‘ಚೀನಾ ಪರವಾಗಿರುವ ಜೋ ಬೈಡೆನ್ ಅಮೆರಿಕ ಅಧ್ಯಕ್ಷರಾದ್ರೆ ಭಾರತಕ್ಕೆ ಕಷ್ಟ’

masthmagaa.com:

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿರುವ ಜೋ ಬೈಡೆನ್ ಚೀನಾ ಪರ ಸಾಫ್ಟ್​ ಕಾರ್ನರ್ ತೋರಿಸುತ್ತಿದ್ದಾರೆ. ಹೀಗಾಗಿ ಅವರು ಅಮೆರಿಕ ಅಧ್ಯಕ್ಷರಾಗೋದು ಭಾರತಕ್ಕೆ ಒಳ್ಳೆಯ ವಿಚಾರವಲ್ಲ ಅಂತ ಡೊನಾಲ್ಡ್​ ಟ್ರಂಪ್ ಪುತ್ರ ಡೊನಾಲ್ಡ್​ ಟ್ರಂಪ್ ಜೂನಿಯರ್ ಹೇಳಿದ್ದಾರೆ. ಜೊತೆಗೆ ಜೋ ಬೈಡೆನ್ ಅವರ ಪುತ್ರ ಹಂಟರ್ ಬೈಡೆನ್ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳನ್ನ ಮಾಡಿದ್ದಾರೆ.

‘ಹಂಟರ್ ಬೈಡೆನ್​ಗೆ ಚೀನಾದವರು 1.5 ಬಿಲಿಯನ್ ಡಾಲರ್ ಕೊಟ್ಟಿದ್ದಾರೆ. ಆತ ಉದ್ಯಮಿ ಅನ್ನೋ ಕಾರಣಕ್ಕೆ ಇದನ್ನ ಕೊಟ್ಟಿರಬಹುದು ಅಥವಾ ಜೋ ಬೈಡೆನ್ ಮತ್ತು ಹಂಟರ್​ ಬೈಡನ್​ರನ್ನು ಖರೀದಿಸಬಹುದು ಅನ್ನೋ ಕಾರಣಕ್ಕೆ ಕೊಟ್ಟಿರಬಹುದು. ಹೀಗಾಗಿ ಬೈಡೆನ್ ಕುಟುಂಬಸ್ಥರು ಚೀನಾ ಪರವಾಗಿದ್ದಾರೆ. ಇದು ಭಾರತದ ದೃಷ್ಟಿಯಿಂದ ಒಳ್ಳೆಯ ವಿಚಾರವಲ್ಲ. ಚೀನಾದ ಬೆದರಿಕೆಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಹುಶಃ ಭಾರತ ಮೂಲದ ಅಮೆರಿಕನ್ನರಿಗೆ ಈ ವಿಚಾರ ಚೆನ್ನಾಗಿ ಗೊತ್ತಿದೆ’ ಅಂತ ಡೊನಾಲ್ಡ್​ ಟ್ರಂಪ್ ಜೂನಿಯರ್ ಹೇಳಿದ್ದಾರೆ.

42 ವರ್ಷದ ಡೊನಾಲ್ಡ್​ ಟ್ರಂಪ್ ಜೂನಿಯರ್ 74 ವರ್ಷದ ತನ್ನ ತಂದೆಯ ಪುನರಾಯ್ಕೆಗಾಗಿ ಭಾರಿ ಸರ್ಕಸ್ ಮಾಡ್ತಿದ್ದಾರೆ. ಈ ಸಂಬಂಧ ‘ಲಿಬರಲ್ ಪ್ರಿವಿಲೇಜ್’ ಅನ್ನೋ ಪುಸ್ತಕ ಬರೆದು ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡೆನ್ ಮತ್ತು ಅವರ ಕುಟುಂಬದ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದ್ದಾರೆ. ಅಂದ್ಹಾಗೆ ನವೆಂಬರ್​ 3ರಂದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಅಮೆರಿಕದಲ್ಲಿ ಭಾರತ ಮೂಲದ 30 ಲಕ್ಷಕ್ಕೂ ಹೆಚ್ಚು ಜನರಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳು ಭಾರತೀಯ ಮೂಲದ ಅಮೆರಿಕನ್ನರ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ಧಾರೆ. ಇದಕ್ಕಾಗಿ ಭಾರತ-ಚೀನಾ ಸಂಘರ್ಷದ ವಿಚಾರವನ್ನು ಕೂಡ ಬಳಸಿಕೊಳ್ಳುತ್ತಿರೋದು ಗಮನಾರ್ಹ.

-masthmagaa.com

Contact Us for Advertisement

Leave a Reply