ಯುಎಇನಲ್ಲಿ ಭಾರೀ ಮಳೆ! ಹಸಿರಾಯ್ತು ಸೌದಿಯ ಮರುಭೂಮಿ!

masthmagaa.com:

ಕೇವಲ ಪ್ರಬಂಧ ಬರೆಯೋ ವಿಷಯವಾಗಿದ್ದ ಕ್ಲೈಮೇಟ್‌ ಚೇಂಜ್‌ ಈಗ ರಿಯಾಲಿಟಿಯಾಗ್ತಿದೆ. ಸಾವಿರಾರು ಕಿಲೋಮೀಟರ್‌ವರೆಗು ಬರೀ ಮರುಭೂಮಿಯೇ ತುಂಬಿರೋ ಮಿಡಲ್‌ ಈಸ್ಟ್‌ನಲ್ಲಿ ಮಳೆ ಭೋರ್ಗರಿತಾ ಇದೆ. ಯುಎಇನಲ್ಲಿ ಭಾರೀ ಮಳೆ ಸುರಿದ ಪರಿಣಾಮ, ದುಬೈನಲ್ಲಿ ಬೃಹತ್‌ ಪ್ರವಾಹ ಉಂಟಾಗಿದೆ. ವಾರ್ಷಿಕವಾಗಿ ಆಗೋ ಮಳೆಗಿಂತ ಒಂದುವರೆ ಪಟ್ಟು ಹೆಚ್ಚಿನ ಮಳೆ ಒಂದೇ ದಿನ ಸುರಿದಿದೆ. ಹವಾಮಾನ ಇಲಾಖೆ ಪ್ರಕಾರ ಯುಎಇನಲ್ಲಿ 127 ಮಿಮೀ ಅಂದ್ರೆ 5 ಇಂಚು ಮಳೆಯಾಗಿದೆ. ಖತಮ್‌ ಅಲ್‌ ಶಕ್ಲಾ ಅನ್ನೋ ಜಾಗದಲ್ಲಂತೂ 254 ಮಿಮೀ ಮಳೆಯಾಗಿದೆ. ಇದ್ರಿಂದ ಏರ್‌ಪೋರ್ಟ್‌, ಹೇವೇ, ಮೆಟ್ರೋ, ದೊಡ್ಡ ದೊಡ್ಡ ಶಾಪಿಂಗ್‌ ಕಾಂಪ್ಲೆಕ್ಸ್‌ಗಳೆಲ್ಲಾ ಜಲಾವೃತವಾಗಿವೆ. ಲಕ್ಷುರಿ ಕಾರುಗಳೆಲ್ಲ ನೀರಿನಲ್ಲಿ ತೇಲ್ತಿವೆ. ಜನ ಬೋಟ್‌ಗಳಲ್ಲಿ ಓಡಾಡ್ತಿದ್ದಾರೆ. ವಿಶ್ವವಿಖ್ಯಾತ ಬುರ್ಜ್‌ ಖಲೀಫಾ ಕಟ್ಟಡಕ್ಕೆ ಕೂಡ ಸಿಡಿಲು ಬಡಿದಿದೆ. ಆದ್ರೆ ಯಾವುದೇ ಅನಾಹುತ ಆಗಿಲ್ಲ. ನೀರಿನಲ್ಲಿ ಮುಳಿಗಿದ್ರಿಂದ ದುಬೈನ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನ ಸುಮಾರು 500 ವಿಮಾನಗಳು ತಮ್ಮ ಹಾರಾಟವನ್ನ ಸ್ಥಗಿತಗೊಳಿಸಿವೆ. ಯುಎಇನ ಶಾಲಾಕಾಲೇಜುಗಳೆಲ್ಲ ಬಂದ್‌ ಆಗಿವೆ. ಸರ್ಕಾರಿ ನೌಕರರಿಗೆ ಮನೆಯಲ್ಲೇ ಕೂತು ಕೆಲಸ ಮಾಡಲು ಸೂಚಿಸಲಾಗಿದೆ. ಅಲ್ಲಿನ ಹವಾಮಾನ ಇಲಾಖೆ ಪ್ರಕಾರ 75 ವರ್ಷದಲ್ಲೇ ಇದು ದಾಖಲೆಯ ಮಳೆ ಅಂತ ಹೇಳಲಾಗ್ತಿದೆ. 1949ರಲ್ಲಿ ಕೊನೇ ಬಾರಿ ಈ ರೀತಿ ಮಳೆಯಾಗಿತ್ತು. ಪಕ್ಕದ ಸೌದಿ, ಬಹ್ರೇನ್‌, ಓಮನ್‌ನಲ್ಲಿ ಕೂಡ ಮಳೆ ಸುರಿದಿದೆ. ಓಮನ್‌ನಲ್ಲಿ ಮಳೆಯಿಂದಾಗಿ 18 ಜನ ಮೃತಪಟ್ಟಿದ್ದಾರೆ. ಆಶ್ಚರ್ಯವೆಂಬಂತೆ ಇತ್ತೀಚೆಗೆ ಸುರೀತಿರೋ ಮಳೆಯಿಂದ ಇದೀಗ ಸೌದಿಯ ಮರುಭೂಮಿಯಲ್ಲೂ ಕೂಡ ಹಸಿರು ಚಿಗುರೊಡೆದಿದೆ. ಸೌದಿಯ ಈ ಬದಲಾವಣೆ ಅಲ್ಲಿನ ಸ್ಥಳೀಯರು ಮತ್ತು ಪ್ರವಾಸಿಗರನ್ನ ಆಕರ್ಷಿಸುತ್ತಿದೆ. ಪ್ರಮುಖವಾಗಿ ಅಲ್ಲಿನ ಪವಿತ್ರ ತಾಣಗಳಾದ ಮೆಕ್ಕಾ ಮತ್ತು ಮದೀನ ಹಸಿರಿನಲ್ಲಿ ತುಂಬ್ಕೊಂಡಿದೆ.

-masthmagaa.com

Contact Us for Advertisement

Leave a Reply