masthmagaa.com:

ಭಾರತ-ಚೀನಾ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿರುವ ನಡುವೆಯೇ ಅಮೆರಿಕ ಮತ್ತು ಭಾರತ ನಡುವೆ ಸಚಿವರ ಮಟ್ಟದ ‘2+2’ ಮೀಟಿಂಗ್ ನಡೆಯುತ್ತಿದೆ. ದೆಹಲಿಯ ಹೈದರಾಬಾದ್​ ಹೌಸ್​ನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್​. ಜೈಶಂಕರ್ ಮತ್ತು ಅಮರಿಕದ ಗೃಹ ಕಾರ್ಯದರ್ಶಿ (ವಿದೇಶಾಂಗ ಸಚಿವ) ಮೈಕ್ ಪಾಂಪಿಯೋ, ರಕ್ಷಣಾ ಸಚಿವ ಮಾರ್ಕ್ ಎಸ್ಪರ್ ಸೇರಿದಂತೆ ಉಭಯ ದೇಶಗಳ ಉನ್ನತ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದಾರೆ.

ಈ ವೇಳೆ ಮಾತನಾಡಿದ ಮೈಕ್ ಪಾಂಪಿಯೋ, ‘ಜಗತ್ತಿನ ಎರಡು ಅತಿ ದೊಡ್ಡ ಪ್ರಜಾಪ್ರಭುತ್ವ ದೇಶಗಳು ಒಟ್ಟಿಗೆ ಅಭಿವೃದ್ಧಿ ಹೊಂದಲು ಒಳ್ಳೆಯ ಅವಕಾಶ ಸಿಕ್ಕಿದೆ. ಇವತ್ತು ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ನಡೆಸಬೇಕಿದೆ. ಅದು ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಪರಸ್ಪರ ಸಹಕರಿಸೋದಾಗಿರಬಹುದು, ದೇಶದ ಭದ್ರತೆ ಮತ್ತು ಸ್ವಾತಂತ್ರ್ಯಕ್ಕೆ ಚೀನಾದ ಕಮ್ಯುನಿಸ್ಟ್ ಪಾರ್ಟಿ ಹಾಕುತ್ತಿರುವ ಬೆದರಿಕೆ ಆಗಿರಬಹುದು, ಈ ಭಾಗದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದಾಗಿರಬಹುದು’ ಅಂತ ಹೇಳಿದ್ದಾರೆ. ಈ ಮೂಲಕ ಭಾರತ-ಅಮೆರಿಕ ನಡುವಿನ ಮಹತ್ವದ ‘2+2’ ಮೀಟಿಂಗ್​ನಲ್ಲಿ ಚೀನಾ ವಿಚಾರ ಕೂಡ ಪ್ರಸ್ತಾಪವಾಗಿರುವುದು ಸಾಕಷ್ಟು ಮಹತ್ವ ಪಡೆದುಕೊಂಡಿದೆ.

ಅಂದ್ಹಾಗೆ ಈ ಸಭೆಯಲ್ಲಿ ಭಾರತ ಮತ್ತು ಅಮೆರಿಕ BECA (Basic Exchange and Cooperation Agreement) ಒಪ್ಪಂದಕ್ಕೆ ಸಹಿ ಹಾಕಲಿವೆ. ಈ ಒಪ್ಪಂದದಿಂದ ಅಮೆರಿಕದ ಸೇನಾ ಉಪಗ್ರಹಗಳ ಲಾಭ ಭಾರತಕ್ಕೂ ಸಿಗಲಿದೆ. ರಿಯಲ್​ ಟೈಮ್​ನಲ್ಲಿ ನಿಖರವಾದ ಉಪಗ್ರಹ ಮಾಹಿತಿಯನ್ನು ಅಮೆರಿಕ ಸೇನೆಯಿಂದ ಭಾರತ  ಪಡೆಯಬಹುದು. ಇದೇ ರೀತಿ ಭಾರತದಿಂದ ಅಮೆರಿಕಕ್ಕೂ ನೆರವಾಗಲಿದೆ. ಸಭೆ ಬಳಿಕ ಮೈಕ್ ಪಾಂಪಿಯೋ ಮತ್ತು ಮಾರ್ಕ್ ಎಸ್ಪರ್ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್​ ದೋವಲ್​ ಅವರನ್ನ ಭೇಟಿಯಾಗಿದ್ದಾರೆ.

ಮತ್ತೊಂದುಕಡೆ ಬರೋಬ್ಬರಿ 2.37 ಬಿಲಿಯನ್ ಡಾಲರ್ ಮೊತ್ತದ ‘ಹಾರ್ಪೂನ್​’ ಮಿಸೈಲ್​ ವ್ಯವಸ್ಥೆಯನ್ನು ತೈವಾನ್​ಗೆ ಮಾರಾಟ ಮಾಡಲು ಅಮೆರಿಕ ಕಾಂಗ್ರೆಸ್ ಒಪ್ಪಿಗೆ ನೀಡಿದೆ. ಇಷ್ಟು ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಮರಿಕ ತೈವಾನ್​ಗೆ ನೀಡುತ್ತಿರೋದು ಕಳೆದ 2 ವಾರಗಳ ಅವಧಿಯಲ್ಲಿ ಇದು ಎರಡನೇ ಸಲ ಅನ್ನೋದು ಗಮನಾರ್ಹ. ತೈವಾನ್​ ತನಗೆ ಸೇರಿದ್ದು ಅಂತ ಚೀನಾ ವಾದಿಸುತ್ತಲೇ ಬರ್ತಿದೆ. ಆದ್ರೆ ತೈವಾನ್ ಚೀನಾನೇ ತನ್ನದು ಅಂತಿದೆ. ಇಂತಹ ಸಂದರ್ಭದಲ್ಲಿ ತೈವಾನ್​ಗೆ ರಕ್ಷಣಾ ಸಾಮಗ್ರಿಗಳನ್ನು ಅಮೆರಿಕ ಮಾರಾಟ ಮಾಡಿರೋದು, ಭಾರತದಲ್ಲಿ ನಡೆಯುತ್ತಿರುವ ‘2+2’ ಮೀಟಿಂಗ್ ವೇಳೆ ಚೀನಾ ವಿಚಾರವನ್ನು ಪ್ರಸ್ತಾಪಿಸಿರೋದು ಡ್ರಾಗನ್ ರಾಷ್ಟ್ರದ ಟೆನ್ಷನ್​ ಹೆಚ್ಚಿಸಿರೋದಂತೂ ಗ್ಯಾರಂಟಿ.

-masthmagaa.com

Contact Us for Advertisement

Leave a Reply