masthmagaa.com:

ಕೇವಲ ಮದುವೆ ಆಗೋ ಉದ್ದೇಶದಿಂದ ಮತಾಂತರ ಆದರೆ ಅದು ಕಾನೂನು ಬಾಹಿರ ಅಂತ ಹೇಳಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಈಗ ಹಿನ್ನಡೆಯಾಗಿದೆ. ಈ ಹಿಂದೆ ಸಿಂಗಲ್ ಜಡ್ಜ್ ಬೆಂಚ್​​ನಿಂದ (ಏಕ ಸದಸ್ಯ ಪೀಠ) ಈ ಆದೇಶ ಬಂದಿತ್ತು. ಆದ್ರೆ ಈಗ ಇಬ್ಬರು ಜಡ್ಜ್​ಗಳ ವಿಭಾಗೀಯ ಪೀಠ ಹಳೆ ಆದೇಶ ಸರಿ ಇಲ್ಲ ಅಂತ ಹೇಳಿದೆ.

ಈ ಹಿಂದೆ ಸೆಪ್ಟೆಂಬರ್​​ನಲ್ಲಿ ಪ್ರಿಯಾನ್ಶಿ ಅನ್ನೋ ಯುವತಿಯ ಪ್ರಕರಣದಲ್ಲಿ ತೀರ್ಪು ನೀಡುವಾಗ ಅಲಹಾಬಾದ್ ಹೈಕೋರ್ಟ್ ಕೇವಲ ಮದುವೆ ಆಗೋ ಉದ್ದೇಶ ಇಟ್ಕೊಂಡು ಮತಾಂತರ ಆದ್ರೆ ಅಂತಹ ಮತಾಂತರ ಮಾನ್ಯವಲ್ಲ ಅಂತ ಹೇಳಿತ್ತು. ಹಾಗೂ ಅದಕ್ಕೂ ಮೊದಲು 2014ರಲ್ಲೂ ಕೂಡ ನೂರ್ ಜಹಾನ್ ಅನ್ನೋ ಮಹಿಳೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂಥದ್ದೇ ಆದೇಶ ನೀಡಲಾಗಿತ್ತು. ಈಗ ಈ ಎರಡೂ ಆದೇಶಗಳು ಸರಿ ಇಲ್ಲ ಅಂತ ಜಸ್ಟಿಸ್ ವಿವೇಕ್ ಅಗರ್​ವಾಲ್ ಹಾಗೂ ಪಂಕಜ್ ನಖ್ವಿ ಅವರ ವಿಭಾಗೀಯ ಪೀಠ ಆದೇಶ ನಿಡಿದೆ.

ಪ್ರಿಯಾನ್ಶಿ ಪ್ರಕರಣದಲ್ಲಿ ಹಿಂದೂ ಯುವತಿ ಅಂತರ್ ಧರ್ಮೀಯ ಮದುವೆಯಾಗಿದ್ದರೆ, ನೂರ್ ಜಹಾನ್ ಪ್ರಕರಣದಲ್ಲಿ ಮುಸ್ಲಿಂ ಯುವತಿ ಅಂತರ್​ ಧರ್ಮೀಯ ಮದುವೆಯಾಗಿದ್ದಳು.

ಅಲಹಾಬಾದ್ ಹೈಕೋರ್ಟ್​ನ ಈ ಹಿಂದಿನ, ಅಂದ್ರೆ ಸೆಪ್ಟೆಂಬರ್​​ನ ತೀರ್ಪು ದೇಶದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು. ‘ಲವ್ ಜಿಹಾದ್’ ಪದ ಮತ್ತೆ ಮುನ್ನೆಲೆಗೆ ಬಂದಿತ್ತು. ಕೋರ್ಟ್ ತೀರ್ಪನ್ನ ಆಧಾರವಾಗಿಟ್ಟುಕೊಂಡು ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ ಹಾಗೂ ಕರ್ನಾಟಕ ಸೇರಿದಂತೆ ಹಲವು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ‘ಲವ್ ಜಿಹಾದ್‘ ತಡೆ ಕಾನೂನು ರೂಪಿಸುತ್ತೇವೆ ಅಂತ ರಾಜಕೀಯ ವ್ಯಕ್ತಿಗಳು ಹೇಳಿಕೆಗಳನ್ನ ನೀಡಿದ್ದರು.

ಆದ್ರೆ ಈಗ ಅಲಹಾಬಾದ್ ಹೈಕೋರ್ಟ್​ನ ವಿಸ್ತೃತ ಪೀಠ, ‘ಯಾವುದೇ ಇಬ್ಬರು ವಯಸ್ಕ ವ್ಯಕ್ತಿಗಳು ಧರ್ಮ ಯಾವುದೇ ಇರಲಿ, ತಮಗಿಷ್ಟ ಬಂದವರೊಂದಿಗೆ ಬಾಳಲು ಸ್ವತಂತ್ರರು. ಇದು ಜೀವಿಸುವ ಹಕ್ಕು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು’ ಅಂತ ಹೇಳಿದೆ. ಇದರಲ್ಲಿ ಸರ್ಕಾರ ಬಿಡಿ.., ಸಮಾಜ ಅಥವಾ ಅವರ ಕುಟುಂಬಕ್ಕೂ ಪ್ರಶ್ನಿಸುವ ಕಾನೂನಾತ್ಮಕ ಅಧಿಕಾರ ಇರೋದಿಲ್ಲ ಅಂತ ಹೇಳಿದೆ.!

ಸಂವಿಧಾನದ 25ನೇ ವಿಧಿಯ ಅನುಸಾರ ‘ಯಾವುದೇ ವ್ಯಕ್ತಿ ಯಾವುದೇ ಧರ್ಮವನ್ನು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು. ಹಾಗೂ ತನ್ನ ಧಾರ್ಮಿಕ ಆಯ್ಕೆಯನ್ನು ಹೊರ ಜಗತ್ತಿಗೆ ತೋರಿಸಿಕೊಳ್ಳುವುದು ಅಥವಾ ಮುಚ್ಚಿಡುವುದು ಕೂಡ ಆ ವ್ಯಕ್ತಿಗೆ ಬಿಟ್ಟ ವಿಚಾರ’ ಅಂತ ಹೇಳುತ್ತೆ.

-masthmagaa.com

Contact Us for Advertisement

Leave a Reply