masthmagaa.com:

ಕಳೆದ ಡಿಸೆಂಬರ್​ನಲ್ಲಿ ಚೀನಾದ ವುಹಾನ್​ನಲ್ಲಿ ಕಾಣಿಸಿಕೊಂಡ ಕೊರೋನಾ ಮಹಾಮಾರಿ ಈಗ ಇಡೀ ಜಗತ್ತನ್ನೇ ಕಾಡುತ್ತಿದೆ. ಲಕ್ಷಾಂತರ ಮಂದಿ ಆಸ್ಪತ್ರೆಗಳಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಹಾಗಿದ್ರೆ ಸೋಂಕು ತಗುಲಿದವರು ಸಂಪೂರ್ಣವಾಗಿ ಗುಣಮುಖರಾಗೋಕೆ ಎಷ್ಟು ಸಮಯ ಬೇಕು ಅನ್ನೋ ಪ್ರಶ್ನೆ ಮೂಡುತ್ತೆ. ಕೆಲವರು ಬೇಗನೇ ಚೇತರಿಕೆ ಕಂಡರೆ, ಇನ್ನೂ ಕೆಲವರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ.  ಈ ಸಮಯವು ರೋಗಿಯ ವಯಸ್ಸು, ಲಿಂಗ ಹಾಗೂ ಇತರ ಆರೋಗ್ಯ ಸಮಸ್ಯೆಗಳ ಮೇಲೆ ನಿರ್ಧಾರವಾಗುತ್ತದೆ.

ಸಣ್ಣ ರೋಗ ಲಕ್ಷಣಗಳನ್ನ ಹೊಂದಿದ್ದರೆ:

ಕೊರೋನಾ ಸೋಂಕು ತಗುಲಿದವರಿಗೆ ರೋಗದ ಮುಖ್ಯ ಗುಣಲಕ್ಷಣಗಳಾದ ಕೆಮ್ಮು ಅಥವಾ ಜ್ವರ ಕಾಣಿಸುತ್ತದೆ. ಆರಂಭದಲ್ಲಿ ಕೆಮ್ಮು ಒಣ ಕೆಮ್ಮು ಕಾಣಿಸುತ್ತದೆ. ಆದ್ರೆ ಕೆಲವರು ಕೆಮ್ಮುವಾಗ ವೈರಸ್​ನಿಂದ ಕೊಲ್ಲಲ್ಪಟ್ಟ ಸತ್ತ ಶ್ವಾಸಕೋಶದ ಸೆಲ್​ಗಳನ್ನ ಹೊಂದಿರುವ ಮ್ಯೂಕಸ್ ಅಥವಾ ಲೋಳೆಯನ್ನ ಹೊರ ಹಾಕುತ್ತಾರೆ. ಜೊತೆಗೆ ಆಯಾಸ, ಗಂಟಲು ನೋವು, ತಲೆ ನೋವು ಕೂಡ ಕಾಣಿಸಬಹುದು. ಬೆಡ್​ ರೆಸ್ಟ್, ಪ್ಯಾರಸಿಟಮಲ್​ನಂತಹ ನೋವು ನಿವಾರಕಗಳೊಂದಿಗೆ ಇವುಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.

ಸಣ್ಣ ಪ್ರಮಾಣದ ರೋಗ ಲಕ್ಷಣ ಕಾಣಿಸಿಕೊಂಡವರು ತ್ವರಿತವಾಗಿ ಗುಣಮುಖರಾಗುತ್ತಾರೆ. ಕೆಮ್ಮು ಕಡಿಮೆಯಾಗಲು ಸಮಯ ತೆಗೆದುಕೊಂಡರೂ, ಜ್ವರ  ಒಂದು ವಾರದಲ್ಲಿ ಕಮ್ಮಿಯಾಗುತ್ತೆ. ವಿಶ್ವ ಆರೋಗ್ಯ ಸಂಸ್ಥೆ ಅಧ್ಯಯನ ಪ್ರಕಾರ, ಸಣ್ಣ ಪ್ರಮಾಣದ ರೋಗ ಲಕ್ಷಣ ಕಾಣಿಸಿಕೊಂಡವರು ಎರಡು ವಾರದಲ್ಲಿ ಚೇತರಿಕೆ ಕಾಣುತ್ತಾರೆ.

ಗಂಭೀರ ರೋಗ ಲಕ್ಷಣಗಳನ್ನ ಹೊಂದಿದ್ದರೆ:

ಕೊರೋನಾ ವೈರಸ್ ಕೆಲವರಿಗೆ ತುಂಬಾ ಅಪಾಯಕಾರಿಯಾಗುತ್ತೆ. ಎಷ್ಟು ಅಪಾಯಕಾರಿ ಅನ್ನೋದು ಸೋಂಕು ತಗುಲಿದ 7ರಿಂದ 10 ದಿನಗಳಲ್ಲಿ ಗೊತ್ತಾಗುತ್ತದೆ. ಈ ಹಂತದಲ್ಲಿ ರೋಗಿಗೆ ಉಸಿರಾಡಲು ಸಾಕಷ್ಟು ಕಷ್ಟವಾಗುತ್ತದೆ ಹಾಗೂ ಶ್ವಾಸಕೋಶವು ಊದಿಕೊಳ್ಳುತ್ತದೆ. ವೈರಾಣು ವಿರುದ್ಧ ದೇಹದಲ್ಲಿರೋ ರೋಗ ನಿರೋಧಕ ವ್ಯವಸ್ಥೆ ಹೋರಾಡಲು ಸಾಕಷ್ಟು ಪ್ರಯತ್ನಿಸುತ್ತದೆ. ಈ ವೇಳೆ ರೋಗಿಯ ದೇಹಕ್ಕೂ ಹಾನಿಯಾಗುತ್ತದೆ.

ಇನ್ನೂ ಕೆಲವರು ಆಕ್ಸಿಜನ್ ಥೆರಪಿಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ಈ ಹಂತದಲ್ಲಿ ಕಾಯಿಲೆಯಿಂದ ಚೇತರಿಸಿಕೊಳ್ಳಲು 2ರಿಂದ 8 ವಾರಗಳು ತೆಗೆದುಕೊಳ್ಳಬಹುದು ಅಂತ ತಜ್ಞರ ಅಭಿಪ್ರಾಯ.

ತೀವ್ರ ನಿಗಾದ ಚಿಕಿತ್ಸೆ ಅವಶ್ಯಕತೆ ಇದ್ದರೆ:

ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ 20 ಕೊರೋನಾ ಸೋಂಕಿತರಲ್ಲಿ ಒಬ್ಬರಿಗೆ ತೀವ್ರ ನಿಗಾದ ಚಿಕಿತ್ಸೆ ಅಗತ್ಯ. ಈ ಹಂತದಲ್ಲಿ ರೋಗಿಗೆ ವೆಂಟಿಲೇಟರ್ ಅನ್ನು ಅಳವಡಿಸಲಾಗುತ್ತದೆ. ತೀವ್ರ ನಿಗಾ ಘಟಕ ಅಥವಾ ಐಸಿಯು ಸೇರಿದ್ರೆ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ. ಮನೆಗೆ ಹೋಗುವ ಮೊದಲು ಐಸಿಯುನಿಂದ ಜನರಲ್​ ವಾರ್ಡ್​ಗೆ ಶಿಫ್ಟ್ ಮಾಡಲಾಗುತ್ತದೆ. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದ ನಂತರ ರೋಗಿಯು ಸಹಜ ಸ್ಥಿತಿಗೆ ಬರಲು 12ರಿಂದ 18 ತಿಂಗಳು ತೆಗೆದುಕೊಳ್ಳುತ್ತೆ.

ಇನ್ನು ಆಸ್ಪತ್ರೆಯ ಬೆಡ್​ನಲ್ಲಿ ದೀರ್ಘಕಾಲ ಕಳೆಯುವುದರಿಂದ ಸ್ನಾಯು ನೋವು ಉಂಟಾಗಬಹುದು. ರೋಗಿಗಳು ವೀಕ್ ಆಗಬಹುದು. ಇದೆಲ್ಲಾ ಸರಿ ಹೋಗಬೇಕಾದ್ರೆ ಮತ್ತಷ್ಟು ಸಮಯ ಬೇಕಾಗುತ್ತದೆ. ಕೆಲವರಿಗೆ ಮತ್ತೆ ಮೊದಲಿನಂತೆ ನಡೆಯಲು ಫಿಸಿಯೋಥೆರಪಿಯ ಅವಶ್ಯಕತೆ ಉಂಟಾಗುತ್ತದೆ. ಹೀಗಾಗಿ ರೋಗಿಗಳು ಸಂಪೂರ್ಣವಾಗಿ ಗುಣಮುಖರಾಗಲು ಸಾಕಷ್ಟ ಸಮಯ ತೆಗೆದುಕೊಳ್ಳುತ್ತದೆ. ಆದ್ರೆ ಇಷ್ಟೇ ಸಮಯ ಅಂತ ಹೇಳೋಕ್ಕಾಗಲ್ಲ.. ಯಾಕಂದ್ರೆ ಕೆಲವರು ಐಸಿಯುನಲ್ಲಿ ಕಡಿಮೆ ಸಮಯ ಕಳೆಯುತ್ತಾರೆ. ಇನ್ನೂ ಕೆಲವರಿಗೆ ವಾರಗಟ್ಟಲೆ ವೆಂಟಿಲೇಟರ್ ಸಪೋರ್ಟ್​ ಬೇಕಾಗುತ್ತದೆ.

-masthmagaa.com

Contact Us for Advertisement

Leave a Reply