masthmagaa.com:

ಯುರೋಪಿನ ದೇಶ ಫ್ರಾನ್ಸ್​​ನಲ್ಲಿ ನಡೆದ ಒಂದು ಅತ್ಯಂತ ಸಹಜ ಘಟನೆ, ವಿಚಿತ್ರ ತಿರುವನ್ನ ಪಡೆದು, ಈಗ ಮತ್ತೂ ವಿಚಿತ್ರ ಅಂತ್ಯವನ್ನ ಕಂಡು ಇಡೀ ಜಗತ್ತಿನಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಅಪ್ರಾಪ್ತ ಬಾಲಕಿಯ ಕೂದಲು ಬೋಳಿಸಿದ್ದಕ್ಕಾಗಿ 5 ಜನರ ಒಂದು ಕುಟುಂಬವನ್ನ ಫ್ರಾನ್ಸ್​ನಿಂದ ಹೊರ ಹಾಕಲಾಗಿದೆ. ಮುಸ್ಲಿಮ್‌ ಹುಡುಗಿ ಕ್ರಿಶ್ಚಿಯನ್‌ ಹುಡುಗನನ್ನ ಮದುವೆ ಆಗ್ತೀನಿ ಅಂತ ಹೇಳಿದ್ದು ಇಷ್ಟಕ್ಕೆಲ್ಲಾ ಕಾರಣ. ಈ ಬಾಲಕಿ ಎರಡು ವರ್ಷಗಳ ಹಿಂದೆ ತನ್ನ ಕುಟುಂಬದೊಂದಿಗೆ ಬೋಸ್ನಿಯಾ ಅಂಡ್ ಹರ್ಜೇಗೋವಿನಾ ಅನ್ನೋ ಯುರೋಪಿನ ಸಣ್ಣ ದೇಶವೊಂದರಿಂದ ಫ್ರಾನ್ಸ್​ಗೆ ಬಂದಿದ್ದಳು. ನಂತರ ಈಕೆಗೆ ತಾನು ವಾಸ ಮಾಡುತ್ತಿದ್ದ ಅಪಾರ್ಟ್‌ಮೆಂಟ್​​ನಲ್ಲೇ ವಾಸ ಮಾಡುತ್ತಿದ್ದ ಕ್ರಿಶ್ಚಿಯನ್‌ ಹುಡುಗನ ಮೇಲೆ ಪ್ರೀತಿಯಾಗುತ್ತೆ. ವಿಷಯ ತಿಳಿದ ಹುಡುಗಿ ಮನೆಯವರು ಅವಳ ಮೊಬೈಲನ್ನು ಕಸಿದು, ಹೊಡೆದು ಬಲವಂತವಾಗಿ ತಲೆ ಕೂದಲು ಬೋಳಿಸಿದ್ದಾರೆ. ಈ ಪ್ರಕರಣ ಇಡೀ ಫ್ರಾನ್ಸ್​ನಾದ್ಯಂತ ಕೋಲಾಹಲಕ್ಕೆ ಕಾರಣವಾಗಿ ಇದೀಗ ಕೋರ್ಟ್​ ಬಾಲಕಿಯ ಕುಟುಂಬವನ್ನ 5 ವರ್ಷ ದೇಶದಿಂದ ಗಡಿಪಾರು ಮಾಡಿದೆ. ಇದೀಗ ಬಾಲಕಿ ಫ್ರಾನ್ಸ್​ನ ಸಮಾಜ ಸೇವಾ ಸಂಸ್ಥೆಗಳ ಆರೈಕೆಯಲ್ಲಿದಾಳೆ. ಆಕೆ ವಯಸ್ಸಿಗೆ ಬಂದ ನಂತರ ಫ್ರಾನ್ಸ್​ನಲ್ಲಿ ಖಾಯಂ ಆಗಿ ಇರೋಕೆ ಪರ್ಮಿಟ್ ಮಾಡಿಕೊಡ್ತೀವಿ ಅಂತಾನೂ ಫ್ರಾನ್ಸ್ ಸರ್ಕಾರ ಹೇಳಿದೆ. ಇಲ್ಲಿ ಅತ್ಯಂತ ಸಹಜ ಘಟನೆ ಆ ಹುಡುಗಿ ಪ್ರೀತಿ ಮಾಡಿದ್ದು, ವಿಚಿತ್ರ ಘಟನೆ ಅದಕ್ಕೆ ಪೋಷಕರು ತಲೆ ಬೋಳಿಸೋ ಶಿಕ್ಷೆ ಕೊಟ್ಟಿದ್ದು. ವಿಚಿತ್ರ ಅಂತ್ಯ ಅಲ್ಲಿನ ಕೋರ್ಟ್ ಇದಕ್ಕೆ ದೇಶದಿಂದಲೇ ಹೊರಹಾಕೋ ಶಿಕ್ಷೆ ಕೊಟ್ಟಿದ್ದು.

-masthmagaa.com

Contact Us for Advertisement

Leave a Reply