masthmagaa.com:

ರಾಜ್ಯದಲ್ಲಿ ಲವ್ ಜಿಹಾದ್ ಅಂತ್ಯಗೊಳಿಸಲು ಶೀಘ್ರದಲ್ಲೇ ಕಾನೂನು ತರುತ್ತೇವೆ ಅಂತ ಸಿಎಂ ಯಡಿಯೂರಪ್ಪ ಹೇಳಿದ ಬೆನ್ನಲ್ಲೇ ಅದಕ್ಕೆ ಮಾಜಿ ಸಿಎಂ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ‘ಇದು ಜನರ ಗಮನವನ್ನ ಬೇರೆಡೆ ಸೆಳೆಯುವ ಪ್ರಯತ್ನ. ಕೋಮು ದ್ವೇಷವನ್ನು ಹುಟ್ಟು ಹಾಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ದುರುದ್ದೇಶ ಇದರ ಹಿಂದಿದೆ. ಮತಾಂತರ ಎನ್ನುವುದು ಅಂತರಧರ್ಮೀಯ ಮದುವೆಗೆ ಅಸ್ತ್ರವಾಗಬಾರದು ಅಂತ ಅಲಹಾಬಾದ್​ ಹೈಕೋರ್ಟ್​ ತೀರ್ಪು ನೀಡಿದೆಯೇ ಹೊರತು ಅಂತರಧರ್ಮೀಯ ಮದುವೆಯೇ ಅಕ್ರಮ ಅಂತ ಹೇಳಿಲ್ಲ’ ಅಂತ ಸಿದ್ದರಾಮಯ್ಯ ವಾಗ್ದಾಳಿ ಮಾಡಿದ್ದಾರೆ.

‘ಲವ್ ಜಿಹಾದ್ ತಡೆಗೆ ಕಾನೂನು ರೂಪಿಸುವ ಮುಖ್ಯಮಂತ್ರಿಯವರ ಘೋಷಣೆ, ಆಡಳಿತದ ವೈಫಲ್ಯದಿಂದ ಜನಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನವಲ್ಲದೆ ಇನ್ನೇನಲ್ಲ. ಕೋಮುದ್ವೇಷವನ್ನು ಹುಟ್ಟುಹಾಕಿ ರಾಜಕೀಯದ ಬೇಳೆ ಬೇಯಿಸುವ ದುರುದ್ದೇಶವಲ್ಲದೇ ಬೇರೆ ಯಾವ ಸದುದ್ದೇಶ ಈ ಘೋಷಣೆಗೆ ಇಲ್ಲ’

‘ಲವ್ ಜಿಹಾದ್ ಎಂದರೆ ಏನು ಎನ್ನುವುದೇ ಸ್ಪಷ್ಟ ಇಲ್ಲದೆ ಇರುವಾಗ, ಯಾವ ಕಾನೂನು ಕೂಡ ಲವ್ ಜಿಹಾದ್ ಅನ್ನು ವ್ಯಾಖ್ಯಾನಿಸಿಲ್ಲ ಎಂದು ಕೇಂದ್ರ ಗೃಹಸಚಿವಾಲಯವೇ ಸ್ಪಷ್ಟಪಡಿಸಿರುವಾಗ, ಮುಖ್ಯಮಂತ್ರಿಯವರು ಯಾವ ಆಧಾರದಲ್ಲಿ ಕಾನೂನು ರೂಪಿಸಲು ಹೊರಟಿದ್ದಾರೆ?’

‘ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ತಮ್ಮ ರಾಜಕೀಯ ಅನುಕೂಲತೆಗೆ ತಕ್ಕಂತೆ ತಪ್ಪಾಗಿ ವಿಶ್ಲೇಷಿಸುವ ಪ್ರಯತ್ನವನ್ನು ರಾಜ್ಯ ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಮತಾಂತರ ಎನ್ನುವುದು ಅಂತರಧರ್ಮೀಯ ಮದುವೆಗೆ ಅಸ್ತ್ರವಾಗಬಾರದು ಎಂದು ತೀರ್ಪು ಹೇಳಿದೆಯೇ ಹೊರತು ಅಂತರಧರ್ಮೀಯ ಮದುವೆಯೇ ಅಕ್ರಮ ಎಂದು ಕೋರ್ಟ್​ ಹೇಳಿಲ್ಲ’

‘ಮುಖ್ಯಮಂತ್ರಿಗಳು ಮತ್ತು ಕೆಲ ಸಚಿವರು ಉತ್ತರಪ್ರದೇಶದ ಮುಖ್ಯಮಂತ್ರಿಯವರಿಂದ ಪ್ರೇರಿತರಾಗಿರುವುದು ದುರದೃಷ್ಟಕರ. ಪ್ರಗತಿಪರ ಚಿಂತಕರ ಪರಂಪರೆಯ ಕರ್ನಾಟಕಕ್ಕೆ ಗೂಂಡಾರಾಜ್ಯ ಎಂಬ ಕುಖ್ಯಾತಿಯ ಉತ್ತರಪ್ರದೇಶ ಮಾದರಿ ಅಲ್ಲ, ಅಲ್ಲಿನ ಮುಖ್ಯಮಂತ್ರಿ ಪ್ರೇರಣೆಯೂ ಆಗಬಾರದು’ ಅಂತ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದಾರೆ. 
-masthmagaa.com
Contact Us for Advertisement

Leave a Reply