ಶ್ರೀಮಂತರ ಪಟ್ಟಿಯಲ್ಲಿ ಬಿಲ್ ‌ಗೇಟ್ಸ್‌ ಹಿಂದಿಕ್ಕಿದ ಮಸ್ಕ್​.. ನಂ.1 ಪಟ್ಟಕ್ಕೆ ಹತ್ತಿರ

masthmagaa.com:

ವಿಶ್ವದ ಶ್ರೀಮಂತ ವ್ಯಕ್ತಿಗಳ ಪರಿಷ್ಕೃತ ಪಟ್ಟಿ ಬಿಡುಗಡೆಯಾಗಿದ್ದು ಟೆಸ್ಲಾ ಕಂಪನಿಯ ಸಹ-ಸಂಸ್ಥಾಪಕ ಎಲಾನ್‌ ಮಸ್ಕ್ ಮೈಕ್ರೋಸಾಫ್ಟ್‌ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನ ಹಿಂದಿಕ್ಕಿ‌ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಬ್ಲೂಮ್​ಬರ್ಗ್​​ ಸಂಸ್ಥೆಯು ವಿಶ್ವದ ಶ್ರೀಮಂತ ವ್ಯಕ್ತಿಗಳ  500 ಜನರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 49 ವರ್ಷ ವಯಸ್ಸಿನ ಎಲಾನ್ ಮಸ್ಕ್ ಅವರ ಆಸ್ತಿ 7.2 ಬಿಲಿಯನ್ ಡಾಲರ್​ನಷ್ಟು (ಭಾರತದ ರೂಪಾಯಿ ಲೆಕ್ಕದಲ್ಲಿ ಸುಮಾರು 52,000 ಕೋಟಿ) ಏರಿಕೆ ಕಂಡಿದೆ. ಈ ಮೂಲಕ ಅವರ ಒಟ್ಟು ಆಸ್ತಿ 127.9 ಬಿಲಿಯನ್ ಡಾಲರ್ ಆಗಿದೆ (ಭಾರತದ ರೂಪಾಯಿ ಲೆಕ್ಕದಲ್ಲಿ 9.36 ಲಕ್ಷ ಕೋಟಿ). ಇತ್ತೀಚೆಗೆ ನಾಸಾ ಜೊತೆಗೆ ಸೇರಿಕೊಂಡು ಸ್ಪೇಸ್​ ಎಕ್ಸ್ ಕಂಪನಿ ಮಾಡಿದ ಪ್ರಾಜೆಕ್ಟ್​ಗಳು ಸಕ್ಸಸ್​ ಆದ ಪರಿಣಾಮ ಷೇರುಗಳ ಮೌಲ್ಯ ಹೆಚ್ಚಾಗಿದೆ. ಮೂರನೇ ಸ್ಥಾನದಲ್ಲಿರುವ ಬಿಲ್ ಗೇಟ್ಸ್ ಆಸ್ತಿಗೂ ಎಲಾನ್ ಮಸ್ಕ್ ಆಸ್ತಿಗೂ ಹೆಚ್ಚೇನೂ ಅಂತರವಿಲ್ಲ. ಮಸ್ಕ್ ಬಳಿ 127.9 ಬಿಲಿಯನ್ ಡಾಲರ್ ಮತ್ತು ಗೇಟ್ಸ್ ಬಳಿ 127.7 ಬಿಲಿಯನ್ ಡಾಲರ್ ಆಸ್ತಿ ಇದೆ. ವಿಶ್ವದ ಕುಬೇರರ ಈ ಪಟ್ಟಿಯಲ್ಲಿ ಅಮೆಜಾನ್​ ಸಿಇಒ ಜೆಫ್ ಬೆಝೋಸ್ ಆರಾಮಾಗಿ ಕೂತಿದ್ದಾರೆ. ಬೆಝೋಸ್ ಆಸ್ತಿ ಬರೋಬ್ಬರಿ​ 182 ಬಿಲಿಯನ್ ಡಾಲರ್. ಇವರನ್ನ ಹಿಂದಿಕ್ಕಿ ಮೊದಲ ಸ್ಥಾನಕ್ಕೇರುವ ಅವಕಾಶ ಎಲಾನ್ ಮಸ್ಕ್​ಗೆ ಇದೆ. ಯಾಕಂದ್ರೆ ಮಸ್ಕ್ ಆಸ್ತಿಯಲ್ಲಿ ಒಂದೇ ವರ್ಷ 100 ಬಿಲಿಯನ್ ಡಾಲರ್​ನಷ್ಟು ಏರಿಕೆ ಕಂಡಿದೆ. ಇದು ಹೀಗೇ ಮುಂದುವರೆದ್ರೆ ಶೀಘ್ರದಲ್ಲೇ ಎಲಾನ್ ಮಸ್ಕ್​​ ವಿಶ್ವದ ನಂಬರ್ ಒನ್ ಶ್ರೀಮಂತ ಎನಿಸಿಕೊಳ್ಳಲಿದ್ದಾರೆ. ಮೊದಲ ಮೂರು ಸ್ಥಾನದಲ್ಲಿರುವವರು ಅಮೆರಿಕದವರು ಅನ್ನೋದು ಗಮನಾರ್ಹ.

ಬ್ಲೂಮ್​ಬರ್ಗ್‌ ಬಿಲಿಯನೇರ್‌ ಇಂಡೆಕ್ಸ್​ನ ಟಾಪ್​-100ರಲ್ಲಿ ಭಾರತದ 4 ಉದ್ಯಮಿಗಳಿದ್ದಾರೆ. ಮುಕೇಶ್​‌ ಅಂಬಾನಿ 10ನೇ ಸ್ಥಾನದಲ್ಲಿದ್ರೆ, ಗೌತಮ್‌ ಅದಾನಿ 40, ಅಜೀಮ್‌ ಪ್ರೇಮ್‌ಜಿ 56 ಮತ್ತು HCL ಸಂಸ್ಥಾಪಕ‌  ಶಿವ್‌ನಾಡಾರ್‌ 71ನೇ ಸ್ಥಾನದಲ್ಲಿದ್ದಾರೆ.

-masthmagaa.com

Contact Us for Advertisement

Leave a Reply