masthmagaa.com:

ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ. ಈ ಸಂಬಂಧ ಕೆಲವೊಂದು ಷರತ್ತುಗಳೊಂದಿಗೆ ಪರಿಷ್ಕೃತ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಗ್ಗೆ ‘ಸಿಎಂ ಆಫ್ ಕರ್ನಾಟಕ’ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು, ಕೊರೋನಾ ಹಿನ್ನೆಲೆಯಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಸ್ಪಂದಿಸಿ, ಸಾಂಪ್ರದಾಯಿಕ ಗಣೇಶೋತ್ಸವ ಆಚರಣೆಗೆ ಧಕ್ಕೆ ಬಾರದಂತೆ ಸರ್ಕಾರ ಮಾರ್ಗಸೂಚಿಗಳನ್ನ ರೂಪಿಸಿದೆ. ಕೊರೋನಾ ಹರಡುವಿಕೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ ಪರಿಸರಸ್ನೇಹಿ ಗಣೇಶೋತ್ಸವ ಆಚರಿಸಲು ವಿನಂತಿ ಮಾಡಿಕೊಳ್ಳಲಾಗಿದೆ.

ಹೊಸ ಮಾರ್ಗಸೂಚಿಯಲ್ಲಿ ಏನಿದೆ..?

– ದೇವಾಸ್ಥಾನಗಳೊಳಗೆ, ಮನೆಗಳಲ್ಲಿ ಅಥವಾ ಸರ್ಕಾರಿ, ಖಾಸಗಿ, ಸಾರ್ವಜನಿಕ ಬಯಲು ಪ್ರದೇಶದಲ್ಲಿ ಸರಳ ರೀತಿಯಲ್ಲಿ ಕಡಿಮೆ ಸಂಖ್ಯೆ ಜನ ಸೇರಿ ಹಬ್ಬ ಆಚರಿಸಬಹುದು

– ಸಾರ್ವಜನಿಕ ಸ್ಥಳಗಳಲ್ಲಿ ಇಡುವ ಗಣೇಶ ಮೂರ್ತಿ 4 ಅಡಿ ಮೀರುವಂತಿಲ್ಲ, ಮನೆಗಳಲ್ಲಿ 2 ಅಡಿ ಮೀರುವಂತಿಲ್ಲ

– ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಲು ಸ್ಥಳೀಯ ಆಡಳಿತದ ಅನುಮತಿ ಪಡೆಯತಕ್ಕದ್ದು

– ಒಂದು ವಾರ್ಡ್​ ಅಥವಾ ಒಂದು ಗ್ರಾಮಕ್ಕೆ ಒಂದು ಸಾರ್ವಜನಿಕ ಗಣೇಶ ಮೂರ್ತಿ ಇಡಲು ಪ್ರೋತ್ಸಾಹ

– ಒಂದುಸಲ 20ಕ್ಕೂ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು

– ಗಣೇಶ ಮೂರ್ತಿ ಪ್ರತಿಷ್ಠಾಪನಾ ಪ್ರದೇಶದಲ್ಲಿ ಯಾವುದೇ ಮನರಂಜನಾ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ

– ಮೂರ್ತಿ ತರುವಾಗ ಮತ್ತು ವಿಸರ್ಜನೆ ಮಾಡುವಾಗ ಮೆರವಣಿಗೆ ಮಾಡುವಂತಿಲ್ಲ

– ಮನೆಯಲ್ಲಿಟ್ಟ ವಿಗ್ರಹಗಳನ್ನ ಮನೆಯಲ್ಲೇ ವಿಸರ್ಜಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿಟ್ಟ ಮೂರ್ತಿಗಳನ್ನ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರ್ಮಿಸಲಾದ ಸಮೀಪದ ಹೊಂಡ ಅಥವಾ ಮೊಬೈಲ್ ಟ್ಯಾಂಕ್ ಅಥವಾ ಕೃತಕ ವಿಸರ್ಜನಾ ಟ್ಯಾಂಕ್​ಗಳಲ್ಲಿ ವಿಸರ್ಜಿಸಬಹುದು.

-masthmagaa.com

Contact Us for Advertisement

Leave a Reply