masthmagaa.com:

ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಯೋಗೇಶ್​ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಮತ್ತು ಕಾಂಗ್ರೆಸ್​ ನಾಯಕ ವಿನಯ್​ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಗುರುವಾರ ಬೆಳಗ್ಗೆ 7 ಗಂಟೆಗೆ ವಿನಯ್ ಕುಲಕರ್ಣಿಯನ್ನ ವಶಕ್ಕೆ ಪಡೆದಿದ್ದ ಸಿಬಿಐ ಅಧಿಕಾರಿಗಳು ಸಂಜೆವರೆಗೂ ವಿಚಾರಣೆ ನಡೆಸಿ ಬಂಧಿಸಿದ್ರು. ಬಳಿಕ ಅವರನ್ನ ಧಾರವಾಡದ 3ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ಗೆ ಹಾಜರುಪಡಿಸಲಾಯ್ತು. ಕೋರ್ಟ್​ ಶುಕ್ರವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. ವಿನಯ್ ಕುಲಕರ್ಣಿಯನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಶಿಫ್ಟ್ ಮಾಡಲಾಗಿದೆ. ನಾಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರ ವಿಚಾರಣೆ ನಡೆಯಲಿದೆ.

ಏನಿದು ಪ್ರಕರಣ..?

ಜೂನ್ 15, 2016ರಂದು ಧಾರವಾಡದ ಸಪ್ತಾಪುರದಲ್ಲಿ ಜಿಮ್​ನಿಂದ ಹೊರಬಂದ ಯೋಗೇಶ್​ ಗೌಡನನ್ನು ಬೈಕ್​ನಲ್ಲಿ ಬಂದಿದ್ದ ಇಬ್ಬರು ಹಂತಕರು ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಕೊಲೆ ಇಡೀ ಧಾರವಾಡವನ್ನೇ ಬೆಚ್ಚಿ ಬೀಳಿಸಿತ್ತು. ಬಳಿಕ ಹತ್ಯೆ ಹಿಂದಿನ ಆರೋಪಿಗಳ ಬಂಧನವಾಗಬೇಕು ಅಂತ ಪ್ರತಿಭಟನೆಗಳು ನಡೆದವು. ಆರಂಭದಲ್ಲಿ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಗೌಡ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಪ್ರಕರಣ ಸಂಬಂಧ ಧಾರವಾಡ ಪೊಲೀಸರು ಎಫ್‌ಐಆರ್‌ ದಾಖಲಿಸಿ 6 ಮಂದಿ ವಿರುದ್ಧ ಚಾರ್ಜ್​ಶೀಟ್​ ಸಲ್ಲಿಸಿದ್ರು. ಇದರ ನಡುವೆಯೇ ಕೊಲೆಯಲ್ಲಿ ವಿನಯ್​ ಕುಲಕರ್ಣಿ ಕೈವಾಡ ಇದೆ ಅನ್ನೋ ಆರೋಪ ಕೇಳಿ ಬಂತು. ಆದ್ರೆ ಅವರು ಮಾತ್ರ ಆರೋಪವನ್ನ ತಳ್ಳಿ ಹಾಕಿದ್ರು. ಬಳಿಕ ಪ್ರಕರಣವನ್ನ ಸಿಬಿಐಗೆ ವಹಿಸಬೇಕೆಂಬ ಬೇಡಿಕೆಯೂ ಜೋರಾಯ್ತು. ಹೀಗಾಗಿ 2019ರ ಸೆಪ್ಟೆಂಬರ್​​ನಲ್ಲಿ ಯೋಗೇಶ್​ ಗೌಡ ಕೊಲೆ ಪ್ರಕರಣವನ್ನ ರಾಜ್ಯ ಬಿಜೆಪಿ ಸರ್ಕಾರ ಸಿಬಿಐಗೆ ವಹಿಸಿತು.

