masthmagaa.com:

ವಲಸೆ ಕಾರ್ಮಿಕರ ಮೇಲಿದ್ದ ಕೆಲವೊಂದು ವಿವಾದಾತ್ಮಕ ನಿರ್ಬಂಧಗಳನ್ನ ತೆಗೆದು ಹಾಕಲು ಸೌದಿ ಅರೇಬಿಯಾ ಮುಂದಾಗಿದೆ. ಇದರ ಪ್ರಕಾರ ವಲಸೆ ಕಾರ್ಮಿಕರು ಇನ್ಮುಂದೆ ಉದ್ಯೋಗ ಬದಲಿಸಲು, ವಿದೇಶಕ್ಕೆ ಪ್ರಯಾಣಿಸಲು ಅಥವಾ ದೇಶವನ್ನು ಶಾಶ್ವತವಾಗಿ ಬಿಡಲು ತಮ್ಮ ಉದ್ಯೋಗದಾತರ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಈ ಮೂಲಕ ಭಾರತೀಯರು ಸೇರಿದಂತೆ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳುವ ವಲಸೆ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗಿದೆ.

ಈಗಿರುವ ನಿರ್ಬಂಧಗಳಿಂದ ವಲಸೆ ಕಾರ್ಮಿಕರು ಹೆಚ್ಚೆಚ್ಚು ಶೋಷಣೆಗೆ ಒಳಗಾಗುತ್ತಿದ್ದರು. ಇದನ್ನ ತಪ್ಪಿಸಲು, ತನ್ನ ಪ್ರಜೆಗಳಿಗೆ ಉದ್ಯೋಗ ಸಿಗುವಂತೆ ಮಾಡಲು ಮತ್ತು ವಿದೇಶಿ ಪ್ರತಿಭೆಗಳನ್ನ ಆಹ್ವಾನಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಅಂತ ಸೌದಿ ಸರ್ಕಾರ ಹೇಳಿದೆ. ಈ ನಿಯಮಗಳು ಮಾರ್ಚ್ 14,‌ 2021ರಿಂದ ಜಾರಿಗೆ ಬರಲಿದ್ದು ಖಾಸಗಿ ವಲಯದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವಲಸೆ ಕಾರ್ಮಿಕರಿಗೆ ಅನ್ವಯವಾಗಲಿದೆ. ಹೊಸ ನಿಯಮ ಸೌದಿ ಅರೇಬಿಯಾದ ಲೇಬರ್ ಮಾರ್ಕೆಟ್ ಮತ್ತು 1 ಕೋಟಿಗೂ ಹೆಚ್ಚು ವಲಸೆ ಕಾರ್ಮಿಕರ ಜೀವನದ ಮೇಲೆ ಬಹುದೊಡ್ಡ ಪರಿಣಾಮ ಬೀರಲಿದೆ ಅಂತಾನೇ ಹೇಳಲಾಗ್ತಿದೆ.

ಅಂದ್ಹಾಗೆ ಸದ್ಯ ಗಲ್ಫ್​ ರಾಷ್ಟ್ರಗಳಲ್ಲಿ ‘ಕಫಲ’ ಅಥವಾ ‘ಸ್ಪಾನ್ಸರ್​ಶಿಪ್​’ ವ್ಯವಸ್ಥೆ ಇದೆ. ಇದರ ಪ್ರಕಾರ ವಲಸೆ ಕಾರ್ಮಿಕರು ಬೇರೆ ಕೆಲಸಕ್ಕೆ ಹೋಗಬೇಕಂದ್ರೆ, ದೇಶವನ್ನು ಬಿಡಬೇಕಂದ್ರೆ ಉದ್ಯೋಗದಾತರ ಅನುಮತಿ ಪಡೆಯಬೇಕು. ಇದು ಗುಲಾಮಗಿರಿಯ ಒಂದು ರೂಪ ಅಂತ ಮಾನವ ಹಕ್ಕುಗಳ ಪರ ಹೋರಾಡುವ ಸಂಘಟನೆಗಳು ವಿರೋಧಿಸಿದ್ದವು. ಇದೀಗ ಈ ನಿಯಮಗಳನ್ನ ಬದಲಾಯಿಸಲು ಸೌದಿ ಮುಂದಾಗಿದೆ. ಹೊಸ ನಿಯಮದ ಪ್ರಕಾರ, ವಲಸೆ ಕಾರ್ಮಿಕರು ವಿದೇಶಕ್ಕೆ ಹೋಗಬೇಕಂದ್ರೆ ಎಕ್ಸಿಟ್​ ಅಥವಾ ರಿ ಎಂಟ್ರಿ ವೀಸಾಗೆ ಅವರೇ ದುಡ್ಡು ಕೊಡಬೇಕಾದ್ರೂ ಕೂಡ ಉದ್ಯೋಗದಾತರ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಅವರೇ ನೇರವಾಗಿ ‘ಅಬ್ಶರ್​’ ವ್ಯವಸ್ಥೆ ಮೂಲಕ ಮನವಿ ಸಲ್ಲಿಸಬಹುದು. ಜೊತೆಗೆ ಒಬ್ಬ ಉದ್ಯೋಗದಾತನಿಂದ ಸ್ಪಾನ್ಸರ್​ಶಿಪ್​​ ವರ್ಗಾಯಿಸಿಕೊಳ್ಳಲು ಕೂಡ ವಲಸೆ ಕಾರ್ಮಿಕರಿಗೆ ಅವಕಾಶವಿರುತ್ತದೆ.

-masthmagaa.com

Contact Us for Advertisement

Leave a Reply