masthmagaa.com:

ನಾಳೆ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಕೊರೋನಾ ಲಸಿಕೆಯ ‘ಡ್ರೈ ರನ್​’ ನಡೆಸುವಂತೆ ಕೇಂದ್ರ ಸರ್ಕಾರ ಸೂಚಿಸಿದೆ. ಇದಕ್ಕೆ ರಾಜ್ಯ ಸರ್ಕಾರ ಕೂಡ ರೆಡಿಯಾಗಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗುತ್ತೆ ಅಂತ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ. ಡ್ರೈ ರನ್ ಅಂದ್ರೆ ಲಸಿಕೆ ಸಿಗೋದಕ್ಕೂ ಮೊದಲು ನಡೆಸುವ ಮಾಕ್​ ಟೆಸ್ಟ್. ಈ ವೇಳೆ ಲಸಿಕೆ ಹಾಕಲು ಮಾಡಿಕೊಂಡಿರುವ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತೆ. ಇತ್ತೀಚೆಗೆ 4 ರಾಜ್ಯಗಳ ತಲಾ ಎರಡೆರಡು ಜಿಲ್ಲೆಗಳಲ್ಲಿ ಡ್ರೈ ರನ್ ನಡೆಸಲಾಗಿತ್ತು. ಆದ್ರೆ ನಮ್ಮ ರಾಜ್ಯದಲ್ಲಿ ಲಸಿಕೆ ಹಾಕಲು ಹೆಚ್ಚು ಸಿದ್ಧತೆ ಮಾಡಿಕೊಂಡಿರೋದ್ರಿಂದ 5 ಜಿಲ್ಲೆಗಳಲ್ಲಿ ಡ್ರೈ ರನ್​ ನಡೆಸಲಾಗ್ತಿದೆ ಅಂತ ಆರೋಗ್ಯ ಸಚಿವರು ಮಾಹಿತಿ ಕೊಟ್ರು. ಅಂದ್ಹಾಗೆ ಆಯಾ ರಾಜ್ಯಗಳ ರಾಜಧಾನಿಯ 3 ಕಡೆ ಡ್ರೈ ರನ್ ನಡೆಸಬೇಕು. ಇದಕ್ಕೆ ಬೇಕಿದ್ರೆ ಬೇರೆ ಜಿಲ್ಲೆಗಳನ್ನ ಕೂಡ ಸೇರಿಸಿಕೊಳ್ಳಬಹುದು ಅಂತ ಕೇಂದ್ರ ಸರ್ಕಾರ ಹೇಳಿತ್ತು. ನಮ್ಮ ರಾಜ್ಯದಲ್ಲಿ ಬೆಂಗಳೂರು ಜೊತೆಗೆ ಮೈಸೂರು, ಶಿವಮೊಗ್ಗ, ಬೆಳಗಾವಿ, ಕಲಬರಗಿ ಜಿಲ್ಲೆಗಳನ್ನ ಇದಕ್ಕೆ ಸೇರಿಸಿಕೊಳ್ಳಲಾಗಿದೆ. ಬೆಂಗಳೂರಿನ ವಿದ್ಯಾಪೀಠ, ಕಾಮಾಕ್ಷಿಪಾಳ್ಯ ಮತ್ತು ಆನೇಕಲ್.. ಈ ಮೂರು ಕಡೆ ಡ್ರೈ ರನ್​ ನಡೆಯಲಿದ್ದು, ಒಟ್ಟು 75 ಜನರಿಗೆ ಲಸಿಕೆ ಹಾಕುವ ತಾಲೀಮು ನಡೆಸಲಿದ್ದಾರೆ ಸಿಬ್ಬಂದಿ.

ಇನ್ನು ಬ್ರಿಟನ್​ನಿಂದ ಕರ್ನಾಟಕಕ್ಕೆ ಬಂದ ಸುಮಾರು 70ಕ್ಕೂ ಹೆಚ್ಚು ಜನ ಸಂಪರ್ಕಕ್ಕೆ ಸಿಗ್ತಿಲ್ಲ. ಅವರನ್ನ ಪತ್ತೆಹಚ್ಚುವ ಕೆಲಸ ನಡೀತಿದೆ ಅಂತಾನೂ ಆರೋಗ್ಯ ಸಚಿವರು ಹೇಳಿದ್ರು. ಇದುವರೆಗೆ ಬ್ರಿಟನ್​ನಿಂದ ಬಂದ 33 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇವರ ಪ್ರಾಥಮಿಕ ಸಂಪರ್ಕಕ್ಕೆ ಬಂದ 5 ಜನರಿಗೆ ಸೋಂಕು ತಗುಲಿದೆ. ಈ ಮೂಲಕ ಒಟ್ಟು 38 ಜನರಿಗೆ ಸೋಂಕು ತಗುಲಿದಂತಾಗಿದೆ. 38 ಜನರ ಸ್ಯಾಂಪಲ್​ಗಳನ್ನ ಜೀನೋಮ್​ ಸೀಕ್ವೆನ್ಸಿಂಗ್​ಗಾಗಿ ಬೆಂಗಳೂರಿನ ನಿಮ್ಹಾನ್ಸ್​ಗೆ ಕಳಿಸಲಾಗಿದೆ. ಇದರಲ್ಲಿ 7 ಜನರಿಗೆ ಬ್ರಿಟನ್​ ಮಾದರಿಯ ರೂಪಾಂತರಿ ಕೊರೋನಾ ವೈರಸ್ ತಗುಲಿರೋದು ದೃಢಪಟ್ಟಿದೆ ಅಂತ ಡಾ.ಕೆ. ಸುಧಾಕರ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply