ಗುಜರಾತ್ ಗಲಭೆ..! ಸೋನಿಯಾ ಗಾಂಧಿ ಮೇಲೆ ಬಿಜೆಪಿ ಈ ಪರಿ ಸಿಟ್ಟಾಗಿದ್ದೇಕೆ?

masthmagaa.com:

2002ರಲ್ಲಿ ನಡೆದ ಗುಜರಾತ್‌ ಗಲಭೆ ಪ್ರಕರಣ ಈಗ ಎರಡೂ ರಾಷ್ಟ್ರೀಯ ಪಕ್ಷಗಳ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ. ಕೇಸ್‌ಗೆ ಸಂಬಂಧಪಟ್ಟಹಾಗೆ ಮೋದಿಯವರನ್ನ ದೋಷಿ ಮಾಡೋ ಷಡ್ಯಂತ್ರದ ಹಿಂದೆ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಯವರ ಕೈವಾಡ ಇದೆ ಅಂತ ಬಿಜೆಪಿ ಗಂಭೀರ ಆರೋಪ ಮಾಡಿದೆ. ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ಬಂಧಿತ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರಿಗೆ ಜಾಮೀನು ನೀಡದಂತೆ ಗುಜರಾತ್ ಪೊಲೀಸ್ ಕೋರ್ಟ್​ಗೆ ಮನವಿ ಮಾಡಿತ್ತು. ಅಲ್ದೇ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಅಹ್ಮದ್ ಪಟೇಲ್ ಗಲಭೆಯ ಮೂಲಕ ದೊಡ್ಡ ಪಿತೂರಿ ನಡೆಸಿದ್ರು. ಅದರ ಪ್ರಮುಖ ಭಾಗವೇ ಈ ತೀಸ್ತಾ ಅಂತ SIT ಅಂದ್ರೆ ವಿಶೇಷ ತನಿಖಾ ದಳ ಹೇಳಿದೆ.
ಇದರ ಬೆನ್ನಲ್ಲೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಅವರು ಮಾತನಾಡಿ, ದಿವಂಗತ ಅಹ್ಮದ್ ಪಟೇಲ್ ಕಾಂಗ್ರೆಸ್​ನ ಪ್ರಮುಖ ನಾಯಕ ಮತ್ತು ಶ್ರೀಮತಿ ಸೋನಿಯಾ ಗಾಂಧಿಯವರ ರಾಜಕೀಯ ಸಲಹೆಗಾರರಾಗಿದ್ದವ್ರು. ಅವರು ಅವತ್ತಿನ ಮೋದಿ ಸರ್ಕಾರವನ್ನ ಅಸ್ಥಿರಗೊಳಿಸೋಕೆ ಮತ್ತು ಮೋದಿಯನ್ನ ರಾಜಕೀಯವಾಗಿ ಮುಗಿಸೋಕೆ ಪಿತ್ತೂರಿ ನಡೆಸಿದ್ರು.. ಈ ಬಗ್ಗೆ ಸೋನಿಯಾ ಗಾಂಧಿ ಪತ್ರಿಕಾಗೋಷ್ಠಿ ನಡೆಸಬೇಕು ಅಂತ ಆಗ್ರಹಿಸಿದ್ದಾರೆ. ಇನ್ನು ಈ ಬಗ್ಗೆ ಕಾಂಗ್ರೆಸ್‌ ಕೂಡ ತಿರುಗಿಬಿದ್ದಿದ್ದು ಅಹ್ಮದ್ ಪಟೇಲ್ ವಿರುದ್ಧ ಮಾಡ್ತಿರೋ ಈ ಸುಳ್ಳು ಆರೋಪ ಕೋಮು ಹತ್ಯಾಕಾಂಡದ ಬಗ್ಗೆ ತಮ್ಮನ್ನು ರಕ್ಷಿಸಿಕೊಳ್ಳಲು ಮಾಡ್ತಿರೋ ತಂತ್ರ..ಸರ್ಕಾರ ಎಸ್‌ಐಟಿಯನ್ನು ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ತಿದೆ ಅಂತ ಕಿಡಿಕಾರಿದೆ. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರೋ ಬಿಜೆಪಿ ʻಕಾಂಗ್ರೆಸ್ ತನ್ನ ಮೇಲಿನ ಆರೋಪಗಳಿಂದ ತಪ್ಪಿಸಿಕೊಳ್ಳೊಕೆ ಈ ರೀತಿ ಹೇಳ್ತಿದೆ. ತಮ್ಮ ಮೇಲೆ ಯಾವುದೇ ಕೇಸ್ ಬಂದ್ರೂ ಆರೋಗ್ಯದ ನೆಪ ಹೇಳಿ ಸೋನಿಯಾ ತಪ್ಪಿಸಿಕೊಳ್ಳೋಕೆ ಪ್ರಯತ್ನ ಮಾಡ್ತಿದ್ದಾರೆ. ಪ್ರಧಾನಿ ಮೋದಿ ವಿರುದ್ಧ ಸೋನಿಯಾ ಏಕೆ ಪಿತೂರಿ ನಡೆಸ್ತಿದ್ದಾರೆ ಅಂತ ಪತ್ರಿಕಾಗೋಷ್ಠಿ ನಡೆಸಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಬೇಕು ಅಂತ ಹೇಳಿದೆ. ಜೊತೆಗೆ ಪ್ರಧಾನಿ ಮೋದಿಯನ್ನ ರಾಜಕೀಯವಾಗಿ ಮೂಲೆಗುಂಪು ಮಾಡಿ ಅವರ ಪುತ್ರ ರಾಹುಲ್ ಗಾಂಧಿಯನ್ನು ಹೆಚ್ಚು ಪ್ರಚಾರ ಮಾಡೋಕೆ, ಬಿಜೆಪಿಯನ್ನು ಸೋಲಿಸೋಕೆ ಈ ರೀತಿ ಮಾಡಿದ್ದಾರೆ ಅಂತ ಆರೋಪಿಸಿದೆ. ಅಲ್ದೇ ಎಸ್‌ಐಟಿ ಅಫಿಡವಿಟ್ ನಲ್ಲಿ ಸೆಟಲ್ವಾಡ್ ಅವರಿಗೆ ಪಟೇಲ್ ವೈಯಕ್ತಿಕವಾಗಿ 30 ಲಕ್ಷ ರೂ ನೀಡಿದ್ದಾರೆ ಅಂತ ಇದೆ. ಇದನ್ನ ಪಟೇಲ್‌ ಕೊಟ್ಟಿದ್ದರೋ ಅಥವಾ ಸೋನಿಯಾ ಗಾಂಧಿ ಕೊಟ್ಟಿದ್ದರೋ. ಗುಜರಾತ್ ಗಲಭೆ ಪ್ರಕರಣಕ್ಕೆ ಸುಳ್ಳು ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಸೆಟಲ್ವಾಡ್ ಗೆ ಕಾಂಗ್ರೆಸ್‌ ಸರ್ಕಾರ ಪದ್ಮಶ್ರೀ ಕೊಡ್ತು. ಪಟೇಲ್ ಎಂಬುದು ಕೇವಲ ಹೆಸರು. ಈ ಪಿತೂರಿಯ ಹಿಂದಿನ ಪ್ರೇರಕ ಶಕ್ತಿ ಸೋನಿಯಾ ಗಾಂಧಿ ಅಂತ ಕಿಡಿಕಾರಿದೆ.

-masthmagaa.com

Contact Us for Advertisement

Leave a Reply