ತಿರುವು ಪಡೆದುಕೊಂಡ ಹೋರಾಟ

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಪಾತ್ರ ಆರೋಪಿಸಿ ಧಾರವಾಡದಲ್ಲಿ ತೀವ್ರ ಹೋರಾಟ ನಡೆದಿತ್ತು. ಆದ್ರೆ ಹೋರಾಟದದಲ್ಲಿ ಮುಂಚೂಣಿಯಲ್ಲಿದ್ದ ಯೋಗೇಶ್ ಗೌಡ ಪತ್ನಿ ಮಲ್ಲಮ್ಮ ಗೌಡ ದಿಢೀರ್ ಅಂತ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ರು. ಆಗ ಹೋರಾಟದ ಬಗ್ಗೆ ಸಾಕಷ್ಟು ಅಪಸ್ವರ ಕೇಳಿ ಬಂತು. ಇದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಮಲ್ಲಮ್ಮ ಗೌಡರನ್ನು ಕೂಡ ತನಿಖೆಗೆ ಒಳಪಡಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇದುವರೆಗೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಇದೀಗ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಅಂತ ಹೇಳಲಾಗ್ತಿದೆ. ಆದ್ರಿದು ರಾಜಕೀಯ ಪ್ರೇರಿತ ಅಂತ ಕಾಂಗ್ರೆಸ್ ಆರೋಪಿಸಿದ್ದು, ಕಾಂಗ್ರೆಸ್​ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.

ಸಿಎಂ ಯಡಿಯೂರಪ್ಪ ಹೇಳಿದ್ದೇನು..?

ಸಿಬಿಐ ಅಧಿಕಾರಿಗಳಿಂದ ಮಾಜಿ ಸಚಿವ ವಿನಯ್ ಕುಲಕರ್ಣಿ ವಿಚಾರಣೆ ಕುರಿತು ಸಿಎಂ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದು, ‘ವಿನಯ್ ಕುಲಕರ್ಣಿ ಮೇಲೆ ಆರೋಪ ಇದೆ. ಸಾಕ್ಷ್ಯಾಧಾರಗಳು ಸಿಕ್ಕಿರುವ ಹಿನ್ನೆಲೆ ಸಿಬಿಐ ಅಧಿಕಾರಿಗಳು ಅವರನ್ನ ವಶಕ್ಕೆ ಪಡೆದಿರಬಹುದು. ವಿನಯ್ ಕುಲಕರ್ಣಿ ಬಿಜೆಪಿ ಸೇರ್ತಾರೆ ಅನ್ನೋದು ಶುದ್ಧ ಸುಳ್ಳು. ಯೋಗೇಶ್​ ಗೌಡ ಕುಟುಂಬಕ್ಕೆ ನ್ಯಾಯ ಸಿಗಬೇಕು ಅನ್ನೋದು ಎಲ್ಲರ ಅಪೇಕ್ಷೆ. ಈಗಲಾದರೂ ನ್ಯಾಯ ಸಿಗಲಿ ಎಂಬುದೇ ನಮ್ಮ ಅಭಿಪ್ರಾಯ’ ಅಂತ ಹೇಳಿದ್ದಾರೆ.

ಮಲ್ಲಮ್ಮ ಗೌಡ ಹೇಳಿದ್ದೇನು..?

ಇನ್ನು ಯೋಗೇಶ್​ ಗೌಡ ಪತ್ನಿ ಮಲ್ಲಮ್ಮ ಗೌಡ ಮಾತನಾಡಿದ್ದು, ‘ವಿನಯ್​ ಕುಲಕರ್ಣಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿರುವ ಬಗ್ಗೆ ನನಗೆ ಖುಷಿಯೂ ಇಲ್ಲ, ದುಃಖವೂ ಇಲ್ಲ. ನನ್ನ ಗಂಡನನ್ನು ಕೊಲೆ ಮಾಡಿರುವವರು ಸಿಕ್ಕೇ ಸಿಗ್ತಾರೆ ಅನ್ನೋ ನಂಬಿಕೆ ನನಗಿದೆ. ನಮ್ಮ ಮನೆಯಲ್ಲಿ ಗೆದ್ದೆತ್ತಿನ ಬಾಲ ಹಿಡಿಯುವ ಜನರಿದ್ದಾರೆ. ಆದ್ರೆ ನನ್ನ ಜಾಯಮಾನ ಅದಲ್ಲ. ನನಗಾದ ಅನ್ಯಾಯಕ್ಕೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ. ವಿನಯ್ ಕುಲಕರ್ಣಿಗಾಗಿ ನಾನು ಕಾಂಗ್ರೆಸ್ ಪಕ್ಷಕ್ಕೆ ಬಂದಿಲ್ಲ’ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply