ಬೆಳಗಾವಿಗೆ ಮಹಾರಾಷ್ಟ್ರ ಸಚಿವರ ಭೇಟಿ ಸಾಧ್ಯತೆ! ಕನ್ನಡ ಪರ ಸಂಘಟನೆಗಳಿಂದ ತೀವ್ರ ಆಕ್ರೋಶ!

masthmagaa.com:

ಗಡಿ ವಿಚಾರವಾಗಿ ಮಹಾರಾಷ್ಟ್ರ ಕ್ಯಾತೆ ಮುಂದುವರೆದಿದೆ. ವಿವಾದದ ಮಧ್ಯೆ ಮಹಾರಾಷ್ಟ್ರ ಸಚಿವರುಗಳಾದ ಚಂದ್ರಕಾಂತ್ ಪಾಟೀಲ್ ಮತ್ತು ಶಂಭುರಾಜ್ ದೇಸಾಯಿ ಇದೇ ಡಿಸೆಂಬರ್ 6ರಂದು ಬೆಳಗಾವಿಗೆ ಭೇಟಿ ನೀಡೋಕೆ ಮುಂದಾಗಿದ್ದಾರೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಈ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬೆಳಗಾವಿಗೆ ಅವರು ಬರೋದು ಬೇಡ. ಈಗಾಗಲೇ ನಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಸಚಿವರು ಬೆಳಗಾವಿಗೆ ಬರುವುದು ಸೂಕ್ತ ಅಲ್ಲ ಅಂತ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗೆ ಫ್ಯಾಕ್ಸ್ ಮೂಲಕ ಸಂದೇಶ ನೀಡಿದ್ದಾರೆ. ಹಿಂದೆ ಹಲವಾರು ಬಾರಿ ಈ ರೀತಿ ಪ್ರಯತ್ನ ಮಾಡಿದಾಗ ಕ್ರಮ ತೆಗೆದುಕೊಂಡಿದ್ದೇವೆ. ಹಿಂದೆ ಕರ್ನಾಟಕ ಸರ್ಕಾರ ಏನು ಕ್ರಮ ಕೈಗೊಂಡಿತ್ತೋ ಈಗಲೂ ಅದೇ ಕ್ರಮ ಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ. ಈ ಮೂಲಕ ಪ್ರತಿಬಂಧಕಾಜ್ಞೆ ಹೊರಡಿಸುವ ಸುಳಿವು ನೀಡಿದ್ದಾರೆ. ಇನ್ನು ಕನ್ನಡ ಬಾವುಟ ಹಿಡಿದಿದ್ದ ಯುವಕನ ಮೇಲೆ ಹಲ್ಲೆಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ಮೂವರು ಅಪ್ರಾಪ್ತರು ಅಂತ ಹೇಳಲಾಗಿದೆ. ಇತ್ತ ಗಡಿ ಭಾಗದ ಕನ್ನಡ ಶಾಲೆಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗುತ್ತೆ ಅಂತ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಜೊತೆಗೆ ಗೋವಾ, ಕಾಸರಗೋಡು, ಸೊಲ್ಲಾಪುರದಲ್ಲಿ ತಲಾ 10 ಕೋಟಿ ರೂ. ವೆಚ್ಚದಲ್ಲಿ ಕನ್ನಡ ಭವನಗಳ ನಿರ್ಮಾಣ ಮಾಡೋಕೆ ಈಗಾಗಲೇ ಮಂಜೂರಾತಿ ನೀಡಲಾಗಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply