masthmagaa.com:

ಭಾರತದ ಜೊತೆ ಪದೇಪದೆ ಕಿರಿಕ್ ಮಾಡುತ್ತಿರುವ ಚೀನಾ ಈಗ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಜಮ್ಮು-ಕಾಶ್ಮೀರ ವಿಚಾರವನ್ನು ಪ್ರಸ್ತಾಪಿಸಿ ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಿದೆ. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

‘ಭಾರತದ ಕೇಂದ್ರಾಡಳಿತ ಪ್ರದೇಶವಾಗಿರುವ ಜಮ್ಮು-ಕಾಶ್ಮೀರ ಕುರಿತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚೀನಾ ಚರ್ಚೆ ಆರಂಭಿಸಿರೋದು ನಮ್ಮ ಗಮನಕ್ಕೆ ಬಂದಿದೆ. ಭಾರತದ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸಲು ಪ್ರಯತ್ನಿಸಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಇಂಥದ್ದೇ ಪ್ರಯತ್ನಕ್ಕೆ ಕೈ ಹಾಕಿದ್ದ ಚೀನಾಗೆ ಅಂತಾರಾಷ್ಟ್ರೀಯ ಸಮುದಾಯದಿಂದ ಬೆಂಬಲ ಸಿಕ್ಕಿರಲಿಲ್ಲ. ಈಗಲೂ ಹಾಗೇ ಆಗಿದೆ. ನಮ್ಮ ಆಂತರಿಕ ವ್ಯವಹಾರದಲ್ಲಿ ಚೀನಾದ ಹಸ್ತಕ್ಷೇಪವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ’ ಅಂತ ಭಾರತದ ವಿದೇಶಾಂಗ ಇಲಾಖೆ ಹೇಳಿದೆ.

ಗಾಲ್ವಾನ್​ ಕಣಿವೆಯಲ್ಲಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆದ ಬಳಿಕ ಉಭಯ ದೇಶಗಳ ಸಂಬಂಧ ಹಳಿಸಿದೆ. ಚೀನಾ ಮೂಲದ 59ಕ್ಕೂ ಹೆಚ್ಚು ಅಪ್ಲಿಕೇಶನ್​ಗಳನ್ನು ಭಾರತ ಬ್ಯಾನ್ ಮಾಡಿದೆ. ದೇಶದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನ ಕೂಡ ಜೋರಾಗಿ ನಡೆಯುತ್ತಿದೆ. ಇದೆಲ್ಲದರ ನಡುವೆ ಭಾರತದ ಆಂತರಿಕ ವಿಚಾರದಲ್ಲಿ ಚೀನಾ ಮತ್ತೆ ಮೂಗು ತೂರಿಸಿದೆ.

-masthmagaa.com

Contact Us for Advertisement

Leave a Reply