ಕೊರೋನಾ ಪೀಡಿತರ ಸಂಖ್ಯೆ 354ಕ್ಕೆ ಏರಿಕೆ..! ದೇಶದ 75 ಜಿಲ್ಲೆಗಳು ಲಾಕ್​ಡೌನ್​​

masthmagaa.com:

ಭಾರತದಲ್ಲಿ ಕೊರೋನಾ ವೈರಸ್ ಹಾವಳಿ ಮುಂದುವರಿದಿದೆ. ಕೊರೋನಾ ವೈರಸ್ ಪೀಡಿತರ ಸಂಖ್ಯೆ 354ಕ್ಕೆ ಏರಿಕೆಯಾಗಿದೆ. ಅಂದ್ರೆ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 80 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  ಭಾರತದಲ್ಲಿ 6 ಮಂದಿ ಈ ಮಹಾಮಾರಿಗೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ 73 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಕೊರೋನಾದಿಂದ ದೇಶದ 22 ರಾಜ್ಯಗಳು ಪ್ರಭಾವಿತಗೊಂಡಿವೆ.

ಕೊರೋನಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್​​ 31ರವರೆಗೆ ರೈಲ್ವೆ ಮತ್ತು ಮೆಟ್ರೋ ಸೇವೆಗಳನ್ನು ದೇಶದಾದ್ಯಂತ ಬಂದ್ ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ದೇಶದ 75 ಜಿಲ್ಲೆಗಳನ್ನು ಸಂಪೂರ್ಣವಾಗಿ ಲಾಕ್​ಡೌನ್ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಕೊರೋನಾ ಸೋಂಕಿತರು ಪತ್ತೆಯಾದ ಜಿಲ್ಲೆಗಳು ಈ ಪಟ್ಟಿಯಲ್ಲಿ ಸೇರಿವೆ.

ಅದರಂತೆ ರಾಜ್ಯದ 9 ಜಿಲ್ಲೆಗಳನ್ನು ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವೈದ್ಯಕೀಯ ಸೇವೆ, ದಿನಸಿ, ಕೃಷಿ ಮತ್ತು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಾಣಿಜ್ಯ ಚಟುವಟಿಕೆಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈ ಜಿಲ್ಲೆಗಳಲ್ಲಿ ಕಾರ್ಮಿಕರು ಹೆಚ್ಚಿರುವ ಕಾರ್ಖಾನೆಗಳಲ್ಲಿ ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸಬೇಕೆಂದು ಸೂಚಿಸಲಾಗಿದೆ. ಈ ಜಿಲ್ಲೆಗಳಲ್ಲಿ ಅಂತರ್​​​ ಜಿಲ್ಲಾ ಸಾರಿಗೆ ವ್ಯವಸ್ಥೆಯನ್ನು ಮಾರ್ಚ್​​ 31ರವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.  ಆದ್ರೆ ನಾಳೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಎಂದಿನಂತೆ ನಡೆಯಲಿದೆ.

ರಾಜ್ಯದಲ್ಲಿ ನಾಳೆ ಕೂಡ ಸಾರ್ವಜನಿಕ ಸಾರಿಗೆ ಸೇವೆಯನ್ನು ರದ್ದುಗೊಳಿಸಲು ತೀರ್ಮಾನಿಸಲಾಗಿದೆ. ಅಂದ್ರೆ ನಾಳೆ ಕೂಡ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​​, ಮೆಟ್ರೋ ಸಂಚಾರ ಇರೋದಿಲ್ಲ. ಮಾರ್ಚ್​ 31ರವರೆಗೆ ಎಲ್ಲಾ ಎಸಿ ಬಸ್​​ಗಳ ಸಂಚಾರ ಸ್ಥಗಿತಗೊಳಿಸಿ ಆದೇಶಿಸಲಾಗಿದೆ.

ಇನ್ನು ಇಂದು ರಾತ್ರಿ 9 ಗಂಟೆಗೆ ಜನತಾ ಕರ್ಫ್ಯೂ ಮುಗಿದ ಬಳಿಕ 12 ಗಂಟೆವರೆಗೆ ರಾಜ್ಯಾದ್ಯಂತ ಸೆಕ್ಷನ್ 144 ಹೇರಲು ನಿರ್ಧರಿಸಲಾಗಿದೆ.

-masthmagaa.com

Contact Us for Advertisement

Leave a Reply