masthmagaa.com:

ಮಹತ್ವದ ಬೆಳವಣಿಗೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಸೌದಿ ಯುವರಾಜ​ ಮೊಹಮ್ಮದ್ ಬಿನ್ ಸಲ್ಮಾನ್ ಮಧ್ಯೆ ಸೀಕ್ರೆಟ್ ಮೀಟಿಂಗ್ ನಡೆದಿರೋ ವಿಚಾರ ಬಯಲಾಗಿದೆ. ಅಮೆರಿಕದ ವಿದೇಶಾಂಗ ಸಚಿವ ಮೈಕ್ ಪಾಂಪಿಯೋ ಮಧ್ಯಸ್ಥಿಕೆಯಲ್ಲಿ, ಸೌದಿಯ ನಿಯೋಮ್​ನಲ್ಲಿ ಈ ಸೀಕ್ರೆಟ್ ಮೀಟಿಂಗ್ ನಡೆದಿದೆ. ಇಸ್ರೇಲ್ ಒಂದು ಯಹೂದಿ ರಾಷ್ಟ್ರ. ಈ ದೇಶವನ್ನ ಕಂಡರೆ ಗಲ್ಫ್​​ನ ಅರಬ್ ಮುಸ್ಲಿಂ ರಾಷ್ಟ್ರಗಳಿಗೆ ಆಗೋದಿಲ್ಲ. ಇರಾನ್ ಅಂತೂ ಇಸ್ರೇಲ್ ಅಂದ್ರೆ ಉರಿದುರಿದು ಬೀಳುತ್ತೆ. ಆದ್ರೆ ಕಳೆದ ಕೆಲ ವರ್ಷಗಳಲ್ಲಿ ಇಸ್ರೇಲ್ ಅರಬ್ ಜಗತ್ತಿನ ಕೆಲ ದೇಶಗಳೊಂದಿಗೆ ಸಂಬಂಧ ಸುಧಾರಿಸಲು ಪ್ರಯತ್ನ ನಡೆಸುತ್ತಾ ಬಂದಿತ್ತು. ವಿಶೇಷವಾಗಿ ಸೌದಿ ಅರೇಬಿಯಾದೊಂದಿಗೆ. ಸುನ್ನಿ ಪ್ರಾಬಲ್ಯದ ಸೌದಿಗೂ ಕೂಡ ಶಿಯಾ ಮುಸ್ಲಿಂ ರಾಷ್ಟ್ರ ಇರಾನ್ ಕಂಡರೆ ಆಗಲ್ಲ. ಹೀಗಾಗಿ ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಗುಟ್ಟಾಗಿ ಸೌದಿ ಇಸ್ರೇಲ್ ಜೊತೆ ಸಂಬಂಧ ಸಾಧಿಸಿತ್ತು. ಆದ್ರೆ ಬಹಿರಂಗವಾಗಿ ತೋರಿಸಿಕೊಂಡಿರಲಿಲ್ಲ. ಪ್ಯಾಲೆಸ್ತೀನ್ ಜೊತೆ ವಿವಾದ ಸೆಟಲ್ ಮಾಡಿಕೊಳ್ಳೋ ತನಕ ಇಸ್ರೇಲ್ ಜೊತೆ ಯಾವುದೇ ಸಂಬಂಧ ಇಲ್ಲ ಅಂತ ಹೇಳ್ತಾನೇ ಬಂದಿತ್ತು. ಆದ್ರೆ ಒಳಗಿಂದೊಳಗೆ ಚೆನ್ನಾಗೇ ಇದ್ರು. ಇದೀಗ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವಧಿಯಲ್ಲಿ ಸೌದಿ ಮತ್ತು ಇಸ್ರೇಲ್ ಮಧ್ಯೆ ‘ಅಬ್ರಹಾಮ್ ಅಕಾರ್ಡ್’ಗೆ ಸಹಿ ಮಾಡಿಸಲು ಎಲ್ಲ ಪ್ರಯತ್ನ ನಡೀತಾ ಇತ್ತು. ಇದೀಗ ಟ್ರಂಪ್ ಚುನಾವಣೆ ಸೋತಿರೋದರಿಂದ ಬೈಡೆನ್​ಗೆ ಅಧಿಕಾರ ಹಸ್ತಾಂತರ ಮಾಡುವುದರ ಒಳಗಾಗಿ ಈ ಡೀಲ್ ನಡೆಸಲು ಈ ಸೀಕ್ರೆಟ್ ಮೀಟಿಂಗ್ ನಡೆದಿದೆ ಎನ್ನಲಾಗಿದೆ. ಒಂದು ವೇಳೆ ಈ ಡೀಲ್ ಫೈನಲ್ ಆದ್ರೆ ಗಲ್ಫ್ ರಾಷ್ಟ್ರಗಳ ಇತಿಹಾಸದಲ್ಲೇ ದೊಡ್ಡ ಮೈಲುಗಲ್ಲಾಗುತ್ತೆ ಎನ್ನಲಾಗಿದೆ. ಇಸ್ರೇಲ್​ ಪ್ರಧಾನಿಯೊಬ್ಬರು ಸೌದಿಗೆ ಭೇಟಿ ನೀಡಿರೋದು ಇತಿಹಾಸದಲ್ಲಿ ಇದೇ ಮೊದಲು.

-masthmagaa.com

Contact Us for Advertisement

Leave a Reply