ಅಧ್ಯಕ್ಷಗಾದಿ ಇಳಿಯೋ ಮುನ್ನ ಟ್ರಂಪ್ ಹೊಸ ಆಟ..!

masthmagaa.com:

ಅಮೆರಿಕ: ಕೊರೋನಾದಿಂದ ಪೆಟ್ಟು ತಿಂದಿರುವ ಅಮೆರಿಕನ್ನರು ಮತ್ತು ಉದ್ಯಮಿಗಳಿಗಾಗಿ ಘೋಷಿಸಲಾದ 892 ಬಿಲಿಯನ್ ಡಾಲರ್ ಅಂದ್ರೆ 64 ಲಕ್ಷ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಪರಿಹಾರ ಪ್ಯಾಕೇಜ್​​​​​​ಗೆ ಸಹಿ ಹಾಕಲು ಟ್ರಂಪ್ ನಿರಾಕರಿಸಿದ್ದಾರೆ. ಮೇಲ್ಮನೆಯಾದ ಸೆನೆಟ್ ಮತ್ತು ಕಾಂಗ್ರೆಸ್​​​​ನಲ್ಲಿ ಪಾಸ್ ಆಗಿದ್ದು, ಅಧ್ಯಕ್ಷ ಟ್ರಂಪ್ ಸಹಿ ಬಾಕಿ ಇತ್ತು. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಟ್ರಂಪ್, ಕಾಂಗ್ರೆಸ್ ಘೋಷಿಸಿರುವ ಪ್ಯಾಕೇಜ್​​ ಅತ್ಯಂತ ಕಡಿಮೆಯಾಗಿದೆ. ಕೊರೋನಾದಿಂದ ಜನ ಪರದಾಡುತ್ತಿದ್ದು, ಸಣ್ಣ ಉದ್ಯಮಗಳು ನೆಲಕ್ಕಚ್ಚಿ ಹೋಗಿವೆ. ಹೀಗಾಗಿ ಕಾಂಗ್ರೆಸ್ ಈ ಮಸೂದೆಯಲ್ಲಿ ತಿದ್ದುಪಡಿ ಮಾಡಿ,​​​​ ವೈಯಕ್ತಿಕ ಪರಿಹಾರದ ಮೊತ್ತವನ್ನು 600 ಡಾಲರ್​​ನಿಂದ 2 ಸಾವಿರಕ್ಕೆ ಏರಿಸಬೇಕು.. ಅದೇ ರೀತಿ ದಂಪತಿಗೆ ನೀಡುವ ಪರಿಹಾರವನ್ನು 4 ಸಾವಿರ ಡಾಲರ್​​ಗೆ ಏರಿಸಬೇಕು ಅಂತ ಹೇಳಿದ್ದಾರೆ. ಚುನಾವಣೆಯಲ್ಲಿ ಸೋತು ಮನೆಗೆ ಹೋಗೋಕೆ ರೆಡಿಯಾಗಿರೋ ಟ್ರಂಪ್ ಈಗ ಹೊಸ ಆಟ ಹೂಡಿದ್ದಾರೆ.

600 ಡಾಲರ್, ಅಂದ್ರೆ 44 ಸಾವಿರ ರೂಪಾಯಿ ಒಬ್ಬೊಬ್ಬರಿಗೆ ಬಾಳ ಕಮ್ಮಿ ಆಯ್ತು. ನಾನು ಇದಕ್ಕೆ ಸೈನ್ ಹಾಕಲ್ಲ. ಅಟ್​ಲೀಸ್ಟ್​ ಒಬ್ಬೊಬ್ಬರಿಗೆ 73 ಸಾವಿರ ರೂಪಾಯಿ ಆದ್ರೂ ಕೊಡಬೇಕು. ಗಂಡ ಹೆಂಡತಿ ಇಬ್ರಿದ್ರೆ 1 ಲಕ್ಷದ 46 ಸಾವಿರ ರೂಪಾಯಿ ಆದ್ರೂ ಕೊಡಬೇಕು ಅಂತ ಟ್ರಂಪ್ ಹೇಳಿದ್ದಾರೆ. ಈ ಮೂಲಕ ನನ್ನಷ್ಟು ಜನಪರ ಅಧ್ಯಕ್ಷ ಯಾರೂ ಇಲ್ಲ ಅಂತಾ ತೋರಿಸಿಕೊಳ್ಳೋಕೆ ಟ್ರೈ ಮಾಡ್ತಿದಾರೆ.

ಟ್ರಂಪ್ ಕಡೆಯ ದಿನಗಳ ಕಾರ್ಯಾಚರಣೆ ಇಷ್ಟಕ್ಕೇ ನಿಂತಿಲ್ಲ. ಇಬ್ಬರು ರಿಪಬ್ಲಿಕನ್‌ ಮುಖಂಡರು ಸೇರಿದಂತೆ 15 ಜನರಿಗೆ ಕ್ಷಮಾದಾನ ಮಾಡುವ ಆದೇಶಕ್ಕೂ ಟ್ರಂಪ್ ಸಹಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಐವರ ಕ್ಷಮಾದಾನ ಅರ್ಜಿ ರಿಜೆಕ್ಟ್ ಮಾಡಿದ್ದು ಅವರಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಮುನ್ನ ಇನ್ನೂ ಹಲವರಿಗೆ ಕ್ಷಮಾದಾನ ನೀಡುವ ನಿರ್ಧಾರವನ್ನು ಟ್ರಂಪ್‌ ಕೈಗೊಳ್ಳಲಿದ್ದಾರೆ ಅಂತಾ ಹೇಳಲಾಗ್ತಿದೆ. ತಮ್ಮ ಅಧಿಕಾರಾವಧಿ ಅಂತ್ಯಗೊಳ್ಳಲು 3-4 ವಾರಗಳು ಬಾಕಿ ಇರುವಾಗ ಟ್ರಂಪ್‌ ಈ ಕ್ರಮ ಕೈಗೊಂಡಿದ್ದಾರೆ. ಅಧಿಕಾರದಿಂದ ನಿರ್ಗಮಿಸುವ ವೇಳೆ ಅಮೆರಿಕದ ಅಧ್ಯಕ್ಷರು ಇಂತಹ ನಿರ್ಧಾರ ಕೈಗೊಳ್ಳುವುದು ಇದು ಹೊಸದೇನಲ್ಲ. ಹಿಂದಿನವರೂ ಈ ಥರ ಮಾಡಿದ್ದಾರೆ.

-masthmagaa.com

 

Contact Us for Advertisement

Leave a Reply