masthmagaa.com:

ಚೀನಾ, ಜಪಾನ್ ಬಳಿಕ ಏಷ್ಯಾದ 3ನೇ ಮತ್ತು ಜಗತ್ತಿನ 5ನೇ ಅತಿದೊಡ್ಡ ಆರ್ಥಿಕತೆಯಾದ ಭಾರತವನ್ನು ತಲಾ ದೇಶೀಯ ಉತ್ಪನ್ನದಲ್ಲಿ (Per Capita Gross Domestic Product) ನಮ್ಮ ನೆರೆಯ, ಪುಟ್ಟ ದೇಶ  ಬಾಂಗ್ಲಾದೇಶ ಹಿಂದಿಕ್ಕಲಿದೆ ಅಂತ ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಅಂದಾಜು ಮಾಡಿದೆ. ಕೊರೋನಾ ಹಾವಳಿ ಮತ್ತು ಲಾಕ್​ಡೌನ್​ನಿಂದಾಗಿ ಈ ಬದಲಾವಣೆ ಆಗಲಿದೆ ಅಂತ ಐಎಂಎಫ್ ಅಭಿಪ್ರಾಯಪಟ್ಟಿದೆ. ಅಂದ್ಹಾಗೆ ಬಾಂಗ್ಲಾದೇಶದ ಆರ್ಥಿಕತೆ ವಿಶ್ವದ 39ನೇ ದೊಡ್ಡ ಆರ್ಥಿಕತೆಯಾಗಿದೆ.

ಅಂದ್ಹಾಗೆ ಐಎಂಎಫ್​ನ ವರ್ಲ್ಡ್‌ ಎಕನಾಮಿಕ್ ಔಟ್‌ಲುಕ್ (WEO) ಪ್ರಕಾರ, ಪ್ರಸಕ್ತ ಆರ್ಥಿಕ ವರ್ಷದಲ್ಲಿ (2021ರ ಮಾರ್ಚ್​ ​31ರ ಒಳಗೆ) ಭಾರತದ ತಲಾ ಜಿಡಿಪಿ 10.3 ಪರ್ಸೆಂಟ್​ನಷ್ಟು ಇಳಿಕೆಯಾಗಲಿದ್ದು 1,877 ಡಾಲರ್​ಗೆ​ (ಭಾರತದ ರೂಪಾಯಿ ಲೆಕ್ಕದಲ್ಲಿ₹1.37 ಲಕ್ಷಕ್ಕೆ) ಕುಸಿಯಲಿದೆ. ಮತ್ತೊಂದುಕಡೆ ಬಾಂಗ್ಲಾದೇಶದ ತಲಾ ಜಿಡಿಪಿ 4 ಪರ್ಸೆಂಟ್ ಏರಿಕೆ ಕಂಡು 1,888 ಡಾಲರ್​ಗೆ (ಭಾರತದ ರೂಪಾಯಿ ಲೆಕ್ಕದಲ್ಲಿ ₹1.38 ಲಕ್ಷಕ್ಕೆ) ಏರಿಕೆಯಾಗಲಿದೆ ಅಂತ ಅಂದಾಜು ಮಾಡಲಾಗಿದೆ.

ಒಟ್ಟು ದೇಶೀಯ ಉತ್ಪನ್ನದಲ್ಲಿ (GDP) ದೇಶದ ಜನಸಂಖ್ಯೆಯನ್ನು ಭಾಗಿಸಿದ್ರೆ ತಲಾ ಜಿಡಿಪಿ ಗೊತ್ತಾಗುತ್ತದೆ. ಅಂದ್ರೆ ದೇಶದ ಜಿಡಿಪಿಯಲ್ಲಿ ಒಬ್ಬ ವ್ಯಕ್ತಿಯ ಕೊಡುಗೆ ಏನು ಅನ್ನೋದನ್ನು ಅಳೆಯಲು ಹೀಗೆ ಮಾಡಲಾಗುತ್ತದೆ. ಐಎಂಎಫ್​ನ ವರದಿ ಪ್ರಕಾರ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದ ಪ್ರತಿಯೊಬ್ಬ ಪ್ರಜೆ ತಲಾ 1.37 ಲಕ್ಷ ರೂಪಾಯಿಯಷ್ಟು ದೇಶದ ಜಿಡಿಪಿಗೆ ಕೊಡುಗೆ ಕೊಡುತ್ತಾನೆ. ಆದ್ರೆ ಬಾಂಗ್ಲಾದೇಶದ ಪ್ರಜೆಗಳು ನಮಗಿಂತ ಜಾಸ್ತಿ ಅಂದ್ರೆ 1.38 ಲಕ್ಷ ರೂಪಾಯಿಯಷ್ಟು ಆ ದೇಶದ ಜಿಡಿಪಿಗೆ ಕೊಡುಗೆ ನೀಡುತ್ತಾರೆ ಅನ್ನೋದು ಈ ಲೆಕ್ಕಾಚಾರ. ಸಮಾಧಾನದ ವಿಚಾರ ಅಂದ್ರೆ 2021ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ 8.8%ನಷ್ಟು ಏರಿಕೆ ಕಾಣಲಿದೆ ಅಂತ ಐಎಂಎಫ್​ನ ವರ್ಲ್ಡ್‌ ಎಕನಾಮಿಕ್ ಔಟ್‌ಲುಕ್ ಅಭಿಪ್ರಾಯಪಟ್ಟಿದೆ.

ತಲಾ ಜಿಡಿಪಿ ವಿಚಾರದಲ್ಲಿ ನಮ್ಮ ದೇಶವನ್ನ ಬಾಂಗ್ಲಾದೇಶ ಹಿಂದಿಕ್ಕಲಿದೆ ಅಂತ ಐಎಂಎಫ್ ಹೇಳುತ್ತಿದ್ದಂತೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದು 6 ವರ್ಷಗಳಲ್ಲಿ ಬಿಜೆಪಿ ಸರ್ಕಾರದ ‘ದ್ವೇಷ ತುಂಬಿದ ಸಾಂಸ್ಕೃತಿಕ ರಾಷ್ಟ್ರೀಯತೆಯ’ ಬಹುದೊಡ್ಡ ಸಾಧನೆ ಅಂತ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply