masthmagaa.com:

ಟೀಂ ಇಂಡಿಯಾದ ಓಪನರ್ ಮತ್ತು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಸರಣಿಗೆ ಲಭ್ಯವಾಗಲಿದ್ದಾರೆ ಅಂತ ಮೂಲಗಳು ತಿಳಿಸಿವೆ. ಆದ್ರೆ ಅವರು ನವೆಂಬರ್​ 12ರಂದು ತಂಡದ ಇತರ ಸದಸ್ಯರ ಜೊತೆ ಆಸ್ಟ್ರೇಲಿಯಾಗೆ ಹೋಗೋದಿಲ್ಲ. ಬದಲಾಗಿ ಇನ್ನೊಂದಷ್ಟು ದಿನ ರೆಸ್ಟ್ ಪಡೆದು ಟೆಸ್ಟ್ ಸರಣಿಗೆ ಲಭ್ಯವಾಗುವಂತೆ ಹೋಗಲಿದ್ದಾರೆ. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರೋಹಿತ್ ಶರ್ಮಾರನ್ನು ವೈಟಿಂಗ್ ಲಿಸ್ಟ್​ನಲ್ಲಿ ಇಡಲಾಗಿತ್ತು. ಇದೀಗ ಅವರು ಲಭ್ಯವಾಗಲಿದ್ದಾರೆ ಅಂತ ಮೂಲಗಳು ತಿಳಿಸಿವೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನವೆಂಬರ್ 27, 29 ಮತ್ತು ಡಿಸೆಂಬರ್ 2ರಂದು ಒಟ್ಟು ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಬಳಿಕ ಡಿಸೆಂಬರ್ 4, 6 ಮತ್ತು 8 ರಂದು ಮೂರು ಟಿ-20 ಪಂದ್ಯಗಳು ನಡೆಯಲಿವೆ. ನಂತರ ಡಿಸೆಂಬರ್ 17ರಿಂದ 21ರವರೆಗೆ ಮೊದಲ ಟೆಸ್ಟ್, ಡಿಸೆಂಬರ್ 26ರಿಂದ 30ರವರೆಗೆ ಎರಡನೇ ಟೆಸ್ಟ್, ಜನವರಿ 7ರಿಂದ 11ರವರೆಗೆ ಮೂರನೇ ಟೆಸ್ಟ್ ಹಾಗೂ ಜನವರಿ 15ರಿಂದ 19ರವರೆಗೆ ನಾಲ್ಕನೇ ಟೆಸ್ಟ್ ನಡೆಯಲಿದೆ. ಈ ನಾಲ್ಕೂ ಟೆಸ್ಟ್​ ಪಂದ್ಯಗಳು ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ನ ಭಾಗವಾಗಿವೆ. ಇದರ ಫೈನಲ್ ಪಂದ್ಯ 2021ರ ಜೂನ್​ನಲ್ಲಿ ಲಾರ್ಡ್ಸ್​ ಮೈದಾನದಲ್ಲಿ ನಡೆಯುವ ಸಾಧ್ಯತೆ ಇದೆ.

ಅಂದ್ಹಾಗೆ ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ನ ಪಾಯಿಂಟ್ಸ್​ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಎರಡೂ ತಂಡಗಳ ನಡುವೆ ಜಿದ್ದಾಜಿದ್ದಿನ ಫೈಟ್ ಏರ್ಪಡುವ ಸಾಧ್ಯತೆ ಇದೆ. ಜೊತೆಗೆ ರೋಹಿತ್ ಶರ್ಮಾ ಕೂಡ ತಂಡಕ್ಕೆ ಲಭ್ಯವಾಗುವುದರಿಂದ ಟೆಸ್ಟ್ ಸರಣಿಯ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಸದ್ಯ ರೋಹಿತ್ ಶರ್ಮಾ ಮಂಗಳವಾರ ನಡೆಯಲಿರುವ ಐಪಿಎಲ್​ ಫೈನಲ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply