ತೆಲಂಗಾಣದಿಂದ ಚತ್ತೀಸ್​ಗಢಕ್ಕೆ ನಡೆದ 12ರ ಪೋರಿ..! ಮನೆ ಹತ್ತಿರ ಬಂದಾಗ ಸಾವು..!

masthmagaa.com:

ತೆಲಂಗಾಣದಿಂದ ಚತ್ತೀಸ್​ಗಢದ ತನ್ನ ಮನೆಗೆ ಹೊರಟಿದ್ದ 12 ವರ್ಷದ ಬಾಲಕಿಯೊಬ್ಬಳು ಮನೆಯಿಂದ 14 ಕಿಲೋಮೀಟರ್ ದೂರ ಇರುವಾಗ ಸಾವನ್ನಪ್ಪಿದ್ದಾಳೆ. ಜಮ್ಲೋ ಮ್ಯಾಕ್​ಡಮ್​ ಎಂಬ ಬಾಲಕಿ ತೆಲಂಗಾಣದ ಮೆಣಸು ಬೆಳೆಯುವ ಜಾಗದಲ್ಲಿ ಕೆಲಸ ಮಾಡಿಕೊಂಡು ಚತ್ತೀಸ್​ಗಢದಲ್ಲಿದ್ದ ತನ್ನ ಕುಟುಂಬಕ್ಕೆ ಸಹಾಯ ಮಾಡುತ್ತಿದ್ದಳು. ಲಾಕ್​ಡೌನ್​ ಮೇ 3ರವರೆಗೆ ವಿಸ್ತರಣೆಯಾಗಿದ್ದರಿಂದ ಬಾಲಕಿ ತನ್ನ ಊರಿಗೆ ಹೋಗಲಾಗದೇ ತೆಲಂಗಾಣದಲ್ಲೇ ಸಿಲುಕಿದ್ದಳು.

ಬಾಲಕಿಯ ಊರಿಗೆ ಸೇರಿದ ಇತರೆ 11 ಮಂದಿ ಕೂಡ ಅಲ್ಲೇ ಸಿಲುಕಿದ್ದರು. ಹೀಗಾಗಿ ಬಾಲಕಿ ಮತ್ತು ಉಳಿದ 11 ಮಂದಿ ಚತ್ತೀಸ್​ಗಢದ ತಮ್ಮ ಊರಿಗೆ ನಡೆದುಕೊಂಡೇ ಹೋಗಲು ನಿರ್ಧರಿಸಿದ್ರು. ಅದರಂತೆ 3 ದಿನಗಳ ಕಾಲ ನಡೆದು, ಹೈವೇ ತಪ್ಪಿಸಲು ಕಾಡು- ಮೇಡುಗಳಲ್ಲಿ ಅಲೆದು ಚತ್ತೀಸ್​ಗಢ ತಲುಪಿದ್ದಾರೆ. ಆದ್ರೆ 150 ಕಿಲೋಮೀಟರ್ ನಡೆದಿದ್ದ ಬಾಲಕಿ ಇನ್ನೇನು ಮನೆ ತಲುಪಲು 14 ಕಿಲೋಮೀಟರ್ ಇರುವಾಗ ಸಾವನ್ನಪ್ಪಿದ್ದಾಳೆ. ಆಕೆಯ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಗ್ರಾಮಕ್ಕೆ ಸಾಗಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯರು ಬಾಲಕಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಆದ್ರೆ ಪರೀಕ್ಷೆ ವರದಿಯಲ್ಲಿ ಕೊರೋನಾ ಇಲ್ಲ ಎಂಬುದು ಸ್ಪಷ್ಟವಾಗಿದೆ. ಬಾಲಕಿ ಡಿಹೈಡ್ರೇಷನ್​​ಗೆ ಒಳಗಾಗಿ ಸಾವನ್ನಪ್ಪಿದ್ದಾಳೆ ಅಂತ ತಿಳಿಸಿದ್ದಾರೆ.

ಆದ್ರೆ ಇಲ್ಲಿ ಇನ್ನೊಂದು ಗಮನಿಸಬೇಕಾದ ವಿಚಾರ ಅಂದ್ರೆ ಬಾಲಕಿಗೆ ಇನ್ನೂ 12 ವರ್ಷ.. ಆದ್ರು ಕೂಡ ಆಕೆಯನ್ನು ಕೆಲಸಕ್ಕೆ ಕಳುಹಿಸಿದ್ದಾದ್ರೂ ಹೇಗೆ..? ಬಾಲಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾದ್ರು ಹೇಗೆ..? ಅನ್ನೋ ಪ್ರಶ್ನೆ ಎದುರಾಗಿದೆ.

-masthmagaa.com

Contact Us for Advertisement

Leave a Reply