‘ಒಂದು ಧರ್ಮದ ಅವಹೇಳನ ಎಂಬ ಹೆಸರಿನ ದೌರ್ಜನ್ಯ’: ಹೆಚ್​.ಡಿ. ಕುಮಾರಸ್ವಾಮಿ

masthmagaa.com:

ಬೆಂಗಳೂರಿನ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ನಡೆದ ಗಲಭೆಯು ಒಂದು ಧರ್ಮದ ಅವಹೇಳನ ಎಂಬ ಹೆಸರಿನ ದೌರ್ಜನ್ಯ ಅಂತ ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಅಮಾನವೀಯ, ನಡೆಯಬಾರದ ಘಟನೆ. ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸಿ ಗಲಭೆ ಮಾಡಿದ್ದಕ್ಕೆ ಕಾರಣ ಏನು ಅನ್ನೋದು ಹೊರಬರಬೇಕು. ಫೇಸ್​ಬುಕ್​ನಲ್ಲಿ ಅವಹೇಳನಕಾರಿ ಪೋಸ್ಟ್​ ಮಾಡಿದ ಬಗ್ಗೆಯೂ ತನಿಖೆ ನಡೆಯಬೇಕು. ಆತ ತನ್ನ ಅಕೌಂಟ್ ಹ್ಯಾಕ್ ಆಗಿದೆ ಅಂತ ಹೇಳ್ತಿದ್ದಾನೆ. ಒಂದ್ವೇಳೆ ಹ್ಯಾಕ್ ಆಗಿದ್ದರೆ ಹ್ಯಾಕ್ ಮಾಡಿದವರು ಯಾರು..? ಈತನ ಅಕೌಂಟ್​ನಿಂದಲೇ ಯಾಕೆ ಪೋಸ್ಟ್​ ಮಾಡಿದ್ರು..? ಇದು ವ್ಯವಸ್ಥಿತವಾಗಿ ನಡೆದಿರುವ ಸಂಚು ಇರಬಹುದು ಅಂತ ಹೆಚ್​ಡಿಕೆ ಹೇಳಿದ್ದಾರೆ.

ಏಕಾಏಕಿ ನೂರಾರು ಜನರನ್ನು ಸೇರಿಸಿ ದಾಂಧಲೆ ನಡೆಸಿ ಜನ ಭಯದಲ್ಲೇ ರಾತ್ರಿ ಕಳೆಯುವಂತೆ ಮಾಡಿದ್ದು ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿರೋದು ಖಂಡನೀಯ. ಇದು ಒಂದು ಧರ್ಮದ ಅವಹೇಳನ ಎಂಬ ಹೆಸರಿನ ದೌರ್ಜನ್ಯವಾಗಿದೆ. ಧರ್ಮಕ್ಕೆ ಅವಮಾನ ಮಾಡಿದ್ರೆ ಈ ರೀತಿ ಅಮಾನುಷ ಕೃತ್ಯ, ರಾಕ್ಷಸ ಕೃತ್ಯವನ್ನು ಎಸಗಿ ಅಂತ ಯಾವ ಧರ್ಮದಲ್ಲೂ ಹೇಳಿಲ್ಲ. ಧರ್ಮಕ್ಕೆ ಅವಮಾನ ಆಯ್ತು ಅಂತ ಪೊಲೀಸರ ಮೇಲೆ ದೌರ್ಜನ್ಯ ನಡೆದಿದ್ದು, ಗೋಲಿಬಾರ್​ಗೆ ಮೂವರು ಬಲಿಯಾಗಿದ್ದು, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಶಾಸಕರ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ದು, ಇವೆಲ್ಲವನ್ನು ಸಣ್ಣದಾಗಿ ತೆಗೆದುಕೊಳ್ಳುವ ವಿಚಾರ ಅಲ್ಲ. ಇದರ ಹಿಂದೆ ಕೆಲ ರಾಜಕೀಯ ಶಕ್ತಿಗಳು ಕೂಡ ಕೆಲಸ ಮಾಡಿರಬಹುದು.

ಇಂತಹ ದುಷ್ಕೃತ್ಯಗಳಿಗೆ ನಮ್ಮ ಬೆಂಬಲ ಇಲ್ಲ. ಯಾವ ಧರ್ಮ ಕೂಡ ಈ ರೀತಿ ಮಾಡಿ ಅಂತ ಹೇಳಲ್ಲ. ಆದ್ರೆ ಧರ್ಮದ ಹೆಸರಿನ್ನು ದುರುಪಯೋಗ ಪಡಿಸಿಕೊಂಡು ಇಂತಹ ಸಮಾಜಘಾತುಕ ಶಕ್ತಿಗಳು ಕಾನೂನನ್ನು ಕೈಗೆತ್ತಿಕೊಳ್ಳಲು ಪ್ರಯತ್ನಿಸುತ್ತಿವೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಸತ್ಯವನ್ನು ಹೊರತರಬೇಕು. ನಮ್ಮದು ಮೊದಲಿನಿಂದಲೂ ಶಾಂತಿಪ್ರಿಯ ರಾಜ್ಯ. ಅದಕ್ಕೆ ಧಕ್ಕೆ ಬರದಿರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಅಂತ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply