೆ ಸುಮಾರು 10 ಕೋಟಿ ಡೋಸ್​ಗಳನ್ನ ಉತ್ಪಾದಿಸಬಹುದು ಅಂತ ಅವರು ಹೇಳಿದ್ದಾರೆ.

ಅಂದ್ಹಾಗೆ ಆಗಸ್ಟ್ 15ರೊಳಗೆ ‘ಕೋವಾಕ್ಸಿನ್’ ಲಸಿಕೆಯ ಮಾನವ ಪ್ರಯೋಗ ಮುಗಿಸಿ ದೇಶದ ಜನತೆಗೆ ಗುಡ್​ ನ್ಯೂಸ್​ ಕೊಡೋದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಈ ಸಂಬಂಧ ಭಾರತ್ ಬಯೋಟೆಕ್​ ಕಂಪನಿಗೆ ಐಸಿಎಂಆರ್ ಪತ್ರ ಕೂಡ ಬರೆದು ಆದಷ್ಟು ಬೇಗ ಮಾನವ ಪ್ರಯೋಗ ಮುಗಿಸುವಂತೆ ಸೂಚಿಸಿತ್ತು. ಆದ್ರೆ ಅಷ್ಟು ಬೇಗ ಮಾನವ ಪ್ರಯೋಗ ಮುಗಿಸೋದು ಅನುಮಾನ ಅನ್ನೋದು ತಜ್ಞರ ಮಾತು. ಇದೀಗ ಝೈಡಸ್ ಕ್ಯಾಡಿಲಾ ಕಂಪನಿ ಕೂಡ ತಾನು ಅಭಿವೃದ್ಧಿಪಡಿಸಿರುವ ಲಸಿಕೆಯ ಮಾನವ ಪ್ರಯೋಗ ಮುಂದಿನ ವರ್ಷ ಮಾರ್ಚ್​ ವೇಳೆಗೆ ಮುಗಿಯುತ್ತೆ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply