masthmagaa.com:

ಹೈದ್ರಾಬಾದ್​ ಮೂಲದ ಭಾರತ್ ಬಯೋಟೆಕ್ ಐಸಿಎಂಆರ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸುತ್ತಿರುವ ‘ಕೋವಾಕ್ಸಿನ್’ ಲಸಿಕೆಯನ್ನು 2021ರ ಫೆಬ್ರವರಿ ತಿಂಗಳಲ್ಲಿ ಬಿಡುಗಡೆ ಮಾಡುವ ಗುರಿಯನ್ನ ಕಂಪನಿ ಹೊಂದಿದೆ. ಹೀಗಾಗಿ ದೇಶದಲ್ಲಿ ಕೊರೋನಾ ಲಸಿಕೆ ಸಿಕ್ಕ ಕೂಡಲೇ ಅದನ್ನ ಯಾರಿಗೆ ಮೊದಲು ಹಾಕಬೇಕು ಅನ್ನೋ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಕೊರೋನಾ ವಾರಿಯರ್ಸ್, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮೊದಲು ಲಸಿಕೆ ನೀಡಲಾಗುತ್ತೆ ಅಂತ ಕೇಂದ್ರ ಸರ್ಕಾರ ಕೂಡ ಹೇಳಿದೆ. ಇದೀಗ ಕೇಂದ್ರದ ತಜ್ಞರ ತಂಡವೊಂದು ಯಾವ ವರ್ಗದ ಜನರಿಗೆ ಮೊದಲು ಲಸಿಕೆ ನೀಡಬೇಕು ಅನ್ನೋ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿದೆ. ಇದರ ಪ್ರಕಾರ 4 ವರ್ಗಗಳ ಸುಮಾರು 30 ಕೋಟಿ ಜನರಿಗೆ ಆರಂಭದಲ್ಲಿ ಕೊರೋನಾ ಲಸಿಕೆ ಸಿಗಲಿದೆ.

ಮೊದಲನೇ ವರ್ಗ: ಈ ವರ್ಗದಲ್ಲಿ ವೈದ್ಯರು, ನರ್ಸ್​ಗಳು, ಆಶಾ ಕಾರ್ಯಕರ್ತೆಯರು, ವೈದ್ಯಕೀಯ ವಿದ್ಯಾರ್ಥಿಗಳು ಇದ್ದಾರೆ. ದೇಶದಲ್ಲಿ ಸುಮಾರು 1 ಕೋಟಿಯಷ್ಟು ಜನ ಈ ವರ್ಗದವರಿದ್ದಾರೆ ಅಂತ ಅಂದಾಜಿಸಲಾಗಿದೆ.

ಎರಡನೇ ವರ್ಗ: ಈ ವರ್ಗದಲ್ಲಿ ಫ್ರಂಟ್​ಲೈನ್ ವರ್ಕರ್ಸ್​ ಬರ್ತಾರೆ. ಅಂದ್ರೆ ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ, ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಲಸಿಕೆ ಹಾಕಲಾಗುತ್ತದೆ. ಇವರ ಸಂಖ್ಯೆ 2 ಕೋಟಿ ಇದೆ.

ಮೂರನೇ ವರ್ಗ: ಇದರಲ್ಲಿ 50 ವರ್ಷ ಮೇಲ್ಪಟ್ಟವರು ಬರ್ತಾರೆ. ಇವರ ಸಂಖ್ಯೆ 26 ಕೋಟಿಯಷ್ಟಿದೆ.

ನಾಲ್ಕನೇ ವರ್ಗ: ಇದರಲ್ಲಿ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಕೆಳಗಿರುವವರು ಬರ್ತಾರೆ. ಈ ವರ್ಗದಲ್ಲಿ 1 ಕೋಟಿ ಜನರಿದ್ದಾರೆ ಅಂತ ತಜ್ಞರ ಗುಂಪು ಹೇಳಿದೆ.

ಇವರೆಲ್ಲರಿಗೂ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ. ಯಾರಿಗೆ ಲಸಿಕೆ ಹಾಕಲಾಗಿದೆ ಅನ್ನೋದನ್ನ ಆಧಾರ್ ಕಾರ್ಡ್​ ಮೂಲಕ ಟ್ರ್ಯಾಕ್ ಮಾಡಲಾಗುತ್ತದೆ. ಹಾಗಂತ ಲಸಿಕೆ ಹಾಕಿಸಿಕೊಳ್ಳಲು ಆಧಾರ್ ಕಾರ್ಡ್​ ಕಡ್ಡಾಯವಲ್ಲ. ಆಧಾರ್ ಕಾರ್ಡ್​ ಇಲ್ಲದಿದ್ದರೆ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಬಹುದು. ಕೇಂದ್ರ ಸರ್ಕಾರ ಈಗಾಗಲೇ ಕೊರೋನಾ ಲಸಿಕೆ ಅಭಿಯಾನದ ಕುರಿತು ಟಾಸ್ಕ್ ಫೋರ್ಸ್​ ರಚಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

-masthmagaa.com

Contact Us for Advertisement

Leave a Reply