masthmagaa.com:

ಜಗತ್ತಿನಲ್ಲಿ ಕೊರೋನಾ ಹಾವಳಿ ಹೆಚ್ಚಾಗುತ್ತಿದ್ದಂತೆಯೇ ಅದಕ್ಕೆ ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಕೂಡ ಜೋರಾಗಿ ನಡೀತಿವೆ. ಆದ್ರೆ ಸೋಂಕು ಕಾಣಿಸಿಕೊಂಡು 7 ತಿಂಗಳಾದ್ರೂ ಇದುವರೆಗೆ ಅಧಿಕೃತ ಲಸಿಕೆ ಅನ್ನೋದು ಸಿಕ್ಕಿಲ್ಲ. ಎಲ್ಲವೂ ಪ್ರಯೋಗ ಹಂತದಲ್ಲಿವೆ. ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವ್ಯಾಕ್ಸಿನ್’ ಲಸಿಕೆ ಇನ್ನೂ ಮೊದಲ ಹಂತದ ಪ್ರಯೋಗದಲ್ಲಿದೆ.

ಇಡೀ ವಿಶ್ವದಲ್ಲಿ ಸದ್ಯ 3 ಲಸಿಕೆಗಳು ಮಾತ್ರ ಮೂರನೇ ಹಾಗೂ ಕೊನೆಯ ಹಂತದ ಮಾನವ ಪ್ರಯೋಗ ನಡೆಸುತ್ತಿವೆ. ಅದ್ರಲ್ಲಿ ಮೊದಲನೇದು, ಅಸ್ಟ್ರಝೆನೆಕಾ-ಆಕ್ಸ್​ಫರ್ಡ್​ ಯುನಿವರ್ಸಿಟಿ ಅಭಿವೃದ್ಧಿಪಡಿಸಿರುವ ಲಸಿಕೆ.. ಎರಡನೇದು, ಚೀನಾದ ಸಿನೋಫಾರ್ಮ್​ ಅಭಿವೃದ್ಧಿಪಡಿಸಿರುವ ಲಸಿಕೆ.. ಮೂರನೇದು, ಚೀನಾದ ಸಿನೋವ್ಯಾಕ್ ಅಭಿವೃದ್ಧಿಪಡಿಸಿರುವ ಲಸಿಕೆ.

ಆದ್ರೀಗ ರಷ್ಯಾದಲ್ಲಿ ಕೊರೋನಾ ವೈರಸ್​ಗೆ ಲಸಿಕೆ ಕಂಡು ಹಿಡಿಯಲಾಗಿದೆ, ಕ್ಲಿನಿಕಲ್ ಪ್ರಯೋಗ ಮುಗಿಸಿದ ಮೊದಲ ಕೊರೋನಾ ಲಸಿಕೆ ಅದು ಅಂತ ವರದಿಯಾಗಿದೆ. ಅಂದ್ಹಾಗೆ ಈ ಬಗ್ಗೆ ವರದಿ ಮಾಡಿರೋದು ರಷ್ಯಾದ ಸ್ಪುಟ್ನಿಕ್​ ಸುದ್ದಿ ಸಂಸ್ಥೆ. ಇದು ರಷ್ಯಾ ಸರ್ಕಾರದ ನಿಯಂತ್ರಣದಲ್ಲಿರುವ ಮಾಧ್ಯಮ ಸಂಸ್ಥೆ ಅನ್ನೋದು ಗಮನಾರ್ಹ.

ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 500 ಸೋಂಕಿತರು ಸಾವು.. 28,000+ ಜನರಿಗೆ ಕೊರೋನಾ

ಈ ಲಸಿಕೆಯನ್ನು ರಷ್ಯಾದ ಗಮಲೇ ಇನ್​ಸ್ಟಿಟ್ಯೂಟ್​ ಆಫ್ ಎಪಿಡೊಮಿಯಾಲಜಿ ಅಂಡ್ ಮೈಕ್ರೋಬಯಾಲಜಿ (Gamalei Institute of Epidemiology and Microbiology) ಅಭಿವೃದ್ಧಿಪಡಿಸಿದೆ. ಈ ಲಸಿಕೆಯ ಮಾನವ ಪ್ರಯೋಗವನ್ನು ರಷ್ಯಾದ ಸೆಚೆನೋವ್ ಫಸ್ಟ್ ಮಾಸ್ಕೊ ಸ್ಟೇಟ್​ ಮೆಡಿಕಲ್ ಯುನಿವರ್ಸಿಟಿ ಮುಗಿಸಿದೆ ಅಂತ ಸ್ಪುಟ್ನಿಕ್ ಸುದ್ದಿ ಸಂಸ್ಥೆಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಕೊರೋನಾ ವೈರಸ್ ವಿರುದ್ಧ ವಿಶ್ವದ ಮೊದಲ ಲಸಿಕೆಯ ಕ್ಲಿನಿಕಲ್​ ಪ್ರಯೋಗವನ್ನು ಸೆಚೆನೋವ್ ಯುನಿವರ್ಸಿಟಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜೂನ್​ 18ರಂದು ಲಸಿಕೆಯ ಮಾನವ ಪ್ರಯೋಗ ಆರಂಭವಾಗಿತ್ತು. ಲಸಿಕೆ ಪಡೆದ ಮೊದಲ ಬ್ಯಾಚ್​ನ ಸ್ವಯಂಸೇವಕರು ಜುಲೈ 15ರಂದು ಡಿಸ್ಚಾರ್ಜ್ ಆಗಲಿದ್ದಾರೆ. ಎರಡನೇ ಬ್ಯಾಚ್​ನ ಸ್ವಯಂಸೇವಕರು  ಜುಲೈ 20ರಂದು ಬಿಡುಗಡೆಯಾಗಲಿದ್ದಾರೆ’ ಅಂತ ಅವರು ಹೇಳಿದ್ದಾರೆ.

ಮತ್ತೊಬ್ಬ ಅಧಿಕಾರಿಯ ಪ್ರಕಾರ, ‘ಲಸಿಕೆ ಪ್ರಯೋಗದ ಪ್ರಮುಖ ಉದ್ದೇಶವೇ ಅದು ಸುರಕ್ಷಿತವೋ, ಇಲ್ಲವೋ ಅನ್ನೋದನ್ನು ತಿಳಿದುಕೊಳ್ಳುವುದು. ಗಮಲೇ ಇನ್​ಸ್ಟಿಟ್ಯೂಟ್​ ಆಫ್ ಎಪಿಡೊಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಲಸಿಕೆ ಸುರಕ್ಷಿತ ಅನ್ನೋದು ದೃಢಪಟ್ಟಿದೆ. ಈ ಲಸಿಕೆಯು ಮಾರುಕಟ್ಟೆಯಲ್ಲಿರುವ ಇತರ ಲಸಿಕೆಗಳಂತೆ ಸುರಕ್ಷಿತವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಒಂದೇ ದಿನ 71 ಸೋಂಕಿತರು ಸಾವು.. 2,627 ಜನರಿಗೆ ಕೊರೋನಾ..!

ಇನ್ನು ಲಸಿಕೆಯ ಪ್ರಯೋಗ ಇನ್ನೂ ನಡೀತಾ ಇದೆ ಅಂತಾನೂ ತಜ್ಞರು ಹೇಳಿದ್ದಾರೆ. ಅಲ್ಲದೆ ಡಿಸ್ಚಾರ್ಜ್​ ಆದವರ ಮೇಲೆ ನಿಗಾ ಇಡಲಾಗುತ್ತದೆ ಎಂದಿದ್ದಾರೆ. ಅಂದ್ರೆ ಲಸಿಕೆಯ ಮಾನವ ಪ್ರಯೋಗ ಸಂಪೂರ್ಣವಾಗಿ ಮುಗಿದಿಲ್ವಾ..? ಒಂದುವೇಳೆ ಪ್ರಯೋಗ ಪೂರ್ಣಗೊಂಡಿದ್ರೆ ಡಿಸ್ಚಾರ್ಜ್ ಆದ ಸ್ವಯಂಸೇವಕರ ಮೇಲೆ ನಿಗಾ ಇಡುವ ಅವಶ್ಯಕತೆ ಏನು..? ಅನ್ನೋ ಪ್ರಶ್ನೆ ಮೂಡುತ್ತೆ.

ಅಲ್ಲದೆ ಮೊದಲ ಹಂತದಲ್ಲಿ 18 ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗಿಸಿದ್ರೆ, ಎರಡನೇ ಹಂತದಲ್ಲಿ 20 ಸ್ವಯಂಸೇವಕರ ಮೇಲೆ ಪ್ರಯೋಗಿಸಲಾಗಿದೆ ಎನ್ನಲಾಗಿದೆ. ಆದ್ರೆ ಮೂರನೇ ಹಂತದ ಮಾನವ ಪ್ರಯೋಗದ ಬಗ್ಗೆ ಎಲ್ಲೂ ಮಾಹಿತಿ ಇಲ್ಲ. ಮೂರನೇ ಹಂತವು ಕೊನೆಯ ಹಂತವಾಗಿದೆ. ಈ ಹಂತದಲ್ಲಿ ಸಾವಿರಾರು ಸ್ವಯಂಸೇವಕರ ಮೇಲೆ ಲಸಿಕೆ ಪ್ರಯೋಗಿಸಬೇಕು. ಆದ್ರೆ ರಷ್ಯಾ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಲಸಿಕೆ ಮೂರನೇ ಹಂತದ ಪ್ರಯೋಗ ಮುಗಿಸಿದೆಯೋ ಅಥವಾ ಇಲ್ಲವೋ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ.

-masthmagaa.com

Contact Us for Advertisement

Leave a Reply