masthmagaa.com:

‘ಪ್ರತಿಭಟನೆ ವೇಳೆ ಸಾರ್ವಜನಿಕ ಆಸ್ತಿಗೆ ಹಾನಿ ಮಾಡದಿದ್ರೆ ಅಥವಾ ಯಾರ ಜೀವಕ್ಕೂ ಅಪಾಯವನ್ನ ಉಂಟು ಮಾಡದಿದ್ರೆ ಆ ಪ್ರತಿಭಟನೆ ಸಾಂವಿಧಾನಿಕ’ ಅಂತ ಸುಪ್ರೀಂಕೋರ್ಟ್ ಹೇಳಿದೆ. ಜೊತೆಗೆ ರೈತರು ಮತ್ತು ಕೇಂದ್ರ ಸರ್ಕಾರಕ್ಕೆ ಕೆಲವೊಂದು ಸೂಚನೆ ಕೊಟ್ಟಿದೆ. ‘ಕೇಂದ್ರ ಸರ್ಕಾರ ಮತ್ತು ರೈತರು ಮಾತುಕತೆ ನಡೆಸಬೇಕು. ಇದಕ್ಕಾಗಿ ನಾವು ನಿಷ್ಪಕ್ಷಪಾತ ಮತ್ತು ಸ್ವತಂತ್ರ ಸಮಿತಿಯನ್ನ ರಚಿಸಲು ಯೋಚಿಸತ್ತಿದ್ದೇವೆ. ಈ ಸಮಿತಿಯ ಮುಂದೆ ಎರಡೂ ಕಡೆಯವರು ತಮ್ಮ ವಾದವನ್ನ ಮುಂದಿಡಬಹುದು. ಈ ಸಮಿತಿಯು ಎಲ್ಲರೂ ಒಪ್ಪಿಕೊಳ್ಳಬೇಕಾದ ಅಂಶಗಳನ್ನ ನೀಡುತ್ತೆ. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರಿಯಬಹುದು. ಆದ್ರೆ ರೈತರು ಪ್ರತಿಭಟನೆಯನ್ನ ಹಿಂಸಾರೂಪಕ್ಕೆ ತಿರುಗಿಸಬಾರದು. ಈ ರೀತಿ ರಸ್ತೆಗಳನ್ನ ಬಂದ್ ಮಾಡಿ ಕೂರಬಾರದು. ರಸ್ತೆಗಳನ್ನ ಬಂದ್ ಮಾಡೋದ್ರಿಂದ ಬೇರೆಯವರಿಗೆ ಸಮಸ್ಯೆಯಾಗುತ್ತೆ. ನಿಮ್ಮ ಸಮಸ್ಯೆಯನ್ನ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು. ಕೇವಲ ಪ್ರತಿಭಟನೆಗೆ ಕೂರೋದ್ರಿಂದ ಏನೂ ಲಾಭವಿಲ್ಲ. ಪ್ರತಿಭಟನೆ ಮಾಡೋದು ಮೂಲಭೂತ ಹಕ್ಕು. ಅದನ್ನ ನಾವು ತಡೆಯೋದಿಲ್ಲ. ಆದ್ರೆ ಪ್ರತಿಭಟನೆಯಿಂದ ಯಾರ ಜೀವಕ್ಕೂ ಅಪಾಯವಾಗಬಾರದು. ಸಾರ್ವಜನಿಕ ಆಸ್ತಿ ನಾಶವಾಗರದು. ರೈತರ ಪ್ರತಿಭಟನೆ ವೇಳೆ ಇದನ್ನ ಫಾಲೋ ಮಾಡಲಾಗ್ತಿದೆಯಾ ಅನ್ನೋದನ್ನ ಕೇಂದ್ರ ಸರ್ಕಾರಕ್ಕೆ ನಾವು ಕೇಳುತ್ತೇವೆ. ಅಗತ್ಯಬಿದ್ದರೆ ಕೆಲವೊಂದು ಬದಲಾವಣೆ ಮಾಡಲು ಹೇಳ್ತೀವಿ. ಆದ್ರೆ ಹೀಗೆ ಮಾಡುವಾಗ ಜನರ ಮೂಲಭೂತ ಹಕ್ಕುಗಳಿಗೆ ಧಕ್ಕೆ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ನಾವು ಭಾರತೀಯರು. ರೈತರ ಕಷ್ಟ ಏನು ಅನ್ನೋದು ನಮಗೆ ಗೊತ್ತು. ರೈತರು ಕೇವಲ ಪ್ರತಿಭಟನೆ ನಡೆಸುತ್ತಿರುವ ರೀತಿಯನ್ನ ಬದಲಾಯಿಸಿಕೊಳ್ಳಬೇಕು. ನಿಮ್ಮ ಎಲ್ಲಾ ವಾದಗಳನ್ನ ಆಲಿಸಲು ಸಿದ್ಧ. ಹೀಗಾಗಿಯೇ ಸಮಿತಿಯನ್ನ ರಚಿಸಲು ಯೋಚಿಸುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದ ನೋಟಿಸ್​ ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ರೈತ ಸಂಘಟನೆಗಳಿಗೂ ತಲುಪಿಸಬೇಕು’ ಅಂತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್​.ಎ. ಬೊಬ್ಡೆ ಹೇಳಿದ್ದಾರೆ. ಸುಪ್ರೀಂಕೋರ್ಟ್​ನ ಈ ತೀರ್ಪು ಕೇವಲ ರೈತರ ಪ್ರತಿಭಟನೆಗೆ ಮಾತ್ರ ಸೀಮಿತವಾಗಿಲ್ಲ, ದೇಶದ ವಿವಿಧ ಭಾಗಗಳಲ್ಲಿ ಆಗಾಗ ನಡೆಯುವ ಪ್ರತಿಭಟನೆಗೂ ಮಾದರಿಯಾಗಿದೆ. ಪ್ರತಿಭಟನೆ ವೇಳೆ ರಸ್ತೆಗಳನ್ನ ಬಂದ್ ಮಾಡಬಾರದು, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಬಾರದು, ಯಾರ ಜೀವಕ್ಕೂ ಅಪಾಯ ಉಂಟು ಮಾಡಬಾರದು. ಉಳಿದಂತೆ ಪ್ರತಿಭಟನೆ ನಡೆಸಲು ಈ ದೇಶದ ಎಲ್ಲರಿಗೂ ಹಕ್ಕಿದೆ.

-masthmagaa.com

Contact Us for Advertisement

Leave a Reply