ಕ್ಯಾಮರಾ ಆಕಾರದ ‘ಕ್ಲಿಕ್’ ಮನೆ.. ಕೆನಾನ್, ಎಪ್ಸಾನ್, ನಿಕಾನ್ ಎಂಬ ಮಕ್ಕಳು

masthmagaa.com:

ಬೆಳಗಾವಿಯಲ್ಲಿ ಫೋಟೋಗ್ರಾಫರ್ ಒಬ್ಬರು ಕ್ಯಾಮರಾ ಆಕಾರದ ಮನೆಯನ್ನು ನಿರ್ಮಿಸಿ ಸುದ್ದಿಯಾಗಿದ್ದಾರೆ. ಅಷ್ಟೇ ಅಲ್ಲ, ತಮ್ಮ ಮೂವರು ಗಂಡು ಮಕ್ಕಳಿಗೆ ಕೆನಾನ್, ಎಪ್ಸಾನ್ ಮತ್ತು ನಿಕಾನ್ ಅನ್ನೋ ಕ್ಯಾಮರಾ ಬ್ರಾಂಡ್​ಗಳ ಹೆಸರನ್ನೇ ಇಟ್ಟಿದ್ದಾರೆ. ಅಂದ್ಹಾಗೆ ಇದು ಫೋಟೋಗ್ರಾಫರ್ ರವಿ ಮತ್ತು ಕೃಪಾ ಅವರ ಕನಸಿನ ಮನೆ. ಬೃಹತ್ ಡಿಎಸ್​ಎಲ್​ಆರ್ ಕ್ಯಾಮರಾ ಶೇಪಿನ ಈ ಮನೆ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಬೆಳಗಾವಿಯ ಶಾಸ್ತ್ರಿನಗರದಲ್ಲಿರುವ 3 ಅಂತಸ್ತಿನ ಈ ಮನೆಯು ಛಾಯಾಗ್ರಹಣ ಕಲೆ ಮೇಲೆ ರವಿ ಅವರಿಗೆ ಇರುವ ಉತ್ಸಾಹ ಮತ್ತು ಪ್ರೀತಿಯನ್ನ ತೋರಿಸುತ್ತದೆ. ಹೀಗಾಗಿಯೇ ಮನೆಗೆ ‘ಕ್ಲಿಕ್’ ಅಂತ ಹೆಸರಿಟ್ಟಿದ್ದಾರೆ. ಮನೆಯ ಕಿಟಕಿಗಳು ಕ್ಯಾಮರಾದ ಲೆನ್ಸ್ ರೀತಿಯಲ್ಲಿವೆ. ಕ್ಯಾಮರಾದಲ್ಲಿರುವ ವೀವ್​ಫೈಂಡರ್, ವೈಡ್ ಫಿಲ್ಮ್​ ಸ್ಟ್ರಿಪ್, ಫ್ಲ್ಯಾಶ್, ಮೆಮೋರಿ ಕಾರ್ಡ್ ಎಲ್ಲವೂ ಇದೆ. ಮನೆಯ ಒಳಾಂಗಣವು ಛಾಯಾಗ್ರಹಣಕ್ಕೆ ಸಂಬಂಧಿಸಿದ ಗ್ರಾಫಿಕ್ಸ್ ಹೊಂದಿದೆ.

1986ರಿಂದ ಛಾಯಾಗ್ರಹಣ ಮಾಡಿಕೊಂಡು ಬಂದಿರೋ ರವಿ ಅವರಿಗೆ ಕ್ಯಾಮರಾ ಅಂದ್ರೆ ಇನ್ನಿಲ್ಲದ ಪ್ರೀತಿ. ಹೀಗಾಗಿ ಕ್ಯಾಮರಾ ರೀತಿಯಲ್ಲೇ ಮನೆ ಕಟ್ಟಬೇಕು ಅನ್ನೋ ಕನಸು ಕಂಡಿದ್ರು. ಇದಕ್ಕೆ ಕೆಲ ಸಂಬಂಧಿಕರು ವಿರೋಧ ವ್ಯಕ್ತಪಡಿಸಿದ್ರು. ಆದ್ರೆ ರವಿ ದಂಪತಿ ಮಾತ್ರ ತಮ್ಮ ಕನಸನ್ನು ನನಸು ಮಾಡಿ ತೋರಿಸಿದ್ದಾರೆ. ಇದಕ್ಕಾಗಿ ಸಂಬಂಧಿಕರ ಬಳಿ ಸಾಲ ಮಾಡಿದ್ದಲ್ಲದೆ ತಮ್ಮ ಹಳೆಯ ಮನೆಯನ್ನ ಮಾರಾಟ ಮಾಡಬೇಕಾಯ್ತು ಅಂತಾರೆ ರವಿ.

ಇದನ್ನೂ ಓದಿ: ಜುಲೈ 15: ದೇಶದಲ್ಲಿ ಒಂದೇ ದಿನ 29,429 ಜನರಿಗೆ ಸೋಂಕು.. 582 ಜನ ಸಾವು

ಈ ಬಗ್ಗೆ ಮಾತನಾಡಿರೋ ಕೃಪಾ ಅವರು, ‘ಇದು ನಮ್ಮ ಕನಸಿನ ಮನೆ. ಈ ಮನೆಯಲ್ಲಿ ನಾವು ಬೇರೆಯೇ ಪ್ರಪಂಚದಲ್ಲಿದ್ದೀವಿ ಅನಿಸುತ್ತೆ. ಕ್ಯಾಮರಾ ಒಳಗೆ ಬದುಕುತ್ತಿದ್ದೀವಿ ಅನಿಸುತ್ತೆ. ನನಗೆ ನನ್ನ ಪತಿ ಮೇಲೆ ಹೆಮ್ಮೆ ಇದೆ’ ಅಂತ ಹೇಳಿದ್ದಾರೆ.

ಇವರ ಹಿರಿಯ ಮಗ ಕೆನಾನ್ ಮಾತನಾಡಿದ್ದು, ‘ಕೆನಾನ್ ಅನ್ನೋದು ನಿನ್ನ ನಿಜವಾದ ಹೆಸರಾ ಅಂತ ನನ್ನ ಸ್ನೇಹಿತರು ಕೇಳುತ್ತಿದ್ದರು. ನಾನು ಈಗ ಹೇಳ್ತೀನಿ.. ಹೌದು, ಫೋಟೋಗ್ರಫಿ ಅನ್ನೋದು ನನ್ನ ತಂದೆಯ ಪ್ಯಾಷನ್. ಹೀಗಾಗಿ ಅವರು ನನಗೆ ಈ ಹೆಸರು ಇಟ್ಟಿದ್ದಾರೆ’ ಎಂದಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಈ ವಿಭಿನ್ನ ಆಕಾರದ ಮನೆಯ ಫೋಟೋಗಳು ವೈರಲ್ ಆಗಿವೆ. ಅಲ್ಲದೆ ಫೋಟೋಗ್ರಫಿ ಮತ್ತು ಕ್ಯಾಮರಾ ಮೇಲಿನ ರವಿ ಅವರ ಪ್ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

-masthamagaa.com

Contact Us for Advertisement

Leave a Reply