ಹೈದರಾಬಾದ್ ಹೈಜಾಕ್..!! ಅಮಿತ್ ಶಾ ಹೆಣೆದ ಮಾಯಾಜಾಲ ಏನು..?

masthmagaa.com:
ಫ್ರೆಂಡ್ಸ್, ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್, ಸಂಸದ ತೇಜೆಸ್ವಿ ಸೂರ್ಯ, ಸಚಿವೆ ಸ್ಮೃತಿ ಇರಾನಿ, ಸಚಿವ ಪ್ರಕಾಶ್ ಜಾವ್ಡೇಕರ್.. ಒಬ್ರಾ ಇಬ್ರಾ.. ಎಲ್ಲರೂ ಹೈದ್ರಾಬಾದ್‍ಗೆ ಹೋಗಿದ್ದೇ ಹೋಗಿದ್ದು.. ಪ್ರಚಾರ ಮಾಡಿದ್ದೇ ಮಾಡಿದ್ದು.. ಏನೋ ಲೋಕಸಭೆ ಚುನಾವಣೆ ನಡೀತಾ ಇದ್ಯೇನೋ ಅನ್ನೋವಷ್ಟು ಗದ್ದಲ..ಗಲಾಟೆ.. ಆದ್ರೆ ಬಿಜೆಪಿ ಇಷ್ಟೆಲ್ಲಾ ಮಾಡಿದ್ದು ಕೇವಲ ನಗರ ಪಾಲಿಕೆ ಚುನಾವಣೆಗೆ.. ಯೆಸ್.. ಹೈದ್ರಾಬಾದ್ ನಗರ ಪಾಲಿಕೆ ಚುನಾವಣೆಯನ್ನು ತುಂಬಾ ಸೀರಿಯಸ್ಸಾಗಿ ಪರಿಗಣಿಸಿದ್ದ ಬಿಜೆಪಿ, ಅದಕ್ಕೆ ತಕ್ಕ ಪ್ರತಿಫಲ ಕೂಡ ಪಡೆದುಕೊಂಡಿದೆ. 150 ಸ್ಥಾನಗಳ ಪೈಕಿ ಟಿಆರ್​ಎಸ್​​ 55 ಸ್ಥಾನಗಳನ್ನು ಪಡೆದುಕೊಂಡಿದ್ರೆ, ಬಿಜೆಪಿ 48 ಸ್ಥಾನಗಳನ್ನು ಪಡೆದುಕೊಂಡಿದೆ.. ಎಐಎಂಐಎಂ 44 ಸ್ಥಾನಗಳನ್ನು ಪಡೆದುಕೊಂಡಿದ್ದು, ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಪಡೆದಿದೆ. ಅಂದ್ರೆ ಇಲ್ಲಿ ಟಿಆರ್​ಎಸ್​​​ ಸೀಟುಗಳನ್ನು ಕಬಳಿಸಿದೆ ಬಿಜೆಪಿ.. ಕಳೆದ ಬಾರಿಗೆ ಹೋಲಿಸಿದ್ರೆ ಟಿಆರ್​ಎಸ್​​​ ಶೇ.40ರಷ್ಟು ಕಡಿಮೆ ಸ್ಥಾನಗಳನ್ನು ಪಡೆದುಕೊಂಡಿದೆ. ಆದ್ರೆ ಉಳಿದೊಂದು ವಾರ್ಡ್​​​​​​ನ ಮತ ಎಣಿಕೆಯನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ.

ಕಳೆದ ಬಾರಿಯ ಫಲಿತಾಂಶವನ್ನು ನೋಡೋದಾದ್ರೆ ಟಿಆರ್​​​​ಎಸ್- 99 ಸ್ಥಾನಗಳಲ್ಲಿ ಗೆದ್ರೆ, ಎಂಐಎಂ- 44 ಸ್ಥಾನಗಳಲ್ಲಿ ಗೆದ್ದಿತ್ತು. ಬಿಜೆಪಿ- 4 ಮತ್ತು ಕಾಂಗ್ರೆಸ್- 2ರಲ್ಲಿ ಗೆದ್ದಿತ್ತು.. ಅಂದ್ರೆ ಬಿಜೆಪಿ- 4 ಸ್ಥಾನದಿಂದ- 48ಕ್ಕೆ ಜಂಪ್ ಮಾಡಿದೆ. ಇದಕ್ಕೆ ಕಾರಣವಾಗಿದ್ದು ಪಿಟುಪಿ ಫಾರ್ಮುಲಾ..

ಪಿಟುಪಿ ಫಾರ್ಮುಲಾ ಅಂದ್ರೆ ಏನು..?
ಇದು ಬಿಜೆಪಿಯ ಫುಲ್ ಟೈಂ ರಾಜಕೀಯದ ಒಂದು ತಂತ್ರ ಅಷ್ಟೆ.. 2017ರಲ್ಲಿ ಅಮಿತ್ ಶಾ ಚುನಾವಣೆಯಲ್ಲಿ ಒಂದು ಮಾತು ಹೇಳಿದ್ರು.. ಅದೇ ಪಿ ಟು ಪಿ.. ಪಂಚಾಯತ್ ಟು ಪಾರ್ಲಿಮೆಂಟ್.. ಅಂದ್ರೆ ಪಂಚಾಯ್ತಿಯಿಂದ ಪಾರ್ಲಿಮೆಂಟ್‍ವರೆಗೆ ಬಿಜೆಪಿ ಅಧಿಕಾರಲ್ಲಿರಬೇಕು ಅನ್ನೋದು.. ಈಗ ಹೈದ್ರಾಬಾದ್‍ನಲ್ಲಿ ಅದೇ ತತ್ವವನ್ನು ಅನುಸರಿಸಿದೆ ಬಿಜೆಪಿ.. ಪಿಟುಪಿ ಫಾರ್ಮುಲಾ ತುಂಬಾ ಸಿಂಪಲ್.. ಈಗ ಒಂದು ರಾಜ್ಯ ಇದೆ.. ಅಲ್ಲಿ ಬಿಜೆಪಿ ಪವರ್ ಬಿಡಿ ಅಸ್ತಿತ್ವವೇ ಇಲ್ಲ.. ಅಂತ ರಾಜ್ಯದಲ್ಲಿ ಬಿಜೆಪಿ ಸ್ಥಳೀಯವಾಗಿ ಪಕ್ಷ ಸಂಘಟನೆ ಶುರುಮಾಡುತ್ತೆ. ಮೊದಲಿಗೆ ಪಂಚಾಯ್ತಿ ಮಟ್ಟದಲ್ಲಿ ಹೋರಾಡುತ್ತೆ. ಸ್ಥಳೀಯವಾಗಿ ಬಲಿಷ್ಠರಾದ ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಪ್ರಾಬಲ್ಯ ಸಾಧಿಸುತ್ತೆ. ವಿಧಾನಸಭೆಯಲ್ಲಿ ಬಲಿಷ್ಠರಾದ ಬಳಿಕ ಲೋಕಸಭೆಯಲ್ಲಿ ಪ್ರಾಬಲ್ಯ ಸಾಧಿಸಿ, ಆಧಿಕಾರಕ್ಕೆ ಬರುತ್ತೆ.. ಇದೇ ಪಿಟುಪಿ ಫಾರ್ಮುಲಾ..

ಅಂದ್ರೆ ಬಿಜೆಪಿಯ ಪಿಟುಪಿ ಫಾರ್ಮುಲಾ ವರ್ಕೌಟ್ ಆಗ್ತಾ ಇದೆ ಅಂತ ಆಯ್ತು.. ಈಗ ಹೈದ್ರಾಬಾದ್‍ನಲ್ಲೂ ಬಿಜೆಪಿ ಅದೇ ಫಾರ್ಮುಲಾ ಅನುಸರಿಸಿದೆ. ಇಲ್ಲಿ ಶೇ.44ರಷ್ಟು ಮುಸ್ಲಿಮರಿದ್ರೆ, ಶೇ.52ರಷ್ಟು ಮಂದಿ ಹಿಂದೂಗಳಿದ್ದಾರೆ. ಬಿಜೆಪಿಗೆ ಇನ್ನೊಂದು ಪ್ಲಸ್ ಪಾಯಿಂಟ್ ಅಂದ್ರೆ ಹೈದ್ರಾಬಾದ್‍ನಲ್ಲಿ ಓವೈಸಿಯ ಎಐಎಂಐಎಂ ಸ್ಟ್ರಾಂಗ್ ಆಗಿರೋದು. ಹೀಗಾಗಿ ಇಲ್ಲಿ ಮತವಿಭಜನೆಗೆ ಬಿಜೆಪಿ ಮುಂದಾಗಿದೆ. ಹೀಗಾಗಿಯೇ ಹೈದ್ರಾಬಾದ್‍ನ ನಿಜಾಮಿ ಸಂಸ್ಕೃತಿಯನ್ನು ಕೊನೆಗೊಳಿಸ್ತೇವೆ ಅಂತ ಅಮಿತ್ ಶಾ ಹೇಳ್ತಿದ್ರೆ, ಯೋಗಿ ಆದಿತ್ಯನಾಥ್ ಹೈದ್ರಾಬಾದ್ ಹೆಸರು ಚೇಂಜ್ ಮಾಡಿ ಭಾಗ್ಯನಗರ ಮಾಡ್ತೀವಿ ಅಂತ ಹೇಳಿದ್ರು.

ಅಷ್ಟೇ ಅಲ್ಲ.. ಅಸಾದುದ್ದೀನ್ ಓವೈಸಿಯ ಎಂಐಎಂ ಜೊತೆ ಮೈತ್ರಿ ಇಲ್ಲ ಅಂತ ಟಿಆರ್​ಎಸ್​​ ಹೇಳಿಕೊಂಡೇ ಬಂದಿದೆ. ಅದ್ರೆ ಈಗ ಅತಂತ್ರ ಪರಿಸ್ಥಿತಿಯಾಗಿದ್ದು ಟಿಆರ್​​ಎಸ್​​​ ಇಕ್ಕಟ್ಟಿಗೆ ಸಿಲುಕಿದೆ. ಅಧಿಕಾರ ಹಿಡಿಯಬೇಕಾದ್ರೆ ಮೈತ್ರಿ ಮಾಡಿಕೊಳ್ಳಬೇಕು. ಎಂಐಎಂ ಜೊತೆ ಮೈತ್ರಿ ಮಾಡ್ಕೊಂಡ್ರೆ ಇಸ್ಲಾಂ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಂತೆ ಆಗುತ್ತೆ. ಅದು ಬಿಟ್ರೆ ಮೈತ್ರಿಗೆ ಇರೋ ಮತ್ತೊಂದು ಆಪ್ಶನ್ ಅಂದ್ರೆ ಅದು ಬಿಜೆಪಿ.. ಸೋ ಬಿಜೆಪಿಯ ಪ್ಲಾನ್ ಯಶಸ್ವಿಯಾಗಿದೆ. ಇದೇ ಪ್ಲಾನ್ ಅನುಸರಿಸಿ ಅಸ್ಸಾಂನಲ್ಲೂ ಗೆದ್ದಿತ್ತು ಬಿಜೆಪಿ. ಇಲ್ಲಿ ಎಂಐಎಂ ಇರುವಂತೆ ಅಸ್ಸಾಂನಲ್ಲಿ ಎಐಯುಡಿಎಫ್​ ಅಂದ್ರೆ ಆಲ್ ಇಂಡಿಯಾ ಯುನೈಟೆಡ್ ಡೆಮೋಕ್ರಟಿಕ್ ಫ್ರಂಟ್ ಇದೆ. ಅಲ್ಲಿ ಆ ಪಕ್ಷ ಮತ್ತು ಅದರ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರನ್ನೇ ಮುಂದಿಟ್ಟುಕೊಂಡು ಅಧಿಕಾರಕ್ಕೆ ಬಂದಿತ್ತು ಬಿಜೆಪಿ…

ಸದ್ಯ ಇಡೀ ದೇಶದಲ್ಲಿ ಬಿಜೆಪಿ ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಅದ್ರಲ್ಲೂ ಮಧ್ಯಭಾರತದ ಹಿಂದಿ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಜಾಸ್ತಿಯೇ ಇದೆ. ರಾಜಸ್ತಾನ, ಜಾರ್ಖಂಡ್‍ನಲ್ಲಿ ಕಾಂಗ್ರೆಸ್ ಇದ್ರೂ ಕೂಡ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೈ ಮೇಲಾಗಿದೆ. ಪಂಜಾಬ್ ಹೊರತುಪಡಿಸಿ ಕಾಂಗ್ರೆಸ್ ಅಧಿಕಾರದಲ್ಲಿರೋ ರಾಜ್ಯಗಳಲ್ಲಿ ಬಿಜೆಪಿಗೆ ಕಾಂಗ್ರೆಸ್ ಸುಲಭದ ಎದುರಾಳಿ.. ಆದ್ರೆ ದಕ್ಷಿಣ ಭಾರತದ ಕೆಲವೊಂದು ರಾಜ್ಯಗಳು ಅಂದ್ರೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾದಲ್ಲಿ ಪ್ರಾದೇಶಿಕ ಪಕ್ಷಗಳು ಪ್ರಬಲವಾಗಿವೆ. ಇಲ್ಲಿ 2ನೇ ಸ್ಥಾನದಲ್ಲಿರೋ ಕಾಂಗ್ರೆಸ್ ಬಿಜೆಪಿಗೆ ಸದ್ಯದ ಎದುರಾಳಿ.. ಅದ್ರಲ್ಲೂ ಕೆಲ ರಾಜ್ಯಗಳಲ್ಲಿ ಬಿಜೆಪಿ ಈಗಾಗಲೇ ಕಾಂಗ್ರೆಸ್ಸನ್ನು ಸೈಡ್ ಹೊಡೆದು ಸೆಕೆಂಡ್ ಪ್ಲೇಸ್‍ಗೆ ಬಂದಾಗಿದೆ.. ಅದು ನಿಮಗೆ ಅರ್ಥವಾಗಬೇಕಾದ್ರೆ ಕೆಲವೊಂದು ಚುನಾವಣೆಯ ಅಂಕಿ ಅಂಶಗಳ ಮೇಲೆ ಕಣ್ಣು ಹಾಯಿಸಬೇಕು.. ಮೊದಲಿಗೆ ಒಡಿಶಾದ ಚುನಾವಣೆ ಫಲಿತಾಂಶವನ್ನು ನೋಡೋಣ..

ಒಡಿಶಾದಲ್ಲಿ ಪಿಟುಪಿ ಫಾರ್ಮುಲಾ ಸಕ್ಸಸ್..!
ಒಡಿಶಾದಲ್ಲಿ 2012ರ ಜಿಲ್ಲಾ ಪರಿಷತ್ ಚುನಾವಣೆ ನಡೀತು.. ಇದ್ರಲ್ಲಿ ಬಿಜೆಪಿ 36, ಬಿಜೆಡಿ ಅಂದ್ರೆ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ 651, ಕಾಂಗ್ರೆಸ್ 128 ಸೀಟುಗಳನ್ನು ಪಡೆದುಕೊಂಡಿತ್ತು. ಅದೇ 2017ರ ಚುನಾವಣೆ ಬಂದಾಗ ಬಿಜೆಪಿ ಹೈದ್ರಾಬಾದ್‍ನಲ್ಲಿ ಮಾಡಿದಂತೆ ದೊಡ್ಡ ಮಟ್ಟದಲ್ಲಿ, ದೊಡ್ಡ ದೊಡ್ಡ ನಾಯಕರ ಮೂಲಕ ಪ್ರಚಾರ ಮಾಡಿಸಿತ್ತು. ಇದ್ರ ಪರಿಣಾಮ ಬಿಜೆಪಿ 297 ಸ್ಥಾನ ಪಡೆದುಕೊಂಡಿತ್ತು. ಉಳಿದಂತೆ ಬಿಜೆಡಿ- 473, ಕಾಂಗ್ರೆಸ್ 60 ಸ್ಥಾನ ಪಡೆದುಕೊಂಡಿದ್ದವು. ಅಂದ್ರೆ ಇಲ್ಲಿ ಗಮನಿಸಬೇಕಾದ ಅಂಶ ಅಂದ್ರೆ ಬಿಜೆಪಿ ಅಧಿಕಾರಕ್ಕೆ ಏರದಿದ್ರೂ ಕಳೆದ ಚುನಾವಣೆಗಿಂತ 261 ಸ್ಥಾನಗಳನ್ನು ಹೆಚ್ಚಾಗಿ ಗಳಿಸಿತ್ತು. 2012ರ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದ ಕಾಂಗ್ರೆಸ್ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ನಂತ್ರ 2019ರಲ್ಲಿ ವಿಧಾನಸಭೆ ಚುನಾವಣೆ ಬಂತು.. ಅದ್ರಲ್ಲಿ ಬಿಜೆಪಿ-23 ಸ್ಥಾನ ಪಡೆದುಕೊಂಡ್ರೆ, ಬಿಜೆಡಿ 117 ಸ್ಥಾನ ಪಡೆದುಕೊಳ್ತು.. ಆದ್ರೆ ಮತ ಹಂಚಿಕೆ ವಿಚಾರಕ್ಕೆ ಬಂದ್ರೆ ಬಿಜೆಪಿ ಶೇ.32.49ರಷ್ಟು ಮತಗಳಿಸಿದ್ರೆ ಬಿಜೆಡಿ ಶೇ. 43.35ರಷ್ಟು ಮತ ಪಡೆದಿತ್ತು. ಅಂದ್ರೆ ಮತದ ಪ್ರಮಾಣ ಗಮನಿಸಿದ್ರೆ ಬಿಜೆಡಿ ಬಿಜೆಪಿಗಿಂತ ಶೇ.11ರಷ್ಟು ಮತ ಜಾಸ್ತಿ ಪಡೆದಿತ್ತು ಅಷ್ಟೆ.. ಅದೇ ಕಾಂಗ್ರೆಸ್ 9 ಕ್ಷೇತ್ರದಲ್ಲಿ ಗೆದ್ದು 3ನೇ ಸ್ಥಾನಕ್ಕೆ ತಳ್ಳಲ್ಪಡ್ತು..

ತೆಲಂಗಾಣದಲ್ಲೂ ಬಿಜೆಪಿ ಪಿಟುಪಿ ಫಾರ್ಮುಲಾ..!
ಅದೇ ತೆಲಂಗಾಣದ ವಿಚಾರಕ್ಕೆ ಬಂದ್ರೆ ತೆಲಂಗಾಣದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕಿದ್ದು ಒಂದೇ ಒಂದು ಸೀಟು. ಶೇ.7.1ರಷ್ಟು ಮತ.. ಅದೇ ಕಾಂಗ್ರೆಸ್‍ಗೆ 19 ಸೀಟು ಮತ್ತು ಶೇ.28.43ರಷ್ಟು ಮತ ಸಿಕ್ಕಿತ್ತು. ಆದ್ರೆ ಲೋಕಸಭೆ ಚುನಾವಣೆಯಲ್ಲಿ ಇದು ಉಲ್ಟಾ ಆಗೋಗಿದೆ. ಬಿಜೆಪಿ 4 ಕ್ಷೇತ್ರಗಳಲ್ಲಿ ಗೆದ್ರೆ, ಕಾಂಗ್ರೆಸ್ 3 ಸೀಟುಗಳಿಗೆ ತೃಪ್ತಿ ಪಟ್ಟಿದೆ. ಅಂದ್ರೆ ನಿಧಾನವಾಗಿ ಬಿಜೆಪಿ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಬಂದಿದೆ. ಎಲ್ಲಾ ಬಿಡಿ ನಿಜಾಮಾಬಾದ್‍ನಲ್ಲಿ ಕೆಸಿಆರ್ ಮಗಳು ಕವಿತ ಕಲ್ವಕುಂತ್ಲ ವಿರುದ್ಧವೇ ಬಿಜೆಪಿ ವಿಜಯಪತಾಕೆ ಹಾರಿಸಿದೆ. ಅಷ್ಟೇ ಯಾಕೆ 2018ರಲ್ಲಿ ಟಿಆರ್​​​ಎಸ್ ಭರ್ಜರಿ ಬಹುಮತದೊಂದಿಗೆ ಗೆದಿದ್ದ ದುಬಕ್ಕ ಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಉಪಚುನಾವಾಣೆಯಲ್ಲೂ ಬಿಜೆಪಿಯೇ ಗೆದ್ದಿದೆ.

ಫ್ರೆಂಡ್ಸ್​, ಇದಾಗಿತ್ತು ಹೈದ್ರಾಬಾದ್ ನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಮತ್ತು ಅದರ ಹಿಂದಿನ ಅಸಲಿ ಕಾರಣವನ್ನು ತಿಳಿಸಿಕೊಡುವ ಪ್ರಯತ್ನ.. ಈ ಬಗ್ಗೆ ನಿಮಗೆ ಏನ್ ಅನ್ನಿಸ್ತು ಅಂತ ಕಾಮೆಂಟ್ ಮಾಡಿ ತಿಳಿಸಿ. ಹಾಗೆ ನಮ್ಮ ಪ್ರಯತ್ನ ಇಷ್ಟವಾಗಿದ್ರೆ ಮಸ್ತ್ ಮಗಾ ಡಾಟ್ ಕಾಮ್​ನ ಚಾನಲ್​​​ಗೆ ಸಬ್​ಸ್ಕ್ರೈಬ್ ಆಗಿ ನಮ್ಮನ್ನು ಬೆಂಬಲಿಸಿ..

masthmagaa.com

Contact Us for Advertisement

Leave a Reply