masthmagaa.com:

ಶತ್ರುವಿನ ಶತ್ರು ಮಿತ್ರ ಅನ್ನೋ ಮಾತಿದೆಯಲಾ ಅದು ಭಾರತ, ಅಮೆರಿಕ ಮತ್ತು ಚೀನಾಗೆ ಚೆನ್ನಾಗಿ ಹೋಲಿಕೆಯಾಗುತ್ತೆ ಅನ್ಸುತ್ತೆ. ಯಾಕಂದ್ರೆ ಭಾರತ-ಚೀನಾ ನಡುವೆ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವೆ ನಡುವೆಯೇ ಇವತ್ತು ಅಮೆರಿಕದ ಆಂತರಿಕ ಕಾರ್ಯದರ್ಶಿ (ಭಾರತದ ದೃಷ್ಟಿಕೋನದಲ್ಲಿ ಅಮೆರಿಕದ ವಿದೇಶಾಂಗ ಸಚಿವ) ಮೈಕ್ ಪಾಂಪಿಯೋ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ (ಅಂದ್ರೆ ಅಮೆರಿಕದ ರಕ್ಷಣಾ ಸಚಿವ) ಮಾರ್ಕ್​​ ಎಸ್ಪರ್ ಭಾರತಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣ ಮೂರನೇ ‘2+2’ ಮಾತುಕತೆ.

‘2+2’ ಮೀಟಿಂಗ್ ಅಂದ್ರೆ ಭಾರತದ ಇಬ್ಬರು ಸಚಿವರು ಮತ್ತು ಅಮೆರಿಕದ ಇಬ್ಬರು ಸಚಿವರು ಈ ಮಾತುಕತೆಯಲ್ಲಿ ಭಾಗವಹಿಸುತ್ತಾರೆ. ಮೊದಲ ‘2+2’ ಮೀಟಿಂಗ್ 2018ರಲ್ಲಿ ಭಾರತದಲ್ಲಿ ನಡೆದಿತ್ತು, ಎರಡನೇ ಮೀಟಿಂಗ್ ಅಮೆರಿಕದಲ್ಲಿ ನಡೆದಿತ್ತು. ಇದೀಗ ಮೂರನೇ ಮಿಟಿಂಗ್ ಮತ್ತೆ ಭಾರತದಲ್ಲಿ ನಡೆಯುತ್ತಿದೆ. ಈಗಾಗಲೇ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಅಮೆರಿಕದ ರಕ್ಷಣಾ ಸಚಿವ ಮಾರ್ಕ್ ಎಸ್ಪರ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅದೇ ರೀತಿ ಭಾರತದ ವಿದೇಶಾಂಗ ಸಚಿವ ಎಸ್​. ಜೈಶಂಕರ್ ಮತ್ತು ಮೈಕ್ ಪಾಂಪಿಯೋ ಕೂಡ ಭೇಟಿಯಾಗಿದ್ದಾರೆ.

ಅಮೆರಿಕದ ಇಬ್ಬರು ಸಚಿವರ ಭೇಟಿಯ ಪ್ರಮುಖ ಉದ್ದೇಶವೇ ದ್ವಿಪಕ್ಷೀಯ ರಕ್ಷಣಾ ಸಂಬಂಧವನ್ನ ಮತ್ತಷ್ಟು ಹೆಚ್ಚಿಸಲು Basic Exchange and Cooperation Agreement (BECA) ಒಪ್ಪಂದ ಮಾಡಿಕೊಳ್ಳುವುದಾಗಿದೆ. ಈ ಒಪ್ಪಂದದಿಂದ ಅಮೆರಿಕದ ಸೇನಾ ಉಪಗ್ರಹಗಳ ಲಾಭ ಭಾರತಕ್ಕೂ ಸಿಗಲಿದೆ. ರಿಯಲ್​ ಟೈಮ್​ನಲ್ಲಿ ನಿಖರವಾದ ಉಪಗ್ರಹ ಮಾಹಿತಿಯನ್ನು ಅಮೆರಿಕ ಸೇನೆಯಿಂದ ಭಾರತ  ಪಡೆಯಬಹುದು. ಇದೇ ರೀತಿ ಭಾರತದಿಂದ ಅಮೆರಿಕಕ್ಕೂ ನೆರವಾಗಲಿದೆ. ಎರಡೂ ದೇಶಗಳು ಮಾಹಿತಿ ವಿನಿಮಯ ಮಾಡಿಕೊಳ್ಳುವ ಒಪ್ಪಂದ ಇದಾಗಿದೆ.

ಅಂದ್ಹಾಗೆ ಭಾರತ ಮತ್ತು ಅಮೆರಿಕ 2016ರಲ್ಲಿ Logistics Exchange Memorandum of Agreement (LEMOA) ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರ ಪ್ರಕಾರ ಎರಡೂ ದೇಶದ ಸೇನೆಗಳು ತಮ್ಮ ಮಿಲಿಟರಿ ಸರಬರಾಜನ್ನು ದುರಸ್ತಿ ಮಾಡಿಕೊಳ್ಳಲು ಪರಸ್ಪರ ಸೇನಾ ನೆಲೆಗಳನ್ನು ಬಳಸಿಕೊಳ್ಳಲು ಅವಕಾಶವಿದೆ. 2018ರಲ್ಲಿ Communications Compatibility and Security Agreement (COMCASA) ಒಪ್ಪಂದಕ್ಕೆ ಸಹಿ ಹಾಕಿದವು. ಇದರ ಪ್ರಕಾರ ಭಾರತಕ್ಕೆ ಉನ್ನತ ಮಟ್ಟದ ತಂತ್ರಜ್ಞಾನವನ್ನು ಮಾರಾಟ ಮಾಡಲು ಸಾಧ್ಯವಾಗಿದೆ.

ಅಮೆರಿಕದ ಇಬ್ಬರು ಸಚಿವರು ನಾಳೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪ್ರಧಾನಿ ಮೋದಿಯನ್ನು ಭೇಟಿಯಾಗಲಿದ್ದಾರೆ. ಬಳಿಕ ಶ್ರೀಲಂಕಾ, ಮಾಲ್ಡಿವ್ಸ್ ಮತ್ತು ಇಂಡೋನೇಷ್ಯಾಗೂ ಭೇಟಿ ನೀಡಲಿದ್ದಾರೆ. ಅಮೆರಿಕ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಅಮೆರಿಕ ಸಚಿವರ ಈ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಇದ್ರಿಂದ ಚೀನಾ ಉರ್ಕೊಂಡಿರೋದು ಗ್ಯಾರಂಟಿ.

-masthmagaa.com

Contact Us for Advertisement

Leave a Reply