masthmagaa.com:

ದೆಹಲಿಯ ವಿಜ್ಞಾನ ಭವನದಲ್ಲಿ ಇವತ್ತು ನಡೆದ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವಿನ 6ನೇ ಸುತ್ತಿನ ಮಾತುಕತೆ ಮುಕ್ತಾಯಗೊಂಡಿದ್ದು ಬಹುತೇಕ ಯಶಸ್ವಿಯಾದಂತೆ ಕಾಣ್ತಿದೆ. ಸಭೆ ಬಳಿಕ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ‘ಇವತ್ತಿನ ಮಾತುಕತೆ ಒಳ್ಳೇ ರೀತಿಯಲ್ಲಿ ಕೊನೆಗೊಂಡಿದೆ. ಇವತ್ತಿನ ಸಭೆಯಲ್ಲಿ ಪ್ರಮುಖವಾಗಿ 4 ವಿಚಾರಗಳ ಪೈಕಿ 2 ವಿಚಾರಗಳ ಬಗ್ಗೆ ಎರಡೂ ಕಡೆಯವರು ಒಮ್ಮತಕ್ಕೆ ಬಂದಿದ್ದೇವೆ. ಅದರಲ್ಲಿ ಮೊದಲನೇದು, ಪರಿಸರ ಕುರಿತ ಒಂದು ಸುಗ್ರೀವಾಜ್ಞೆಗೆ ಸಂಬಂಧಿಸಿದ್ದು. ಇದರಿಂದ ರೈತರನ್ನ ಹೊರಗಿಡಲು ಎರಡೂ ಕಡೆಯವರು ಒಪ್ಪಿಕೊಂಡಿದ್ದೇವೆ. ಎರಡನೇದು, ಎಲೆಕ್ಟ್ರಿಸಿಟಿ ಆ್ಯಕ್ಟ್​ನಲ್ಲಿ ಸುಧಾರಣೆ ತಂದ್ರೆ ತಮಗೆ ನಷ್ಟವಾಗುತ್ತೆ ಅನ್ನೋದು ರೈತರ ವಾದ. ​ನೀರಾವರಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ಕರೆಂಟ್​ಗೆ ನೀಡುತ್ತಿರುವ ಸಬ್ಸೀಡಿ ಮುಂದುವರಿಸಬೇಕು ಅನ್ನೋದು ರೈತ ಸಂಘಟನೆಗಳ ಬೇಡಿಕೆ. ಇದಕ್ಕೆ ಸಂಬಂಧಿಸಿದಂತೆಯೂ ಒಮ್ಮತಕ್ಕೆ ಬರಲಾಗಿದೆ. ಕನಿಷ್ಠ ಬೆಂಬಲ ಬೆಲೆ (MSP) ಮುಂದುವರಿಯುತ್ತೆ ಅಂತ ಸರ್ಕಾರ ಹೇಳ್ತಾನೆ ಇದೆ. ಇದನ್ನ ಲಿಖಿತ ರೂಪದಲ್ಲಿ ಕೊಡಲು ನಾವು ಸಿದ್ಧರಿದ್ದೇವೆ. ಆದ್ರೆ MSPಗೆ ಕಾನೂನು ಮಾನ್ಯತೆ ಕೊಡಬೇಕು ಅನ್ನೋದು ಸಂಘಟನೆಗಳ ಬೇಡಿಕೆ. MSPಯ ಕಾನೂನು ಮಾನ್ಯತೆ ಸೇರಿದಂತೆ ಉಳಿದ ವಿಚಾರಗಳ ಬಗ್ಗೆ ಜನವರಿ 4ರಂದು ಮಧ್ಯಾಹ್ನ 2 ಗಂಟೆಗೆ ಮತ್ತೆ ಮಾತುಕತೆ ನಡೆಸಲಾಗುತ್ತೆ’ ಅಂತ ಹೇಳಿದ್ರು.

ಇನ್ನು ಆಲ್​ ಇಂಡಿಯಾ ಕಿಸಾನ್ ಸಭಾದ ಪಂಜಾಬ್​ ಅಧ್ಯಕ್ಷ ಬಾಲ್​ಕರನ್ ಸಿಂಗ್ ಬ್ರಾರ್ ಮಾತನಾಡಿ, ‘ಇವತ್ತಿನ ಮಾತುಕತೆ ಪಾಸಿಟಿವ್ ಆಗಿತ್ತು. ಪ್ರತಿಭಟನೆ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಹೇಳಿದೆ. ನಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಲು ಸಮಿತಿ ರಚಿಸೋದಾಗಿ ಹೇಳಿದೆ. ಆದ್ರೆ ನಾವು ಅದಕ್ಕೆಲ್ಲಾ ಒಪ್ಪಲ್ಲ. ನಮ್ಮ ಹೋರಾಟ ಮುಂದುವರಿಯುತ್ತೆ. ನಾವು ಯಾವುದೇ ಸಮಿತಿಯನ್ನ ರಚಿಸಲ್ಲ. ಮುಂದಿನ ಸಭೆಯಲ್ಲಿ ನಾವು MSP ಬಗ್ಗೆ ಚರ್ಚಿಸುತ್ತೇವೆ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply