ಚೆನೈನಲ್ಲಿ ಮಿತಿಮೀರಿದ ʻಮಿಚಾಂಗ್‌ʼ ಚಂಡಮಾರುತ! ಆಂಧ್ರ ಕಡೆ ದೃಷ್ಟಿ ಇಟ್ಟಿದೆ ಉಗ್ರ ಸೈಕ್ಲೋನ್‌!

masthmagaa.com:

ಬಂಗಾಳ ಕೊಲ್ಲಿಯಲ್ಲಿ ಎದ್ದಿರೋ ಮಿಚಾಂಗ್‌ ಚಂಡಮಾರುತ ಇದೀಗ ತೀವ್ರ ಸ್ವರೂಪ ಪಡೆದಿದ್ದು, ಚೆನ್ನೈನಲ್ಲಿ ಭಾರೀ ಮಳೆಯಾಗ್ತಿದೆ. ಬಿಟ್ಟು ಬಿಡದೆ ಸುರಿತಿರೋ ಮಳೆಯಿಂದಾಗಿ ಅಲ್ಲಿನ ಹಲವು ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದೆ. ಇದ್ರಿಂದ ಚೆನ್ನೈನ ತಗ್ಗು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಪ್ರವಾಹ ಸಂಭವಿಸಿದೆ. ಪರಿಣಾಮ ಇದುವರೆಗೆ 3 ಜನ ಚೆನೈನಲ್ಲಿ ಮೃತಪಟ್ಟಿರೋದು ವರದಿಯಾಗಿದೆ. ಈ ಚಂಡಮಾರುತ ಡಿಸೆಂಬರ್‌ 5 ಅಂದ್ರೆ ನಾಳೆ ಮಧ್ಯಾಹ್ನದೊಳಗಾಗಿ ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯನ್ನ ಕ್ರಾಸ್‌ ಮಾಡುತ್ತೆ. ಅಲ್ಲಿನ ನೆಲ್ಲೂರು ಮತ್ತು ಮಚಲಿಪಟ್ಟಣಂ ನಡುವೆ ಭೂಕುಸಿತ ಉಂಟಾಗುವ ಸಾಧ್ಯತೆಯಿದೆ ಅಂತ ಎಚ್ಚರಿಕೆ ನೀಡಲಾಗಿದೆ. ಅಂದ್ಹಾಗೆ ಮಿಚಾಂಗ್‌ ಚಂಡಮಾರುತ ಎಷ್ಟರ ಮಟ್ಟಿಗೆ ಚೆನ್ನೈನ ಮೇಲೆ-ಕೆಳಗೆ ಮಾಡ್ಬಿಟ್ಟಿದೆ ಅಂದ್ರೆ, ಮುಂದಿನ 23 ಗಂಟೆಗಳ ಕಾಲ ಅಲ್ಲಿನ ಏರ್‌ಪೋರ್ಟ್‌ ಕಂಪ್ಲೀಟ್‌ ಬಂದ್‌ ಮಾಡೋದಕ್ಕೆ ಆದೇಶಿಸಲಾಗಿದೆ. ಯಾಕಂದ್ರೆ ಏರ್‌ಪೋರ್ಟ್‌ ಕೂಡ ಸಂಪೂರ್ಣವಾಗಿ ನೀರಿನಿಂದ ತುಂಬಿ ಹೋಗಿದೆ. ಈ ಕಾರಣಕ್ಕಾಗಿ ವಿಮಾನಗಳ ಲ್ಯಾಂಡಿಂಗ್‌ ಅಥ್ವಾ ಟೇಕ್‌ ಆಫ್‌, ಎರಡನ್ನೂ ನಿಷೇಧಿಸಲಾಗಿದೆ. ಪರಿಣಾಮ ಚೆನ್ನೈ ಏರ್‌ಪೋರ್ಟ್‌ಗೆ ಬಂದಿಳಿಬೇಕಾದ ಒಟ್ಟು 33 ಫ್ಲೈಟ್‌ಗಳನ್ನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ಗೆ ಡೈವರ್ಟ್‌ ಮಾಡಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನ ಅಧಿಕಾರಿಗಳ ಪ್ರಕಾರ, ದೇಶಿಯ ಮತ್ತು ಅಂತಾರಾಷ್ಟ್ರೀಯ ಎರಡೂ ವಿಮಾನಗಳನ್ನ ಡೈವರ್ಟ್‌ ಮಾಡಲಾಗ್ತಿದೆ. ಜೊತೆಗೆ ಅಲ್ಲಿನ ಕೆಲ ರೈಲು ಸೇವೆಗಳನ್ನ ಕೂಡ ಸದ್ಯದ ಮಟ್ಟಿಗೆ ಕ್ಯಾನ್ಸಲ್‌ ಮಾಡಲಾಗಿದೆ. ಜೊತೆಗೆ ಕೆಲ ರೈಲು ಮಾರ್ಗವನ್ನ ಸೇಫ್ಟಿಗಾಗಿ ಬದಲಾವಣೆ ಮಾಡಲಾಗಿದೆ. ಇದ್ರೊಂದಿಗೆ ಸೈಕ್ಲೋನ್‌ ಹೊಡೆತಕ್ಕೆ ರಸ್ತೆಗಳಲ್ಲಿ ಉರುಳಿ ಬಿದ್ದ ಸುಮಾರು 16 ಮರಗಳನ್ನ ಕ್ಲಿಯರ್‌ ಮಾಡಲಾಗಿದ್ದು, ಸುಮಾರು 17 ಸುರಂಗಮಾರ್ಗಗಳನ್ನ ಕೂಡ ಕ್ಲೋಸ್‌ ಮಾಡಲಾಗಿದೆ. ಎಮರ್ಜೆನ್ಸಿ ಕಾರಣಕ್ಕಾಗಿ ಚೆನ್ನೈನ ಏರ್‌ಪೋರ್ಟ್‌ನಿಂದ ಅಣ್ಣಾಸಲೈವರೆಗೂ ʻಗ್ರೀನ್‌ ಕಾರಿಡಾರ್‌ʼ ವ್ಯವಸ್ಥೆ ಕಲ್ಪಿಸಲಾಗಿದೆ. ಇನ್ನು ಮಿಚಾಂಗ್‌ ಸೈಕ್ಲಾನ್‌ ಉಗ್ರ ರೂಪ ತಾಳ್ತಿರೋದ್ರಿಂದ ತಮಿಳುನಾಡು ಸರ್ಕಾರ ಜನರ ಸೇಫ್ಟಿಗಾಗಿ ಗೈಡ್‌ಲೈನ್ಸ್‌ ರಿಲೀಸ್‌ ಮಾಡಿದೆ. ಇದ್ರಲ್ಲಿ ಚೆನೈ ಜನರು ಕೆಲಸ ಮಾಡೋಕೆ ಹೊರಗಡೆ ಹೋಗದೇ, ಮನೆಯೊಳಗೆ ಸುರಕ್ಷಿತವಾಗಿರಿ. ಮನೆ ಬಾಗಿಲು ಮತ್ತು ಕಿಟಕಿಗಳನ್ನ ಕ್ಲೋಸ್‌ ಮಾಡಿ ಅಂತ ಸಲಹೆ ನೀಡಲಾಗಿದೆ. ಜೊತೆಗೆ ಇಂಪಾರ್ಟೆಂಟ್‌ ಡಾಕ್ಯುಮೆಂಟ್ಸ್‌, ಬೆಲೆಬಾಳೋ ವಸ್ತುಗಳನ್ನ ಜೋಪಾನವಾಗಿ ನೀರು ತಾಗ್ದಂತೆ ಇಟ್ಕೊಳ್ಳಿ. ಅಗತ್ಯವಿರೋ ಔಷಧಿಗಳೊಂದಿಗೆ ತುಂಬಾ ದಿನಗಳ ತನಕ ಸ್ಟೋರ್‌ ಮಾಡಿಕೊಳ್ಳಬಹುದಾದ, ತಿನ್ನೋದಕ್ಕೆ ಮತ್ತು ಕುಡಿಯೋದಕ್ಕೆ ಬೇಕಾಗೋ ಐಟಮ್‌ಗಳನ್ನ ತಂದು ಸಂಗ್ರಹಿಸಿ ಇಟ್ಕೊಳ್ಳಿ ಅಂತ ಅಲ್ಲಿನ ಸರ್ಕಾರ ಜನರಿಗೆ ಅಡ್ವೈಸ್‌ ಮಾಡಿದೆ. ಇನ್ನು ತಮಿಳುನಾಡು ಸರ್ಕಾರ ಪ್ರೈವೇಟ್‌ ಕಂಪನಿಗಳಿಗೆ ತಮ್ಮ ಉದ್ಯೋಗಿಗಳಿಗೆ ಆದಷ್ಟು ವರ್ಕ್‌ ಫ್ರಮ್‌ ಮಾಡೋದಕ್ಕೆ ಅನುವು ಮಾಡಿಕೊಡಿ ಅಂತ ಮನವಿ ಮಾಡಿಕೊಂಡಿದೆ. ಜೊತೆಗೆ ಚೆನೈ ಹಾಗೂ ಇತರೆ ಮೂರು ಜಿಲ್ಲೆಗಳಿಗೆ ನಾಳೆ ಪಬ್ಲಿಕ್‌ ರಜೆ ಕೂಡ ಘೋಷಿಸಲಾಗಿದೆ.

-masthmagaa.com

Contact Us for Advertisement

Leave a Reply