ಟೀಕಾಕಾರಿಗೆ ಉತ್ತರ ಕೊಟ್ಟ ಪತಂಜಲಿ.. ಔಷಧಿ ಪ್ರಯೋಗದ ವರದಿ ಬಹಿರಂಗ

masthmagaa.com:

ಜಾಗತಿಕ ಮಹಾಮಾರಿಗೆ ಪತಂಜಲಿ ಸಂಸ್ಥೆ ಅಭಿವೃದ್ಧಿಪಡಿಸಿದೆ ಎನ್ನಲಾದ ‘ಕೊರೋನಿಲ್’ ಔಷಧಿ ಬಗ್ಗೆ ಭಾರಿ ಚರ್ಚೆ ನಡೀತಿದೆ. ಈ ಔಷಧಿ ಬಗ್ಗೆ ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ. ಪತಂಜಲಿ ಸಂಸ್ಥೆಯು ಜ್ವರ, ಕೆಮ್ಮಿನ ಔಷಧಿಗೆ ಲೈಸೆನ್ಸ್ ಪಡೆದಿದ್ದು ಅಂತ ಲೈಸೆನ್ಸ್ ಅಧಿಕಾರಿ ಹೇಳಿದ್ರೆ… ಆಯುಷ್​ ಇಲಾಖೆ ಕೂಡ ಪತಂಜಲಿ ಸಂಸ್ಥೆಗೆ ಔಷಧಿ ಮಾರದಂತೆ ಮತ್ತು ಅದರ ಬಗ್ಗೆ ಪ್ರಚಾರ ಮಾಡದಂತೆ ಎಚ್ಚರಿಕೆ ನೀಡಿತ್ತು.  ಮತ್ತೊಂದುಕಡೆ ಔಷಧಿ ಕಂಡುಹಿಡಿದಿದ್ದೇವೆ ಅಂತ ಆರಂಭದಲ್ಲಿ ಹೇಳಿದ್ದ ಪತಂಜಲಿ, ಈಗ ನಾವು ಹಾಗೆ ಹೇಳೇ ಇಲ್ಲ ಅಂತ ಹೇಳ್ತಿದೆ.

ಇದೆಲ್ಲದರ ನಡುವೆ ಪತಂಜಲಿ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ತಾನು ನಡೆಸಿದ ಕ್ಲಿನಿಕಲ್ ಟ್ರಯಲ್​ನ ವರದಿ ಬಗ್ಗೆ ಮಾಹಿತಿ ನೀಡಿದೆ. ಜೊತೆಗೆ ಟೀಕಾಕಾರರಿಗೂ ಉತ್ತರ ಕೊಟ್ಟಿದೆ. ‘ಪತಂಜಲಿ ಸಂಸ್ಥೆಯ ಔಷಧಿ ಪಡೆದ ಕೊರೋನಾ ಸೋಂಕಿತರು 3 ದಿನಗಳಲ್ಲಿ ಶೇ. 67ರಷ್ಟು ಗುಣಮುಖರಾಗಿದ್ದಾರೆ. 7 ದಿನಗಳಲ್ಲಿ ಶೇ. 100ರಷ್ಟು ಗುಣಮುಖರಾಗಿದ್ದಾರೆ. ಹೀಗೆ ಚಿಕಿತ್ಸೆ ಪಡೆದ ಎಲ್ಲಾ 45 ರೋಗಿಗಳು 7 ದಿನದಲ್ಲಿ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ’ ಅಂತ ಪತಂಜಲಿ ಹೇಳಿಕೊಂಡಿದೆ.

ಇದನ್ನೂ ಓದಿ: ಜೂನ್​ ತಿಂಗಳಲ್ಲಿ ರಣಭಯಂಕರವಾಗಿತ್ತು ಕೊರೋನಾ ಅಟ್ಟಹಾಸ..!

ಅಂದ್ರೆ ‘ಕೊರೋನಿಲ್’ ಔಷಧಿಯನ್ನ 45 ರೋಗಿಗಳ ಮೇಲೆ ಪ್ರಯೋಗ ಮಾಡಲಾಗಿತ್ತು ಅನ್ನೋದು ಗೊತ್ತಾಗಿದೆ. ಇದಕ್ಕಾಗಿ 15ರಿಂದ 65 ವರ್ಷ ವಯಸ್ಸಿನ ಸೋಂಕಿತರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು ಅಂತ ಪ್ರಕಟಣೆಯಲ್ಲಿ ತಿಳಿಸಿದೆ. ಜೊತೆಗೆ ಮೆಡಿಸಿನ್ ಕ್ಷೇತ್ರದ ಕೆಲವೊಂದು ಮಾಫಿಯಾಗಳು ಪತಂಜಲಿ ವಿರುದ್ಧ ಷಡ್ಯಂತ್ರ ರೂಪಿಸುತ್ತಿವೆ. ನಮ್ಮ ಮೇಲೆ ಕಲ್ಲುಗಳನ್ನ ತೂರುತ್ತಿದ್ದಾರೆ. ಅದೇ ಕಲ್ಲುಗಳ ಮೂಲಕ ಯಶಸ್ಸಿನ ಹಾದಿ ಮಾಡಿಕೊಂಡು ನಮ್ಮ ಗುರಿ ತಲುಪುತ್ತೇವೆ ಅಂತ ಸಂಸ್ಥೆ ಹೇಳಿದೆ.

ಪತಂಜಲಿ ಸಂಸ್ಥೆ, ಬಾಬಾ ರಾಮ್​ದೇವ್, ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿಯ ಹಿರಿಯ ವಿಜ್ಞಾನಿಗಳು ದೇಶಕ್ಕೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಆದ್ರೆ ಕೆಲವರು ನಮ್ಮನ್ನ ನಿಂದಿಸಿ, ನಮ್ಮ ವಿರುದ್ಧ ಎಫ್​ಐಆರ್​ಗಳನ್ನು ದಾಖಲಿಸುತ್ತಿದ್ದಾರೆ. ಸುಸಂಸ್ಕೃತ ಸಮಾಜದಲ್ಲಿ ಇದೆಲ್ಲಾ ಹೆಚ್ಚು ದಿನ ನಡೆಯೋದಿಲ್ಲ. ಕೊರೋನಾದಿಂದ ಜೀವನ್ಮರಣ ಹೋರಾಟ ನಡೆಸುತ್ತಿರುವ ಸೋಂಕಿತರ ಬಗ್ಗೆ ನಾವೆಲ್ಲಾ ಕನಿಕರ ತೋರಿಸಬೇಕು. ಇಂತಹ ಟೀಕೆಗಳ ನಡುವೆಯೂ ಪತಂಜಲಿ ಸಂಸ್ಥೆ ದೇಶ ಸೇವೆಗೆ ಸದಾ ಸಿದ್ಧ. ಯಾವತ್ತೂ ಸತ್ಯಕ್ಕೆ ಗೆಲುವು ಸಿಗಲಿದೆ. ಮಾನವಕುಲ ಮತ್ತು ದೇಶಕ್ಕೆ ಸೇವೆ ಸಲ್ಲಿಸುವುದೇ ನಮ್ಮ ಧರ್ಮ  ಅಂತ ಪತಂಜಲಿ ಹೇಳಿಕೊಂಡಿದೆ.

ಇದನ್ನೂ ಓದಿ: ಉಗ್ರರಿಂದ ಗುಂಡಿನ ದಾಳಿ.. 3 ವರ್ಷದ ಮಗುವನ್ನು ರಕ್ಷಿಸಿದ ಪೊಲೀಸ್ ಸಿಬ್ಬಂದಿ

-masthmagaa.com

Contact Us for Advertisement

Leave a Reply