ಮೋದಿ ಮನ್​ ಕಿ ಬಾತ್: ದಸರಾ, ಕೊರೋನಾ, ಯೋಧರು, ಪೆನ್ಸಿಲ್​, ಮಲ್ಲಗಂಬ ವಿಚಾರ ಪ್ರಸ್ತಾಪ

masthmagaa.com:

‘ಮನ್​ ಕಿ ಬಾತ್’ (ಮನದ ಮಾತು) ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಇವತ್ತು ದೇಶದ ಜನತೆಯನ್ನು ಉದ್ದೇಶಿಸಿ ಮತ್ತೊಮ್ಮೆ ಮಾತನಾಡಿದ್ರು. ಈ ವೇಳೆ ದಸರಾ, ಕೊರೋನಾ, ಯೋಧರು ಸೇರಿದಂತೆ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿದ್ರು.

– ಇವತ್ತು ನೀವೆಲ್ಲರೂ ತುಂಬಾ ತಾಳ್ಮೆ, ಜವಾಬ್ದಾರಿಯಿಂದ ಹಬ್ಬವನ್ನು ಆಚರಿಸುತ್ತಿದ್ದೀರಿ. ದಸರಾ ಹಬ್ಬ ಬಿಕ್ಕಟ್ಟಿನ ವಿರುದ್ಧ ತಾಳ್ಮೆಯ ಗೆಲುವಾಗಿದೆ. ಕೊರೋನಾ ವಿರುದ್ಧವೂ ನಮ್ಮ ಗೆಲುವು ನಿಶ್ಚಿತ.

– ಈ ಬಾರಿ ಹಬ್ಬಕ್ಕೆ ಸಂಬಂಧಿಸಿದಂತೆ ಏನಾದ್ರೂ ಖರೀದಿಸಲು ಮಾರ್ಕೆಟ್​ಗೆ ಹೋದ್ರೆ ‘ವೋಕಲ್ ಫಾರ್ ಲೋಕಲ್’ ಎಂಬ ನಿಮ್ಮ ಸಂಕಲ್ಪವನ್ನು ನೆನಪಿಸಿಕೊಳ್ಳಿ. ಸ್ಥಳೀಯ ಅಥವಾ ದೇಶೀಯ ವಸ್ತುಗಳನ್ನು ಖರೀದಿಸಲು ಮೊದಲ ಆದ್ಯತೆ ಕೊಡಿ.

– ಹಿಂದೆಲ್ಲಾ ದಸರಾ, ದುರ್ಗಾ ಪೂಜೆ ಅಂದ್ರೆ ಸಾಕಷ್ಟು ಜನ ಸೇರುತ್ತಿದ್ದರು. ಆದ್ರೆ ಈ ಬಾರಿ ಹಾಗಿಲ್ಲ. ಮುಂದಿನ ದಿನಗಳಲ್ಲಿ ಸಾಕಷ್ಟು ಹಬ್ಬ ಹರಿದಿನಗಳು ಬರ್ತಿವೆ. ಕೊರೋನಾದಂತಹ ಈ ಸಂದರ್ಭದಲ್ಲಿ ನಾವೆಲ್ಲರೂ ಜವಾಬ್ದಾರಿಯಿಂದ ಹಬ್ಬಗಳನ್ನು ಆಚರಿಸಬೇಕು.

– ಹಬ್ಬದ ಸಮಯದಲ್ಲಿ ಲಾಕ್​ಡೌನ್​ ಸಮಯವನ್ನು ನೆನಪಿಸಿಕೊಳ್ಳಿ. ಕಷ್ಟದ ಆ ಸಮಯದಲ್ಲಿ ಸ್ಯಾನಿಟೈಸ್​ ಕೆಲಸದವರು, ಕಸ ಗುಡಿಸುವವರು, ಗಾರ್ಡ್​ಗಳು ನಮ್ಮ ಜೊತೆಗಿದ್ದರು. ಅವರಿಲ್ಲದಿದ್ದರೆ ನಮ್ಮ ಜೀವನ ತುಂಬಾ ಕಷ್ಟವಾಗುತ್ತಿತ್ತು. ಹೀಗಾಗಿ ಅವರನ್ನೂ ಸೇರಿಸಿಕೊಂಡು ಹಬ್ಬ ಆಚರಿಸಿ.

– ಸಾಲು ಸಾಲು ಹಬ್ಬವಿರುವ ಈ ಸಂದರ್ಭದಲ್ಲೂ ತಮ್ಮ ಕುಟುಂಬದಿಂದ ದೂರವಿದ್ದು ಶತ್ರುಗಳಿಂದ ದೇಶವನ್ನು ಕಾಪಾಡುತ್ತಿರುವ ಯೋಧರ ಕಾರ್ಯವನ್ನು ಗೌರವಿಸಲೇಬೇಕು. ಅವರನ್ನ ನೆನೆದು ನಾವು ಹಬ್ಬ ಆಚರಿಸಬೇಕು. ಭಾರತ ಮಾತೆಯ ವೀರ ಪುತ್ರ-ಪುತ್ರಿಯರಿಗಾಗಿ ಮನೆಯಲ್ಲಿ ಒಂದು ದೀಪ ಹಚ್ಚಿ.

– ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಪ್ರದಾಯಿಕ ಕ್ರೀಡೆಗಳಲ್ಲಿ ಒಂದಾದ ಮಲ್ಲಗಂಬ ವಿವಿಧ ದೇಶಗಳಲ್ಲಿ ಜನಪ್ರಿಯತೆ ಗಳಿಸುತ್ತಿದೆ. ಚಿನ್ಮಯ್ ಮತ್ತು ಪ್ರಜ್ಞಾ ಪಟಂಕರ್ ಅಮೆರಿಕದಲ್ಲಿ ಮಲ್ಲಗಂಬದ ಬಗ್ಗೆ ತರಬೇತಿ ನೀಡುತ್ತಿದ್ದಾಗ ಈ ಕ್ರೀಡೆ ಇಷ್ಟೊಂದು ಪ್ರಸಿದ್ಧಿ ಪಡೆಯುತ್ತದೆ ಅನ್ನೋದು ಬಹುಶಃ ಅವರಿಗೂ ಗೊತ್ತಿರಲಿಲ್ಲ ಅನ್ಸುತ್ತೆ. ಇಂದು ಅಮೆರಿಕದಲ್ಲಿ ಹಲವು ಮಲ್ಲಗಂಬ ತರಬೇತಿ ಕೇಂದ್ರಗಳಿವೆ.

– ಅಕ್ಟೋಬರ್ 31ರಂದು ನಾವು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು ಕಳೆದುಕೊಂಡೆವು. ನಾನು ಅವರಿಗೆ ಗೌರವಯುತ ನಮನ ಸಲ್ಲಿಸುತ್ತೇನೆ.

– ಒಂದು ಸಮಯದಲ್ಲಿ ಪೆನ್ಸಿಲ್​ಗಾಗಿ ನಾವು ವಿದೇಶದಿಂದ ಮರಗಳನ್ನು ಆಮದು ಮಾಡಿಕೊಳ್ಳಬೇಕಿತ್ತು. ಆದ್ರೀಗ ದೇಶದ 90%ರಷ್ಟು ಪೆನ್ಸಿಲ್​ ಬೇಡಿಕೆಯನ್ನು ಕಾಶ್ಮೀರ ಕಣಿವೆಯ ಪುಲ್ವಾಮಾ ಈಡೇರಿಸುತ್ತಿದೆ. ಈ ಮೂಲಕ ಪೆನ್ಸಿಲ್ ತಯಾರಿಕಾ ಕ್ಷೇತ್ರದಲ್ಲಿ ಪುಲ್ವಾಮಾ ಭಾರತವನ್ನು ಸ್ವಾವಲಂಬಿ ಮಾಡಿದೆ.

-masthmagaa.com

Contact Us for Advertisement

Leave a Reply