ಲಾಕ್​ಡೌನ್​: ಬಿರಿಯಾನಿ, ಸಮೋಸಾ, ಸ್ವೀಟ್ಸ್ ನೀಡುವಂತೆ ಅಧಿಕಾರಿಗಳಿಗೆ ಬೇಡಿಕೆ..!

masthmagaa.com:

ದೆಹಲಿಯಲ್ಲಿ ಕೊರೋನಾ ಹಾವಳಿ ಮಿತಿ ಮೀರಿದ್ದು, ಕಂಟೈನ್​ಮೆಂಟ್​ ಜೋನ್​​ಗಳಲ್ಲಿ ಜನ ಮನೆಯಿಂದ ಹೊರಗೆ ಕಾಲಿಡದಂತೆ ಕಟ್ಟಪ್ಪಣೆ ಮಾಡಲಾಗಿದೆ. ಅಲ್ಲದೆ ಅಗತ್ಯ ವಸ್ತುಗಳನ್ನು ಅಧಿಕಾರಿಗಳ ಮೂಲಕವೇ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ. ಆದ್ರೆ ಅತಿ ಬುದ್ಧಿವಂತಿಕೆಯ ಜನ ಮಾತ್ರ ನಮಗೆ ಬಿರಿಯಾನಿ ತಂದುಕೊಡಿ, ಸ್ವೀಟ್ಸ್ ತಂದುಕೊಡಿ, ಬಿಸಿ ಬಿಸಿ ಸಮೋಸಾ ತಂದುಕೊಡಿ ಅಂತ ಅಧಿಕಾರಿಗಳಿಗೆ ಕಿರಿಕ್ ಮಾಡ್ತಿದ್ದಾರೆ.

ಈ ಪ್ರದೇಶಗಳಲ್ಲಿ ಪೊಲೀಸರು ಮತ್ತು ಸ್ಥಳೀಯ ಆಡಳಿತ ಸೇರಿಕೊಂಡು ವಾಟ್ಸಾಪ್ ಗ್ರೂಪ್​ಗಳನ್ನು ರಚಿಸಿವೆ. ಈ ಮೂಲಕ ಜನರು ಅಗತ್ಯ ವಸ್ತುಗಳಿಗಾಗಿ ಬೇಡಿಕೆ ಸಲ್ಲಿಸಬಹುದು. ಅದರಂತೆ ಅಧಿಕಾರಿಗಳು ಅಗತ್ಯ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ.

ದೆಹಲಿಯ ನರೇಲಾದಲ್ಲಿರುವ ಅಧಿಕಾರಿಗಳಿಗೆ ಕೆಲ ಗ್ರಾಮಸ್ಥರು ಚಿಕನ್ ಬಿರಿಯಾನಿ ಮತ್ತು ಮಟನ್​​​ಗೆ ಬೇಡಿಕೆ ಇಟ್ಟಿದ್ದಾರೆ. ಅದೇ ರೀತಿ ದಕ್ಷಿಣ ದೆಹಲಿಯಲ್ಲಿ 9 ಕಂಟೈನ್​ಮೆಂಟ್ ಜೋನ್​ಗಳಿದ್ದು, ಇಲ್ಲಿನ ಕೆಲ ನಿವಾಸಿಗಳು ಪಿಜ್ಜಾ, ಬಿಸಿ ಬಿಸಿ ಸಮೋಸಾ ತಂದು ಕೊಡುವಂತೆ ಅಧಿಕಾರಿಗಳಿಗೆ ತಲೆ ತಿನ್ನುತ್ತಿದ್ದಾರೆ. ಅಲ್ಲದೆ ದೆಹಲಿಯ ಹಲವು ಭಾಗಗಳಲ್ಲಿ ಜನ ಸ್ವೀಟ್ಸ್ ತಂದುಕೊಡುವಂತೆ ಅಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು, ನಾವು ಕ್ಷುಲ್ಲಕ ಬೇಡಿಕೆಗಳನ್ನು ಈಡೇರಿಸುವುದಿಲ್ಲ. ಇಂತಹ ಬಿಕ್ಕಟ್ಟಿನಲ್ಲಿ ತರಕಾರಿ, ನೀರು ಮತ್ತು ಹಾಲಿನಂತಹ ಅಗತ್ಯ ವಸ್ತುಗಳನ್ನು ತಲುಪಿಸುವುದು ಮಾತ್ರ ನಮ್ಮ ಕರ್ತವ್ಯ. ಹೀಗಾಗಿ ಇಂತಹ ವಿಚಿತ್ರ ಬೇಡಿಕೆಗಳು ಬಂದಲ್ಲಿ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ ಎಂದು ನಮ್ಮ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದಿದ್ದಾರೆ.

ದೆಹಲಿಯಲ್ಲಿ 76 ಕಂಟೈನ್​ಮೆಂಟ್ ಜೋನ್​ಗಳನ್ನು ಗುರುತಿಸಲಾಗಿದೆ. ಒಟ್ಟಾರೆಯಾಗಿ 1,893 ಮಂದಿಯಲ್ಲಿ ಕೊರೋನಾ ಪತ್ತೆಯಾಗಿದ್ದು, ಈವರೆಗೆ 43 ಮಂದಿ ಸಾವನ್ನಪ್ಪಿದ್ದಾರೆ.

-masthmagaa.com

 

Contact Us for Advertisement

Leave a Reply