masthmagaa.com:

ಫ್ರಾನ್ಸ್​ನಿಂದ ಭಾರತ ಖರೀದಿಸಿದ ಮೊದಲ ಬ್ಯಾಚ್​ನ 5 ರಫೇಲ್ ಫೈಟರ್ ಜೆಟ್​ಗಳು ಇವತ್ತು ಅಧಿಕೃತವಾಗಿ ಭಾರತೀಯ ವಾಯಸೇನೆಗೆ ಸೇರ್ಪಡೆಗೊಂಡಿವೆ. ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜ್​ನಾಥ್ ಸಿಂಗ್, ಫ್ರಾನ್ಸ್​ನ ಸಶಸ್ತ್ರ ಪಡೆಗಳ ಸಚಿವೆ ಫ್ಲಾರೆನ್ಸ್ ಪಾರ್ಲಿ, ಸಿಡಿಎಸ್​ ಬಿಪಿನ್ ರಾವತ್, ವಾಯುಸೇನಾ ಮುಖ್ಯಸ್ಥ ಆರ್​.ಕೆ.ಎಸ್. ಭದೌರಿಯಾ ಸೇರಿ ಹಲವರು  ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ರಾಜ್​ನಾಥ್ ಸಿಂಗ್ ಗಡಿಯಲ್ಲಿ ಭಾರತದ ಜೊತೆ ಕಿರಿಕ್ ಮಾಡ್ತಿರುವ ಚೀನಾ ಮತ್ತು ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ‘ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ ಇಡೀ ವಿಶ್ವಕ್ಕೆ ವಿಶೇಷವಾಗಿ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರಲು ಪ್ರಯತ್ನಿಸುತ್ತಿರುವ ದೇಶಗಳಿಗೆ (ಚೀನಾ ಮತ್ತು ಪಾಕಿಸ್ತಾನ) ಒಂದು ದೊಡ್ಡ ಮತ್ತು ಕಠಿಣ ಸಂದೇಶವಾಗಿದೆ. ಗಡಿಯಲ್ಲಿ ಕೆಲವರು ಸೃಷ್ಟಿಸಿರುವ ಬಿಗುವಿನ ವಾತಾವರಣ ಸಂದರ್ಭದಲ್ಲೇ ರಫೇಲ್ ಫೈಟರ್​ ಜೆಟ್​​ಗಳ ಸೇರ್ಪಡೆಯಾಗ್ತಿರೋದು ತುಂಬಾ ಮುಖ್ಯವಾದುದು’ ಅಂತ ಹೇಳಿದ್ದಾರೆ.

ಅಂದ್ಹಾಗೆ ಫ್ರಾನ್ಸ್​ನಿಂದ ಒಟ್ಟು 36 ರಫೇಲ್ ಯುದ್ಧ ವಿಮಾನಗಳನ್ನ ಖರೀದಿಸಲು ಭಾರತ 2016ರಲ್ಲಿ ಸುಮಾರು 59,000 ಕೋಟಿ ರೂಪಾಯಿಯ ಒಪ್ಪಂದ ಮಾಡಿಕೊಂಡಿತ್ತು. ಅದರ ಪ್ರಕಾರ ಮೊದಲ ಬ್ಯಾಚ್​ನ 5 ಫೈಟರ್​ ಜೆಟ್​ಗಳು ಜುಲೈ 29ರಂದು ಭಾರತದಲ್ಲಿ ಲ್ಯಾಂಡ್ ಆಗಿದ್ದವು. ಆದ್ರೆ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿರಲಿಲ್ಲ. ಇವತ್ತು ಅಂಬಾಲಾ ಏರ್​ಬೇಸ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವುಗಳನ್ನ ವಾಯುಪಡೆಗೆ ಸೇರಿಸಲಾಗಿದೆ. ಈ ವೇಳೆ ರಫೇಲ್ ಯುದ್ಧ ವಿಮಾನಗಳಿಗೆ ವಾಟರ್ ಸಲ್ಯೂಟ್ ನೀಡಲಾಯ್ತು.

-masthmagaa.com

Contact Us for Advertisement

Leave a Reply