masthmagaa.com:

ಅನರ್ಹ ಶಾಸಕ ಮುನಿರತ್ನ ಅವರ ಶಾಸಕತ್ವ ರದ್ದು ಮಾಡಿ, ಆರ್​.ಆರ್​. ನಗರ ಉಪಚುನಾವಣೆಯನ್ನ ಮುಂದೂಡುವಂತೆ ಬಿಜೆಪಿಯ ತುಳಸಿ ಮುನಿರಾಜುಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾ ಮಾಡಿದೆ. ಈ ಮೂಲಕ ಮುನಿರತ್ನಗೆ ಬಿಗ್​ ರಿಲೀಫ್ ಸಿಕ್ಕಿದೆ. ಜೊತೆಗೆ ಮುಂಬರುವ ರಾಜರಾಜೇಶ್ವರಿ ನಗರ ಉಪಚುನಾವಣೆಗೆ ಸ್ಪರ್ಧಿಸಲು ಅವರ ದಾರಿ ಕೂಡ ಸುಗಮವಾಗಿದೆ.

ಈ ಹಿಂದೆ ತುಳಸಿ ಮುಜಿರಾಜು ಸಲ್ಲಿಸಿದ್ದ ಅರ್ಜಿಯನ್ನ ಕಲಬುರ್ಗಿ ಹೈಕೋರ್ಟ್ ಪೀಠ ವಜಾಗೊಳಿಸಿತ್ತು. ಬಳಿಕ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಆದ್ರೀಗ ಸುಪ್ರೀಂಕೋರ್ಟ್​​ ಅರ್ಜಿಯನ್ನು ವಜಾ ಮಾಡಿದೆ. ಅಂದ್ಹಾಗೆ 2018ರ ವಿಧಾನಸಭೆ ಚುನಾವಣೆ ವೇಳೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಸಾವಿರಾರು ನಕಲಿ ವೋಟರ್ ಐಡಿ ಕಾರ್ಡ್​ಗಳು ಪತ್ತೆಯಾಗಿದ್ದವು. ಆದರೂ ಚುನಾವಣೆ ನಡೆದು ಕಾಂಗ್ರೆಸ್​ನ ಮುನಿರತ್ನ ಗೆಲುವು ಸಾಧಿಸಿದ್ದರು. ಬಳಿಕ ಬಿಜೆಪಿಯ ತುಳಸಿ ಮುನಿರಾಜು ಕೋರ್ಟ್​ ಮೆಟ್ಟಿಲೇರಿದ್ರು. ಇದರ ನಡುವೆ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುನಿರತ್ನ ಬಿಜೆಪಿ ಸೇರಿಕೊಂಡರು. ಆದರೂ ಮುನಿರತ್ನ ವಿರುದ್ಧದ ಕಾನೂನು ಹೋರಾಟವನ್ನ ಮುನಿರಾಜು ನಿಲ್ಲಿಸಿರಲಿಲ್ಲ.

ನವೆಂಬರ್​ 3ರಂದು ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ತುಮಕೂರಿನ ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಆರ್​.ಆರ್. ನಗರದಲ್ಲಿ ಬಿಜೆಪಿ ಟಿಕೆಟ್ ಮುನಿರತ್ನ ಅವರಿಗೆ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಒಂದ್ವೇಳೆ ಮುನಿರತ್ನಗೆ ಟಿಕೆಟ್​ ಸಿಕ್ಕರೆ ಅವರ ಪರವಾಗಿ ಬಿಜೆಪಿಯ ತುಳಸಿ ಮುನಿರಾಜುಗೌಡ ಪ್ರಚಾರ ಮಾಡುತ್ತಾರಾ ಅನ್ನೋ ಪ್ರಶ್ನೆ ಮೂಡಿದೆ.

-masthmagaa.com

Contact Us for Advertisement

Leave a Reply