masthmagaa.com:

ಯಾವುದೇ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಲು ಈ ಹಿಂದೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು (General Consent) ಮಹಾರಾಷ್ಟ್ರ ಸರ್ಕಾರ ಹಿಂದಕ್ಕೆ ಪಡೆದಿದೆ. ಇದರ ಪರಿಣಾಮ ಇನ್ಮುಂದೆ ಮಹಾರಾಷ್ಟ್ರದ ಕೆಲವೊಂದು ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸಬೇಕು ಅಂದ್ರೆ ರಾಜ್ಯ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗಿದೆ. ಆದ್ರೆ ಆರ್ಥಿಕ ಅಪರಾಧದಂತಹ ಪಕರಣ ಮತ್ತು ಕೋರ್ಟ್​ ಸಿಬಿಐಗೆ ವಹಿಸಿರುವ ಪ್ರಕರಣಗಳಿಗೆ ಇದು ಅನ್ವಯವಾಗುವುದಿಲ್ಲ. ಇಂತಹ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರದ ಅನುಮತಿ ಪಡೆಯದೇ ನೇರವಾಗಿ ತನಿಖೆಗೆ ಇಳಿಯಬಹುದಾಗಿದೆ. ಟಿಆರ್​ಪಿ ತಿರುಚಿದ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ದಾಖಲಾದ ದೂರಿಗೆ ಸಂಬಂಧಿಸಿದಂತೆ ಸಿಬಿಐ ಪ್ರಕರಣ ದಾಖಲಿಸಿಕೊಂಡ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಈ ನಿರ್ಧಾರ ಕೈಗೊಂಡಿರೋದು ಗಮನಾರ್ಹ. ರಿಪಬ್ಲಿಕ್ ಟಿವಿ ಸೇರಿದಂತೆ ಒಟ್ಟು ಮೂರು ಟಿವಿ ಚಾನಲ್​ಗಳ ವಿರುದ್ಧ ಟಿಆರ್​ಪಿ ತಿರುಚಿದ ಆರೋಪವಿದೆ.

ಈ ಬಗ್ಗೆ ಮಾತನಾಡಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್​ಮುಖ್, ‘ಸಿಬಿಐ ಅತ್ಯಂತ ವೃತ್ತಿಪರ ರೀತಿಯಲ್ಲಿ ತನಿಖೆ ನಡೆಸುತ್ತದೆ. ಆದರೆ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿಬಿಐ ಮೇಲೆ ಒತ್ತಡ ಹೇರುವುದು ಸರಿಯಲ್ಲ. ಹೀಗಾಗಿ ನಾವು ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ’ ಅಂತ ಹೇಳಿದ್ದಾರೆ.

ಈ ಹಿಂದೆ ಬಿಜೆಪಿಯೇತರ ಸರ್ಕಾರವಿರುವ ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಛತ್ತೀಸ್​ಗಢ, ಇತ್ತೀಚೆಗೆ ರಾಜಸ್ಥಾನ ಕೂಡ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿತ್ತು. ಇದೀಗ ಮಹಾರಾಷ್ಟ್ರ ಕೂಡ ಅದೇ ದಾರಿ ಹಿಡಿದಿದೆ. 2019ರಲ್ಲಿ ಶಾರದಾ ಚಿಟ್​ ಫಂಡ್ ಕೇಸ್​ನ ತನಿಖೆ ನಡೆಸಲು ಸಿಬಿಐ ಅಧಿಕಾರಿಗಳು ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾಗ ಅವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸಿಬಿಐ ಕಾರ್ಯವ್ಯಾಪ್ತಿ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನ ಮೂಡಿಸಿತ್ತು. ಬಳಿಕ ಪಶ್ಚಿಮ ಬಂಗಾಳ ಸರ್ಕಾರ 2019ರ ನವೆಂಬರ್​ನಲ್ಲಿ ಸಿಬಿಐಗೆ ನೀಡಿದ್ದ ಸಾಮಾನ್ಯ ಒಪ್ಪಿಗೆಯನ್ನು ಹಿಂಪಡೆದಿತ್ತು. ಆದ್ರೆ ಶಾರದಾ ಚಿಟ್​ ಫಂಡ್ ಕೇಸ್​ ಆರ್ಥಿಕ ಅಪರಾಧಕ್ಕೆ ಸಂಬಂಧಪಟ್ಟ ಪ್ರಕರಣ ಮತ್ತು ಸ್ವತಃ ಸುಪ್ರೀಂಕೋರ್ಟ್​ ಇದರ ತನಿಖೆ ನಡೆಸಲು ಸಿಬಿಐಗೆ ಆದೇಶಿಸಿತ್ತು. ಹೀಗಾಗಿ ರಾಜ್ಯ ಸರ್ಕಾರದ ಒಪ್ಪಿಗೆ ಬೇಕಿರಲಿಲ್ಲ

-masthmagaa.com

Contact Us for Advertisement

Leave a Reply