masthmagaa.com:

ತನ್ನ ಸೋದರ ಸೊಸೆಗೆ ಕಿರುಕುಳ ನೀಡುತ್ತಿದ್ದವರ ವಿರುದ್ಧ ದೂರು ನೀಡಿದ್ದ ಪತ್ರಕರ್ತನನ್ನು ಕಿಡಿಗೇಡಿಗಳು ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್​ನಲ್ಲಿ ನಡೆದಿದೆ. ಪತ್ರಕರ್ತ ವಿಕ್ರಮ್ ಜೋಶಿ ಕೊಲೆಯಾದ ವ್ಯಕ್ತಿ. ಅಂದ್ಹಾಗೆ ತಮ್ಮ ಸೊಸೆಗೆ ಕಿರುಕುಳ ನೀಡುತ್ತಿದ್ದ ಪುಂಡರ ವಿರುದ್ಧ ವಿಕ್ರಮ್ ಜೋಶಿ ಜುಲೈ 16ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ರು.

ಪ್ರಕರಣ ದಾಖಲಿಸಿ 4 ದಿನಗಳ ನಂತರ, ಅಂದ್ರೆ ಜುಲೈ 20ರಂದು ರಾತ್ರಿ 10.30ರ ಸುಮಾರಿಗೆ ವಿಕ್ರಮ್ ಜೋಶಿ ತಮ್ಮ ಇಬ್ಬರು ಹೆಣ್ಣು ಮಕ್ಕಳ ಜೊತೆ ಬೈಕ್​ನಲ್ಲಿ ಹೋಗುತ್ತಿದ್ದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಈ ವೇಳೆ ಹೆದರಿದ ಮಕ್ಕಳು ದೂರ ಓಡಿ ಹೋದ್ರು. ನೋಡ ನೋಡುತ್ತಿದ್ದಂತೆ ದುಷ್ಕರ್ಮಿಯೊಬ್ಬ ಪತ್ರಕರ್ತನ ತಲೆಗೆ ಬಂದೂಕು ಇಟ್ಟು ಗುಂಡು ಹಾರಿಸಿಯೇ ಬಿಟ್ಟ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದವು.

ಗುಂಡು ತಗುಲಿ ಗಂಭೀರ ಸ್ಥಿತಿಯಲ್ಲಿ ಬಿದ್ದಿದ್ದ ವಿಕ್ರಮ್​ ಜೋಶಿಯವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇವತ್ತು ಮೃತಪಟ್ಟಿದ್ದಾರೆ. ಪ್ರಕರಣ ಸಂಬಂಧ ಇದುವರೆಗೆ ಮೂವರನ್ನು ಅರೆಸ್ಟ್ ಮಾಡಲಾಗಿದ್ದು, 6 ಜನರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ತಲೆಮರೆಸಿಕೊಂಡಿದ್ದಾನೆ. ಅಲ್ಲದೆ ಕರ್ತವ್ಯ ಲೋಪ ಹಿನ್ನೆಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನ ಅಮಾನತು ಮಾಡಲಾಗಿದೆ.

-masthmagaa.com

Contact Us for Advertisement

Leave a Reply