ಹತ್ರಾಸ್ ಗ್ಯಾಂಗ್​ ರೇಪ್​ ಪ್ರಕರಣದ ತನಿಖೆಗೆ ಇಳಿದ ಸಿಬಿಐ..!

masthmagaa.com:

ದೇಶಾದ್ಯಂತ ಭಾರಿ ಸದ್ದು ಮಾಡಿದ್ದ ಹತ್ರಾಸ್​ ಗ್ಯಾಂಗ್​ ರೇಪ್ ಮತ್ತು ಕೊಲೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (CBI) ಕೈಗೆತ್ತಿಕೊಂಡಿದೆ. ಪ್ರಕರಣವನ್ನು ಅಧಿಕೃತವಾಗಿ ಸಿಬಿಐ ಕೈಗೆತ್ತಿಕೊಂಡ ಬಗ್ಗೆ ಕೇಂದ್ರ ಸರ್ಕಾರ ಶನಿವಾರ ಪ್ರಕಟಣೆ ಹೊರಡಿಸಿದೆ. ಇದರ ಬೆನ್ನಲ್ಲೇ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ. ಶೀಘ್ರದಲ್ಲೇ ಸಿಬಿಐ ಅಧಿಕಾರಿಗಳು ವಿಧಿ ವಿಜ್ಞಾನ ತಂಡದ ಜೊತೆಗೆ ಅಪರಾಧ ನಡೆದ ಸ್ಥಳಕ್ಕೆ ಅಂದ್ರೆ ಉತ್ತರಪ್ರದೇಶದ ಹತ್ರಾಸ್​ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.

ಹತ್ರಾಸ್​ ಪ್ರಕರಣದ ಬಗ್ಗೆ ಭಾರಿ ಆಕ್ರೋಶ ಕೇಳಿ ಬಂದ ಬೆನ್ನಲ್ಲೇ ಕಳೆದ ವಾರ ಯುಪಿ ಸಿಎಂ ಯೋಗಿ ಆದಿತ್ಯನಾಥ್ ತನಿಖೆಯನ್ನು ಸಿಬಿಐ ಮಾಡಲಿ ಅಂತ ಶಿಫಾರಸು ಮಾಡಿದ್ದರು. ಇದೀಗ ಸಿಬಿಐ ಅಧಿಕೃತವಾಗಿ ಪ್ರಕರಣವನ್ನು ಕೈಗೆತ್ತಿಕೊಂಡು, ಕೇಸ್ ದಾಖಲಿಸಿಕೊಂಡಿದೆ.

ಅಂದ್ಹಾಗೆ ಸೆಪ್ಟೆಂಬರ್ 14ರಂದು 19 ವರ್ಷದ ಯುವತಿ ಮೇಲೆ ಗ್ರಾಮದ ನಾಲ್ವರು ಯುವಕರು ಅತ್ಯಾಚಾರವೆಸಗಿ, ಚಿತ್ರಹಿಂಸೆ ನೀಡಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಎರಡು ವಾರಗಳ ನಂತರ ದೆಹಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಈ ಪ್ರಕರಣವನ್ನ 2012ರ ದೆಹಲಿಯಲ್ಲಿ ನಡೆದಿದ್ದ ‘ನಿರ್ಭಯಾ’ ಪ್ರಕರಣಕ್ಕೆ ಹೋಲಿಸಲಾಗಿತ್ತು ಮತ್ತು ಅತ್ಯಾಚಾರಿಗಳಿಗೆ ಕಠಿಣಾತಿಕಠಿಣ ಶಿಕ್ಷೆಯಾಗಬೇಕು ಅಂತ ಪ್ರತಿಭಟನೆಗಳು ನಡೆದಿದ್ದವು.

ಪ್ರಕರಣದಲ್ಲಿ ಯುಪಿ ಪೊಲೀಸರು ತಡವಾಗಿ ಪ್ರತಿಕ್ರಿಯಿಸಿದ್ದಾರೆ ಅನ್ನೋ ಆರೋಪ ಮಾಡಲಾಗಿತ್ತು. ಆದ್ರೆ ಪೊಲೀಸರು ಮಾತ್ರ ಯುವತಿಯ ಮೇಲೆ ಅತ್ಯಾಚಾರವೇ ನಡೆದಿಲ್ಲ ಅಂತ ಹೇಳಿದ್ದರು. ಮತ್ತೊಂದುಕಡೆ ಪೊಲೀಸರಿಗೆ ಪತ್ರ ಬರೆದಿದ್ದ ಪ್ರಮುಖ ಆರೋಪಿ, ಯುವತಿಯ ಪೋಷಕರೇ ಆಕೆಯನ್ನು ಕೊಂದು, ನಮ್ಮನ್ನ ಸಿಲುಕಿಸಲು ಯತ್ನಿಸುತ್ತಿದ್ದಾರೆ ಅಂತ ಆರೋಪ ಮಾಡಿದ್ದ.

ಇದೇ ವಿಚಾರದಲ್ಲಿ ರಾಜಕೀಯ ಕೂಡ ಜೋರಾಗಿತ್ತು. ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತ ವಿಪಕ್ಷಗಳು ಆರೋಪ ಮಾಡಿ ಭಾರಿ ಪ್ರತಿಭಟನೆ ನಡೆಸಿದವು. ಯುಪಿ ಮಾತ್ರವಲ್ಲ ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜಸ್ಥಾನದಲ್ಲೂ ಇಂತಹ ಪ್ರಕರಣ ಬೆಳಕಿಗೆ ಬಂದಿದೆ. ರಾಹುಲ್ ಗಾಂಧಿ ಅಲ್ಲಿಗೆ ಹೋಗಿ ಯಾಕೆ ಪ್ರತಿಭಟನೆ ಮಾಡಲ್ಲ ಅಂತ ಬಿಜೆಪಿ ಸವಾಲು ಹಾಕಿತ್ತು. ಇದೆಲ್ಲದರ ನಡುವೆ ಈಗ ಪ್ರಕರಣ ಸಿಬಿಐ ಕೈ ಸೇರಿದೆ.

-masthmagaa.com

Contact Us for Advertisement

Leave a Reply