6 ತಿಂಗಳಿಗೆ ಆಗುವಷ್ಟು ರೇಷನ್ ತಂದಿದ್ದೇವೆ, ಪ್ರತಿಭಟನೆ ನಿಲ್ಲಲ್ಲ: ರೈತರು

masthmagaa.com:

ದೆಹಲಿ: ಕೇಂದ್ರ ಸರ್ಕಾರದ ಕೃಷಿ ನೀತಿಗಳನ್ನು ವಿರೋಧಿಸಿ ರೈತರ ಪ್ರತಿಭಟನೆ ತೀವ್ರಗೊಂಡಿದೆ. ಇಂದು ಡೆಲ್ಲಿ ಚಲೋ ದೆಹಲಿ ಯಾತ್ರೆ ಕೈಗೊಂಡಿರುವ ರೈತರನ್ನು ಮಾರ್ಗ ಮಧ್ಯದಲ್ಲೇ ತಡೆಯಲಾಗ್ತಿದೆ. ಆದ್ರೂ ಕೂಡ ರೈತರು ಜಗ್ಗದೇ ಮುಂದುವರಿದಿದ್ದು, ಕೇಂದ್ರದ ಕೃಷಿ ಕಾನೂನಿನ ವಿರುದ್ಧ ತಮ್ಮ ಧ್ವನಿಯನ್ನು ಕೇಂದ್ರ ಸರ್ಕಾರಕ್ಕೆ ತಲುಪಿಸಲು ಹೊರಟಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ಬ್ಯಾರಿಕೇಡ್​​​ಗಳನ್ನು ತಳ್ಳಿ ಮುನ್ನುಗ್ಗಿದ್ದಾರೆ. ಈ ಸಂಬಂಧ 11 ಮಂದಿ ರೈತರ ವಿರುದ್ಧ ಕೊಲೆ ಯತ್ನದ ಕೇಸ್ ದಾಖಲಿಸಲಾಗಿದೆ. ದೆಹಲಿಯ ಬುರಾರಿಯಲ್ಲಿರುವ ನಿರಂಕಾರಿ ಮೈದಾನದಲ್ಲಿ ಮೌನವಾಗಿ ಪ್ರತಿಭಟಿಸಲು ಪೊಲೀಸರು ಈಗಾಗಲೇ ಅನುಮತಿ ನೀಡಿದ್ದಾರೆ. ಆದ್ರೆ ರೈತರು ಇನ್ನೂ ಕೂಡ ಬುರಾರಿಗೆ ತಲುಪಿಲ್ಲ.

ವಿವಿಧ ಮಾರ್ಗಗಳಿಂದ ರೈತರು ದೆಹಲಿ ಪ್ರವೇಶಿಸಲು ಯತ್ನಿಸುತ್ತಿದ್ದು, ಹಲವೆಡೆ ಪೊಲೀಸರು ಕೂಡ ದೆಹಲಿ ಪ್ರವೇಶಕ್ಕೆ ಅನುಮತಿ ನೀಡಿದ್ದಾರೆ. ಇನ್ನು ಕೆಲವು ಕಡೆ ರೈತರು ಗಡಿಭಾಗದಲ್ಲೇ ಕುಳಿತು ಪ್ರತಿಭಟಿಸುತ್ತಿದ್ದಾರೆ. ಅಲ್ಲೇ ಅಡುಗೆ ಮಾಡಿಕೊಂಡು ಊಟ ಕೂಡ ಮಾಡ್ತಿದ್ಧಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರೈತರು, ನಾವು 6 ತಿಂಗಳಿಗೆ ಆಗುವಷ್ಟು ರೇಷನ್ ಸ್ಟಾಕ್ ಮಾಡಿಕೊಂಡು ಬಂದಿದ್ದೇವೆ. ಯಾವುದೇ ಕಾರಣಕ್ಕೂ ಪ್ರತಿಭಟನೆ ನಿಲ್ಲಿಸೋದಿಲ್ಲ. ರೈತ ವಿರೋಧಿ ಕೃಷಿ ಕಾನೂನನ್ನು ವಾಪಸ್ ಪಡೆದ ಬಳಿಕವಷ್ಟೇ ನಾವು ಪ್ರತಿಭಟನೆ ನಿಲ್ಲಿಸುತ್ತೇವೆ ಅಂತ ಹೇಳಿದ್ದಾರೆ. ಸದ್ಯ ದೆಹಲಿಯ 3 ಹೆದ್ದಾರಿಗಳು ಪ್ರತಿಭಟನೆಯಿಂದಾಗಿ ಬಂದ್ ಆಗಿವೆ..

-masthmagaa.com

Contact Us for Advertisement

Leave a Reply